ಶಿಕ್ಷಣ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ ಜೀವನವನ್ನು ಸದೃಢವಾಗಿ ರೂಪಿಸಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಮಧುಗಿರಿ : ಶಿಕ್ಷಣ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ ಜೀವನವನ್ನು ಸದೃಢವಾಗಿ ರೂಪಿಸಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಶನಿವಾರದಂದು ಪಟ್ಟಣದ ಶನಿಮಹಾತ್ಮ ದೇಗುಲದ ಬಳಿ ದೇವರಾಜ ಅರಸು ನಿಗಮದಿಂದ 4.6 ಕೋಟಿ ರು.ವೆಚ್ಚದ ಹಿಂದುಳಿದ ವರ್ಗದ ಮಕ್ಕಳ ವಿದ್ಯಾರ್ಥಿ ನಿಲಯ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರವಾಸಿ ಮಂದಿರದ ಬಳಿ 8.5 ಕೋಟಿ ವೆಚ್ಚದ ಪ.ಪಂಗಡದ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.
undefined
ಶಿಕ್ಷಣ ವಿದ್ಯಾರ್ಥಿಗಳಿಗೆ ಎಲ್ಲ ಗೌರವಗಳನ್ನು ತಂದುಕೊಡಲಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಬದುಕಲು ಶಿಕ್ಷಣವೇ ಶಕ್ತಿಯಾಗಿದ್ದು, ಅದು ಸಂಸ್ಕಾರಯುತವಾಗಿರಲಿ.
ಮುಖ್ಯವಾಗಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಕ್ಷೇತ್ರದಲ್ಲಿ ವ್ಯವಸಾಯವೇ ಪ್ರಧಾನ ಕಸುಬಾಗಿದ್ದು ಶಿಕ್ಷಣವಿದ್ದರೆ ಮಾತ್ರ ಬದುಕು. ಇದನ್ನರಿತು ಹೆತ್ತವರ ಹಾಗೂ ಸಮಾಜದ ಋುಣ ತೀರಿಸುವಂತಹ ಶಿಕ್ಷಣ ಪಡೆಯಿರಿ. ಒಳ್ಳೆಯ ಸಮಾಜ ಕಟ್ಟಲು ಶಿಕ್ಷಣ ಮುಖ್ಯವಾಗಿದೆ. ನಾನೂ ಕೂಡ ನಾಯಕ ಸಮಾಜದವರ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡಿದ್ದೇನೆ. ಇದನ್ನು ಹೇಳಿಕೊಳ್ಳಲು ನನಗೆ ಯಾವುದೇ ಅಂಜಿಕೆಯಿಲ್ಲ. ನೀವು ಸಹ ಸರ್ಕಾರಿ ಶಾಲೆ ಹಾಗೂ ಕನ್ನಡ ಮಾಧ್ಯಮವೆಂದು ಕೀಳಿರಿಮೆ ಇಟ್ಟುಕೊಂಡು ಅಭ್ಯಾಸ ಮಾಡಬೇಡಿ. ವಾರ್ಡ್‌ನ್‌ಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಶಿಕ್ಷಣ ದಲ್ಲಿ ಮಕ್ಕಳು ಅಭಿವೃದ್ಧಿಯಾದರೆ ಅದು ಕ್ಷೇತ್ರದ ಅಭಿವೃದ್ಧಿ. ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಹಾಸ್ಟೆಲ್‌ಗಳು ಸ್ವಲ್ಪ ನಿರ್ಜನ ಪ್ರದೇಶದಲ್ಲಿದ್ದು ಬೆಳಿಗ್ಗೆ, ಸಂಜೆ ಪೊಲೀಸರು ಬೀಟ್ ಹಾಕಬೇಕು. ವಾರ್ಡನ್‌ಗಳು ಸಹ ಸದಾ ಹಾಸ್ಟೆಲ್‌ನಲ್ಲಿ ಇರಬೇಕು ಎಂದ ವೀರಭದ್ರಯ್ಯ 4.6 ಕೋಟಿ ವೆಚ್ಚದ ಹಿಂದುಳಿದ ಮಕ್ಕಳ ಹಾಸ್ಟೆಲ್ ತಲಾ 4.15 ಕೋಟಿ ವೆಚ್ಚದ ಎರಡು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್, ಹೊರಗುತ್ತಿಗೆ ಅಡುಗೆಯವರ ವೇತನ ಬಿಡುಗಡೆಗೆ ಒತ್ತಾಯಿಸಿದ್ದು, ವೇತನ ನೀಡದ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಯುಗಾದಿ ಹಬ್ಬದೊಳಗೆ ವೇತನ ಕೊಡಿಸುವ ಕೆಲಸ ಮಾಡುವುದಾಗಿ ಶಾಸಕ ಎಂ.ವಿ.ವೀರಭದ್ರಯ್ಯ ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ, ಈ ಕಟ್ಟಡಕ್ಕೆ ಜಾಗ ಹಾಗೂ ಅನುದಾನ ನೀಡಿದ್ದು ಮಾಜಿ ಸಿಎಂ ಕುಮಾರಸ್ವಾಮಿ ಕಾಲದಲ್ಲಿ. ಶಾಸಕರು ನುಡಿದಂತೆ ನಡೆದಿದ್ದು ದಲಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಹೈಟೆಕ್ ಹಾಸ್ಟೆಲ್ ನಿರ್ಮಿಸಿ ಶಾಶ್ವತ ನೆಲೆ ಕಲ್ಪಿಸಿದ್ದಾರೆ ಎಂದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀಧರ್, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು, ಎಸ್ಟಿಘಟಕದ ಅಧ್ಯಕ್ಷ ರವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮಯ್ಯ, ಪುರಸಭೆ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಸಿಎಂ ಕಲ್ಯಾಣಾಧಿಕಾರಿ ಜಯರಾಮಯ್ಯ, ಪುರಸಭೆ ಮುಖ್ಯಾಧಿಕಾರಿ ನಜ್ಮಾ, ಪುರಸಭಾ ಸದಸ್ಯ ಕೆ.ನಾರಾಯಣ್, ಸಿಡಿಪಿಓ ಅನಿತಾ, ಟಿಎಚ್‌ಓ ಡಾ.ರಮೇಶ್, ರೇಷ್ಮೆ ಇಲಾಖೆಯ ಎಡಿ ಲಕ್ಷ್ಮೀನರಸಯ್ಯ, ಮುಖಂಡರಾದ ಬಿಜವರ ಶ್ರೀನಿವಾಸ್, ಮೋಹನ್, ಮಂಜುನಾಥ್, ಗೋವಿಂದರಾಜು, ನಿಲಯ ಪಾಲಕರಾದ ಚಿಕ್ಕರಂಗಯ್ಯ, ಚಂದ್ರಶೇಖರ್ ರೆಡ್ಡಿ, ಜಯಮ್ಮ, ರಾಮಾಂಜನೇಯ, ಪಿಎಸೈ ಅಮ್ಮಣಗಿ, ಸಮೀವುಲ್ಲಾ ಹಾಗೂ ಇತರರು ಇದ್ದರು.
ಶಿಕ್ಷಣ ಕದಿಯಲಾರದ ವಸ್ತು. ಅದನ್ನು ಸಂಪಾದಿಸಲು ಕಠಿಣ ಪರಿಶ್ರಮ ಅಗತ್ಯವಾಗಿದ್ದು, ಸಾಧಿಸಲು ಎಲ್ಲ ಮಕ್ಕಳು ಗುರಿಯೊಂದಿಗೆ ಶಿಕ್ಷಣ ಪಡೆಯಬೇಕು. ಇದರಿಂದ ಮಣ್ಣಿನ ಋುಣ ತೀರಿಸಲು ಮುಂದಾಗಬೇಕು.- ಎಂ.ವಿ.ವೀರಭದ್ರಯ್ಯ, ಶಾಸಕ
ತಾಲೂಕಿನ ಬಡ ಮಕ್ಕಳಿಗೆ ಇಂತಹ ಉತ್ತಮ ದರ್ಜೆಯ ಹಾಸ್ಟೆಲ್ ನಿರ್ಮಿಸಿರುವ ಶಾಸಕರಿಗೆ ಮೊದಲು ಧನ್ಯವಾದಗಳು. ಹಾಗೆಯೇ ಬಡತನ ಶಿಕ್ಷಣಕ್ಕೆ ಅಡ್ಡಿಯಾಗದು. ನಿತ್ಯ ಕಠಿಣ ಪರಿಶ್ರಮವೇ ನಿಮಗೆ ದಾರಿದೀಪವಾಗಲಿದ್ದು ಯಶಸ್ಸು ಸಿಗಲಿದೆ. ತಾಲೂಕಿನ ಕೆಲವು ಅಧಿಕಾರಿಗಳು ಆಗಾಗ್ಗೆ ಹಾಸ್ಟೆಲ್‌ಗೆ ಭೇಟಿ ನೀಡಿ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡುವ ಕೆಲಸ ಆರಂಭವಾಗಲಿ.
ಸಿಕ್ಬತ್ ವುಲ್ಲಾ ತಹಸೀಲ್ದಾರ್