ಇಡಿ ಬಿಜೆಪಿ ಕೈಗೊಂಬೆ; ಕೇಂದ್ರದಿಂದ ದ್ವೇಷದ ರಾಜಕಾರಣ

By Kannadaprabha NewsFirst Published Sep 5, 2019, 8:02 AM IST
Highlights

ಜಾರಿ ನಿರ್ದೇಶನಾಲಯ ಬಿಜೆಪಿಯ ಕೈಗೊಂಬೆ ಎಂದು ಮಂಡ್ಯದಲ್ಲಿ ಡಿ. ಕೆ. ಶಿವಕುಮಾರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಇಡಿ ಇಲಾಖೆ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರನ್ನು ಬಂಧಿಸಿದ ಕ್ರಮ ವಿರೋಧಿಸಿ ಒಕ್ಕಲಿಗರ ಸಂಘ ಸೇರಿದಂತೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ನೂರಾರು ಕಾರ್ಯಕರ್ತರು ಮಳವಳ್ಳಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಮಂಡ್ಯ(ಸೆ.05): ಕೇಂದ್ರದ ಇಡಿ ಇಲಾಖೆ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರನ್ನು ಬಂಧಿಸಿದ ಕ್ರಮ ವಿರೋಧಿಸಿ ಒಕ್ಕಲಿಗರ ಸಂಘ ಸೇರಿದಂತೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ನೂರಾರು ಕಾರ್ಯಕರ್ತರು ಮಳವಳ್ಳಿಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಕಚೇರಿಯಿಂದ ಮೆರವಣಿಗೆ ಹೊರಟ ನೂರಾರು ಪ್ರತಿಭಟನಾಕಾರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಆನಂತ್‌ ರಾಮ್‌ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಬೃಹತ್‌ ಪ್ರತಿಭಟನೆ ನಡೆಸಿದರು.

ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವಡ್ಡರಹಳ್ಳಿ ನಾಗೇಶ್‌ ಮಾತನಾಡಿ, ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರ ಶಕ್ತಿಯನ್ನು ಕುಂದಿಸುವ ಸಲುವಾಗಿ ಇಡಿ ಅಧಿಕಾರಿಗಳಿಂದ ಸತತ 4 ದಿನಗಳ ಕಾಲ ತನಿಖೆ ನಡೆಸಿದ ನಂತರ ಉದ್ದೇಶ ಪೂರ್ವಕವಾಗಿಯೇ ಬಂಧಿಸಲಾಗಿದೆ ಎಂದು ಕಿಡಿ ಕಾರಿದರು.

ಅಧಿಕಾರ ಯಾರಿಗೂ ಶಾಶ್ವತವಲ್ಲ:

ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುವುದನ್ನು ಬಿಜೆಪಿ ನಾಯಕರು ಅರಿಯಬೇಕಿದೆ. ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿದ ಕೂಡಲೇ ಅವರ ಶಕ್ತಿ ಕಡಿಮೆಯಾಗುತ್ತದೆ ಎಂಬ ಭ್ರಮೆಯಲ್ಲಿರುವ ಬಿಜೆಪಿ ನಾಯಕರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಿಕೆಶಿಗೆ ಎಲ್ಲಾ ಪಕ್ಷಗಳಲ್ಲೂ ಅಭಿಮಾನಿಗಳಿದ್ದಾರೆ:

ಡಿ.ಕೆ. ಶಿವಕುಮಾರ್‌ರವರು ಕೇವಲ ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ ಅಭಿಮಾನಿಗಳನ್ನು ಹೊಂದಿಲ್ಲ. ಎಲ್ಲಾ ಪಕ್ಷದ ಹಾಗೂ ಎಲ್ಲಾ ಸಮುದಾಯದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಹಿಂದೆ ದೊಡ್ಡ ಜನಶಕ್ತಿಯೇ ನಿಲ್ಲಲ್ಲಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿಶ್ವಾಸ್‌ ಮಾತನಾಡಿ, ಕಾಂಗ್ರೆಸ್‌ ನಾಯಕ ಡಿ,ಕೆ.ಶಿವಕುಮಾರ್‌ ಅವರನ್ನು ಕಾದು ಹೊಂಚು ಹಾಕಿ ಬಂಧಿಸಲಾಗಿದೆ. ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ದಿಕ್ಕಾರ ಎಂದರು. 4 ದಿನವು ವಿಚಾರಣೆಗೆ ಒಳಗಾಗಿ ಎಲ್ಲಾ ರೀತಿಯ ತನಿಖೆಗೆ ಸಹಕಾರ ನೀಡಿದವರನ್ನು ಬಂಧಿ​ಸಿರುವುದು ಖಂಡನೀಯ. ಇಡಿ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿದ್ದು, ಬಿಜೆಪಿ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆಂದು ಕಿಡಿಕಾರಿದರು.

ಧಾನಿ ನರೇಂದ್ರ ಮೋದಿ, ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರವರ ಭಾವಚಿತ್ರಕ್ಕೆ ಪಾದರಕ್ಷೆಯಲ್ಲಿ ಹೊಡೆದು ನಂತರ ದಹಿಸಿದರು. ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಮಂಡ್ಯ ಗಣೇಶೋತ್ಸವದಲ್ಲಿ ಭಕ್ತರಿಗೆ ಸಿಕ್ತು ವಿಶೇಷ ಪ್ರಸಾದ

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮಾರ್ಕಲು ಮಾದು, ಜೆಡಿಎಸ್‌ ತಾಲೂಕು ಅಧ್ಯಕ್ಷ ಮಲ್ಲೇಗೌಡ, ಪ್ರಪ್ರತಿಭಟನೆಯಲ್ಲಿ ಮುಖಂಡರಾದ ದೇವರಾಜು, ಮಹೇಶ್‌ ಕುಮಾರ್‌, ಚಿಕ್ಕರಾಜು, ದೊಡ್ಡಯ್ಯ, ಪುಟ್ಟರಾಮು, ವಿಶ್ವ, ಚೌಡಯ್ಯ, ಎಂ.ಎಚ್‌.ಕೆಂಪಯ್ಯ, ಎಳೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!