ಮದ್ಯ ಮಾರಾಟಕ್ಕೆ ಬಿತ್ತು ಬ್ರೇಕ್ :ಕಟ್ಟುನಿಟ್ಟಿನ ಆದೇಶ

By Kannadaprabha News  |  First Published Sep 17, 2020, 3:34 PM IST

ಮದ್ಯ ಮಾರಾಟಕ್ಕೆ ಬಿತ್ತು ಬ್ರೇಕ್, ಯಾವುದೆ ಕಾರಣಕ್ಕೂ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಮಾರಾಟ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.


ಹೊನ್ನಾಳಿ(ಸೆ.17):  ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕು ವ್ಯಾಪ್ತಿಯಲ್ಲಿನ ದಲಿತರ ಕೇರಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಾರದು ಎನ್ನುವ ದಲಿತ ಮುಖಂಡರ ದೂರಿನ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾರೂ ಮದ್ಯ ಮಾರಾಟ ಮಾಡಬಾರದು ಎಂದು ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್‌ ಜಿ ಮನ್ನೊಳಿ ಹೇಳಿದರು. 

ತಾಲೂಕು ಕಚೇರಿ ಸಭಾಂಗಣದಲ್ಲಿ ಪೊಲೀಸ್‌ ಇಲಾಖೆಯಿಂದ ಆಯೋಜಿಸಲಾಗಿದ್ದ ಅವಳಿ ತಾಲೂಕು ಎಸ್ಸಿ, ಎಸ್ಟಿಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Tap to resize

Latest Videos

ಈ ಹಿಂದೆ ದಲಿತರ ಕೇರಿಗಳಲ್ಲಿ ಅವ್ಯಾಹತವಾಗಿ ಮದ್ಯ ಮಾರಾಟದ ಆರೋಪ ಕೇಳಿ ಬಂದಿದ್ದು, ಇನ್ನು ಮುಂದೆ ದೂರುಗಳು ಬಂದರೆ ಸಹಿಸುವುದಿಲ್ಲ ಎಂದರು. ಇದೇ ವೇಳೆ ಚೀಲೂರು ಗ್ರಾಮದಲ್ಲಿ ಅಂಬೇಡ್ಕರ್‌ ಪ್ರತಿಮೆ ಧ್ವಂಸ ಮಾಡಿದ ವಿಚಾರವನ್ನು ಚೀಲೂರು ಎ.ಕೆ. ಕಾಲೋನಿ ಮುಖಂಡರು ಪ್ರಸ್ತಾಪಿಸಿದರು. ತನಿಖೆ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಮುನ್ನೋಳಿ ಹೇಳಿದರು.

ತಾಲೂಕಿನ ಕೆಲವು ಗ್ರಾಮಗಳ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ಕೊಡುತ್ತಿಲ್ಲ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಯಾವ ಊರು, ಯಾವ ದೇವಸ್ಥಾನ ಎಂದು ಖಚಿತವಾಗಿ ಹೇಳಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ, ಸುಮ್ಮನೆ ದೂರಿದರೆ ಪ್ರಯೋಜನಲ್ಲ ಎಂದು ಸ್ಪಷ್ಟಪಡಿಸಿದರು.

ಹೆಂಡತಿ ಸುತ್ತಿಗೆ ಪೆಟ್ಟಿಗೆ ಸತ್ತು ಮಲಗಿದ ಕುಡುಕ ಗಂಡ! .

ತಾಲೂಕಿನ ಕಮ್ಮಾರಗಟ್ಟೆಎ.ಕೆ.ಕಾಲೋನಿಗೆ ಹೋಗಲು ಸರಿಯಾದ ದಾರಿ ಇಲ್ಲ. ಬಡವರು ದಲಿತರು ಶೌಚಾಲಯ ಹಾಗೂ ಮನೆ ಕಟ್ಟಿಕೊಳ್ಳಲು ಗಾಡಿಗಳಲ್ಲಿ ಮರಳು ತಂದ ಸಂದರ್ಭದಲ್ಲಿ ಹಾಕಲಾಗಿರುವ ಕೇಸ್‌ ಗಳನ್ನು ತೆರವುಗೊಳಿಸಬೇಕು ಎಂದು ಹೇಳಿದಾಗ ಈ ವಿಷಯವನ್ನು ಕಾನೂನು ವ್ಯಾಪ್ತಿಯಲ್ಲಿ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು. ಇದೇ ವೇಳೆ ಕೆಲ ದಲಿತ ಮುಖಂಡರ ಜಮೀನುಗಳಲ್ಲಿನ ವ್ಯಾಜ್ಯಗಳ ಕುರಿತು ಸಭೆಯಲ್ಲಿ ವ್ಯಾಪಕವಾಗಿ ಚರ್ಚೆ ನಡೆಸಲಾಯಿತು. 

ದಲಿತ ಮುಖಂಡ ದಿಡಗೂರು ತಮ್ಮಣ್ಣ, ಮಾರಿಕೊಪ್ಪ ಮಂಜು, ಬಡಾವಣೆ ರಾಜು, ಬೆನಕನಹಳ್ಳಿ ಹನುಮಂತಪ್ಪ, ಮಲ್ಲಿಗೇನಹಳ್ಳಿ ರಾಜು, ರಂಗನಾಥ್‌, ಬೆಳಗುತ್ತಿ ರಂಗನಾಥ, ರಾಜು, ರುದ್ರೇಶ್‌ ಇತರರು ಭಾಗವಹಿಸಿದ್ದರು. ಅಧಿಕಾರಿಗಳಾದ ಸಿಪಿಐ ಟಿ.ದೇವರಾಜ್‌, ಪಿಎಸ್‌ಐ ತಿಪ್ಪೇಸ್ವಾಮಿ, ನ್ಯಾಮತಿ ಪಿಎಸ್‌ಐ ಹನುಮಂತಪ್ಪ ಶಿರಿಹಳ್ಳಿ, ಜಗದೀಶ್‌, ಹಾಗೂ ಸಮಾಜ ಕಲ್ಯಾಣ ಇಲಾಖೆಯ ದೊಡ್ಡಬಸವರಾಜು ಉಪಸ್ಥಿತರಿದ್ದರು.

click me!