
ಆನೇಕಲ್ : ಮಾನವೀಯತೆಯನ್ನು ಮರೆತ ಇಬ್ಬರು ವೃದ್ಧರು ಸಾಕು ನಾಯಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ತಮಿಳುನಾಡಿನ ಹೊಸೂರು ಸಮೀಪದ ಇರುತುಕೋಟೆ ಗ್ರಾಮದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಣಿಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೊಸೂರು ಸಮೀಪದ ಇರುತುಕೋಟೆ ಗ್ರಾಮದಲ್ಲಿ ನಾಯಿ ಕೋಳಿ ಮತ್ತು ಮೇಕೆಗಳ ಮೇಲೆ ದಾಳಿ ಮಾಡುತ್ತಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಇಬ್ಬರು ವೃದ್ಧರು ನಾಯಿಯನ್ನು ಕಟ್ಟಿಹಾಕಿ ದೊಣ್ಣೆಯಿಂದ ಬರ್ಬರವಾಗಿ ಹೊಡೆದಿದ್ದಾರೆ. ನಾಯಿಯ ಮೇಲೆ ನಡೆಯುತ್ತಿದ್ದ ಹಲ್ಲೆ ಸಮಯದಲ್ಲಿ ಅದು ನೋವಿನಿಂದ ಕಿರುಚಾಡುತ್ತಿತ್ತು. ಈ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಹಿಡಿಯಲ್ಪಟ್ಟು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪರಿಣಾಮ ದೊಡ್ಡ ಮಟ್ಟದಲ್ಲಿ ಟೀಕೆ ಟಿಪ್ಪಣಿಗಳಿಗೆ ಕಾರಣವಾಯಿತು.
ವಿಡಿಯೋ ವೈರಲ್ ಆದ ನಂತರ, ಕೃಷ್ಣಗಿರಿ ಜಿಲ್ಲಾ ಪ್ರಾಣಿ ಹಿಂಸೆ ತಡೆ ಸಂಘದ ಸದಸ್ಯರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ನಾಯಿಯನ್ನು ರಕ್ಷಿಸಿದರು. ತೀವ್ರ ಗಾಯಗೊಂಡಿದ್ದ ಆ ನಾಯಿಗೆ ಸಮೀಪದ ಪ್ರಾಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಡೆಂಕಣಿಕೋಟೆ ಪೊಲೀಸ್ ಠಾಣೆಯಲ್ಲಿ ನಾಯಿಯ ಮಾಲೀಕ ಹಾಗೂ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಇವರ ವಿರುದ್ಧ ಕಾನೂನು ಕ್ರಮ ಜರುಗುತ್ತಿದೆ.
ಈ ಹಿಂಸಾಚಾರವು ಮಾನವೀಯತೆ ಹಾಗೂ ಪ್ರಾಣಿಗಳ ಮೇಲಿನ ಕರುಣೆ ಕುರಿತಾಗಿ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಪ್ರಾಣಿಗಳನ್ನು ದೌರ್ಜನ್ಯದಿಂದ ಕಾಪಾಡುವಂತಹ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಹಿಸಿದ್ದಾರೆ.