ತಂದೆಯ ಕಷ್ಟಕ್ಕೆ ನೆರವಾಗದ ಅಸಹಾಯಕತೆ: ತನ್ನ ಪರಿಸ್ಥಿಗೆ ಮಮ್ಮಲ ಮರುಗಿ ಕಣ್ಣೀರಿಡುತ್ತಿರೋ ಕುಬ್ಜ..!

By Girish Goudar  |  First Published Mar 23, 2022, 11:57 AM IST

*  ಬಾಗಲಕೋಟೆ ಜಿಲ್ಲೆಯ ಛಬ್ಬಿ ಗ್ರಾಮದ ಕುಬ್ಜ ಯುವಕ ಗುರುನಾಥ
*  ಕೈಕಾಲುಗಳಲ್ಲಿ ಸ್ವಾಧೀನವಿಲ್ಲದೆ ಅಂಗವಿಕಲನಾಗಿ ಮನೆಯಲ್ಲಿರೋ ಕುಬ್ಜ ಯುವಕ
*  ತನ್ನ ಭವಿಷ್ಯತ್ತಿನ ಆರೈಕೆ ಸ್ಥಿತಿ ಕಂಡು ಆತಂಕ 
 


ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ(ಮಾ.23): ಆತ ನೋಡೋಕೆ ಪುಠಾಣಿ ಮಗುವಿನಂತೆ ಕಾಣ್ತಾನೆ. ಆದರೆ ಆತನಿಗೆ ಈಗ ಬರೋಬ್ಬರಿ 20 ವರ್ಷ ವಯಸ್ಸು, ಮನೆ ಮಗನಾಗಿ ಮನೆಗೆ ಮಾಡಿದ ಸಾಲ ಸೋಲಗಳಿಗೆ ತಂದೆಗೆ ನೆರವಾಗಲಿಲ್ಲ ಅನ್ನೋ ಕೊರಗು ಆತನದ್ದು. ಆತ ಎಲ್ಲಿಯೂ ಹೋಗೋ ಹಾಗಿಲ್ಲ, ಬರೋ ಹಾಗಿಲ್ಲ, ಹೀಗಾಗಿ ಎಲ್ಲೆ ಹೋದರೂ ತಂದೆ-ತಾಯಿಗಳೇ ಆತನನ್ನೆ ಹೊತ್ತೊಯ್ಯಬೇಕು. ಹೀಗಾಗಿ ತನ್ನ ವಿಕಲಚೇತನ ದೇಹ ಮತ್ತು ಮನೆಯ ಪರಿಸ್ಥಿತಿ ಕಂಡು ಕಣ್ಣೀರಿಡುತ್ತಿದ್ದಾನೆ.‌  

Tap to resize

Latest Videos

ಅಂದಹಾಗೆ ಇಂತಹವೊಬ್ಬ ವಿಕಲಚೇತನ(Disabled) ಕುಬ್ಜ ಯುವಕ ಕಂಡು ಬರೋದು ಬಾಗಲಕೋಟೆ(Bagalkot) ಜಿಲ್ಲೆಯ ಛಬ್ಬಿ ಗ್ರಾಮದಲ್ಲಿ. ಹೌದು, ಮಗುವಿನಂತೆ ದೇಹ ಇರುವ ಈ ಯುವಕನ ಹೆಸರು ಗುರುನಾಥ(Gurunath). ಗ್ರಾಮದ ಅವ್ವಣ್ಣೆಪ್ಪ ಮತ್ತು ನೀಲಮ್ಮ ಎಂಬುವವರ ಕಿರಿಯ ಮಗ. ಇವರಿಗೆ 5 ಜನ ಮಕ್ಕಳು. ಇವರಲ್ಲಿ ಮೂವರು ಹಿರಿಯ ಹೆಣ್ಣು ಮಕ್ಕಳನ್ನ ತಂದೆ ಸಾಲ ಸೋಲ ಮಾಡಿ ಮದುವೆ ಮಾಡಿ ಕಳಿಸಿದ್ದಾರೆ. ಇನ್ನೊಬ್ಬ ಮಗ ಊರಲ್ಲಿ ಕೂಲಿ ನಾಲಿ ಮಾಡುತ್ತಿದ್ದರೆ ಇತ್ತ ಕೊನೆಯ ಮಗ ಗುರುನಾಥ ಹುಟ್ಟು ಅಂಗವಿಕಲನಾಗಿದ್ದು, ಏನೇ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. ಕೈಕಾಲು ಸ್ವಲ್ಪ ಬಿಗಿಯಾಗಿ ಹಿಡಿದರೂ ಸಾಕು ಮುರಿದು ಹೋಗುವ ಮಟ್ಟಕ್ಕಿವೆ. ಹೀಗಾಗಿ ಈತನಿಗೆ ವಯಸ್ಸು 20 ವರ್ಷ ಆಗಿದ್ದರೂ ದೇಹ ಮಾತ್ರ ಥೇಟ್​ ಮಗುವಿನಂತಿದೆ. ಇನ್ನು ಓದು ಬರಹ ಕಲಿಯದ ಈತ ಮಾತನಾಡಲು ಬಲು ಜಾಣ. ಟಿವಿ ನೋಡುತ್ತ, ಮೊಬೈಲ್(Mobile)​ ಬಳಸುತ್ತ ಇದ್ದುದರಲ್ಲಿಯೇ ಎಲ್ಲವನ್ನ ತಿಳಿದುಕೊಳ್ಳೋ ಗುರುನಾಥನಿಗೆ ಈಗ ಭವಿಷ್ಯದ ದಿನಗಳ ಆತಂಕ ಶುರುವಾಗಿದೆ. ಮುಖ್ಯವಾಗಿ ತನ್ನ ತಂದೆ-ತಾಯಿಗಳಿರುವರೆಗೆ ನನ್ನನ್ನ ನೋಡಿಕೊಳ್ಳುತ್ತಾರೆ, ಮುಂದೆ ನನ್ನ ಪರಿಸ್ಥಿತಿ ಏನು ಅನ್ನೋ ಆತಂಕವಿದೆ. ಇನ್ನು ತನ್ನ ತಂದೆಯು  ಸಹೋದರಿಯರ ಲಗ್ನಕ್ಕಾಗಿ ಸಾಲ ಸೋಲ ಮಾಡಿದ್ದು, ಅದನ್ನ ತೀರಿಸಲು ಆಗದೇ ಕಣ್ಣೀರಿಡುತ್ತಿದ್ದು, ಇದೀಗ ಇತರರ ಸಹಾಯಕ್ಕೆ ಗುರುನಾಥ ಮೊರೆ ಹೋಗಿದ್ದಾನೆ. 

ಬಾಗಲಕೋಟೆ ಹೋಳಿ ಬಣ್ಣದಾಟದಲ್ಲಿ ಜಗಳ..ಮೂವರಿಗೆ ಚಾಕು ಇರಿತ

ಇನ್ನು ತನಗೆ ಓಡಾಡಲು ಆಗದೇ ಇರೋದ್ರಿಂದ ಗುರುನಾಥ ಸದಾ ಮನೆಯಲ್ಲಿಯೇ ಇರ್ತಾನೆ. ಇನ್ನು ಎಲ್ಲಿಯಾದರೂ ಹೋಗಬೇಕೆಂದರೆ ತನ್ನ ತಂದೆ ಆಥವಾ ತಾಯಿ ಈತನನ್ನ ಹೊತ್ತೊಯ್ಯಬೇಕು. ಹೀಗೆ ಕಳೆದ 20 ವರ್ಷದಿಂದ ಆತನ ಆಗು ಹೋಗುಗಳನ್ನ ನೋಡಿಕೊಂಡು ತಂದೆ ತಾಯಿ ಜೀವ ಸವೆಸುತ್ತಿದ್ದಾರೆ. ಇನ್ನು ಈತನಿಗೆ ಮೂರು ಚಕ್ರದ ವಾಹನ ನಿರ್ವಹಣೆ ಸಾಧ್ಯವಿಲ್ಲ, ಹೀಗಾಗಿ ಎಲೆಕ್ಟ್ರಾನ್​ ಮಾದರಿಯ ಚಿಕ್ಕ ವಾಹನ ಬೇಕಾಗಿದೆ. ಇದನ್ನ ಯಾರಾದರೂ ದಾನಿಗಳು ನೀಡಿದರೆ ಒಳ್ಳೆಯದಾಗುತ್ತೇ ಅಂತ ಹೇಳುತ್ತಿದ್ದಾನೆ. ಮುಖ್ಯವಾಗಿ ಮನೆಯ ಸಾಲ ಹೇಗೆ ತೀರಿಸಬೇಕು ಮತ್ತು ತನ್ನ ಬದುಕಿಗೆ ಮುಂದೆ ಏನು ಮಾಡಬೇಕೆನ್ನೋದು ಈತನ ಮುಖ್ಯ ಪ್ರಶ್ನೆಯಾಗಿದೆ. ಹೀಗಾಗಿ ತನ್ನ ಕುಟುಂಬಕ್ಕೆ ಯಾರಾದ್ರೂ ಸಹಾಯ ಮಾಡಿ ಅಂತ ಗೋಗರೆಯುತ್ತಿದ್ದಾನೆ. ಈ ಮಧ್ಯೆ ಕುಟುಂಬಸ್ಥರು ಸಹ ಈತನಿಗಾಗಿ ಚಿಕ್ಕಂದಿನಿಂದಲೇ ಸಾಕಷ್ಟು ಆಸ್ಪತ್ರೆಗಳಿಗೆ ಅಲೆದಾಡಿ ಸಾಲ ಸೋಲ ಮಾಡಿ ಚಿಕಿತ್ಸೆ ಕೊಡಿಸಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಆತನಿಗೆ ಸರ್ಕಾರ ಅಥವಾ ಸಂಘ ಸಂಸ್ಥೆಗಳಿಂದ ನೆರವು(Help) ಸಿಗುವಂತಾಗಲಿ ಎಂದು ಕೇಳಿಕೊಂಡಿದ್ದಾರೆ.                

                        

ಒಟ್ಟಿನಲ್ಲಿ ಕಳೆದ 20 ವರ್ಷದಿಂದ ಅಂಗವಿಕಲತೆಗೆ ಒಳಗಾಗಿ ಕುಬ್ಜ ದೇಹದೊಂದಿಗೆ ಬದುಕು ಸವೆಸಿ ತನ್ನ ಭವಿಷ್ಯ ಮತ್ತು ಕುಟುಂಬದ ಆಸರೆಗೆ ಸಹಾಯದ ಮೊರೆಯಿಡುತ್ತಾ ಬಂದಿರೋ ಗುರುನಾಥನಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಇನ್ನಾದ್ರೂ ಸಹಾಯಕ್ಕೆ ಮುಂದಾಗುತ್ತವೆಯಾ ಅಂತ ಕಾದು ನೋಡಬೇಕಿದೆ.
 

click me!