ಸಿರಿಗೆರೆ ಶ್ರೀ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳ ದಾಂಧಲೆ, ಅಪಾರ ಹಾನಿ

By Kannadaprabha NewsFirst Published Jan 29, 2023, 7:53 AM IST
Highlights

ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಸಿರಿಗೆರೆಯಿಂದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಬೈಕ್‌ ರಾಲಿ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ನಿಗದಿತ ಮಾರ್ಗ ಬಿಟ್ಟು ಕಾಳಾಪುರ ಮಾರ್ಗವಾಗಿ ತೆರಳಿ ಗ್ರಾಮದ ಹಲವು ಮನೆಗಳಿಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೇ ವಾಹನಗಳಿಗೆ ಅಗ್ನಿಸ್ಪರ್ಷ ಮಾಡಿದ್ದು ಅಪಾರ ಹಾನಿ ಸಂಭವಿಸಿದೆ. ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಕೊಟ್ಟೂರು (ಜ.29) : ಪಟ್ಟಣದಲ್ಲಿ ಶನಿವಾರದಿಂದ ಆರಂಭಗೊಂಡ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಸಿರಿಗೆರೆಯಿಂದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಬೈಕ್‌ ರಾರ‍ಯಲಿಯಲ್ಲಿ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ನಿಗದಿತ ಮಾರ್ಗ ಬಿಟ್ಟು ಕಾಳಾಪುರ ಮಾರ್ಗವಾಗಿ ತೆರಳಿ ಗ್ರಾಮದ ಹಲವು ಮನೆಗಳಿಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೇ ವಾಹನಗಳಿಗೆ ಅಗ್ನಿಸ್ಪರ್ಷ ಮಾಡಿದ್ದು ಅಪಾರ ಹಾನಿ ಸಂಭವಿಸಿದೆ. ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಕಾಳಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ 144ನೇ ಕಲಂನನ್ವಯ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಘಟನೆಯಲ್ಲಿ 7 ಬೈಕ್‌ ಸುಡಲಾಗಿದ್ದು, 50 ಸಾವಿರ ರು. ನಗದು ಮತ್ತು 1 ತೊಲೆ ಚಿನ್ನವನ್ನು ದೋಚಲಾಗಿದೆ. ಘಟನೆಯಲ್ಲಿ ಪೊಲೀಸರು ಸೇರಿ 16 ಜನರು ಗಾಯಗೊಂಡಿದ್ದು, ಅವರಲ್ಲಿ ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಉಜ್ಜಯಿನಿ- ತರಳಬಾಳು ಮಠಗಳ ವೈಷಮ್ಯ ಸ್ಫೋಟ: ಕೆಲ ಗ್ರಾಮಗಳಲ್ಲಿ ಕಲ್ಲು ತೂರಾಟ ಮನೆಗಳು ಜಖಂ

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಸ್ವಾಮೀಜಿಗಳ ವಾಹನದೊಂದಿಗೆ ಅಂದಾಜು 7 ಸಾವಿರ ಬೈಕ್‌ ಮತ್ತು 600ಕ್ಕೂ ಹೆಚ್ಚು ಕಾರುಗಳು ಇದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜಗಳೂರು ಮೂಲಕ ಕೊಟ್ಟೂರಿಗೆ ಆಗಮಿಸಿದ ಬೈಕ್‌ ಮತ್ತು ಕಾರುಗಳು ಕಾಳಾಪುರ ಕ್ರಾಸ್‌ ಬಳಿ ಬಂದಾಗ ಈ ಘಟನೆ ನಡೆದಿದೆ. ಜಗದ್ಗುರುಗಳ ಕಾರು ಮತ್ತು ಅನೇಕ ಬೈಕ್‌ಗಳು ಕಾಳಾಪುರ ಕ್ರಾಸ್‌ನಿಂದ ಮುಂದಕ್ಕೆ ಸಾಗಿದ್ದ ಕೆಲವೇ ಅವಧಿಯ ನಂತರ ಕೆಲ ಕಿಡಿಗೇಡಿಗಳು ಕಾಳಾಪುರ ಮತ್ತು ಕ್ಯಾಂಪ್‌ನ ಮೂಲಕ ಉಜ್ಜಯಿನಿ ಮಾರ್ಗವಾಗಿ ತೆರಳಲು ಯತ್ನಿಸಿವೆ. ಆ ಸಂದರ್ಭದಲ್ಲಿ ಘರ್ಷಣೆ ನಡೆದಿದ್ದು, ಉದ್ರಿಕ್ತ ಗುಂಪು ಹಲವು ಮನೆಗಳಿಗೆ ನುಗ್ಗಿ ವಸ್ತುಗಳನ್ನು ನಾಶಪಡಿಸಿದ್ದಲ್ಲದೇ ಮನೆಗಳ ಮುಂದೆ ನಿಲ್ಲಿಸಲಾಗಿದ್ದ ಆಟೋ, ಬೈಕ್‌ ಮತ್ತಿತರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಕಾಳಾಪುರ ಗ್ರಾಮದಲ್ಲಿ ಪುರುಷರು ಬಹುತೇಕ ಉಜ್ಜಯಿನಿಯಲ್ಲಿ ನಡೆಯುವ ಭರತ ಹುಣ್ಣಿಮೆ ಕಾರ್ಯಕ್ರಮದ ನಿಮಿತ್ತ ಉಜ್ಜಯಿನಿಗೆ ತೆರಳಿದ್ದರು. ಗ್ರಾಮದಲ್ಲಿ ಮಹಿಳೆಯರು, ವೃದ್ಧರು ಮಾತ್ರ ಈ ಸಂದರ್ಭದಲ್ಲಿ ಇದ್ದರು. ಇದನ್ನು ಅರಿತ ಕಿಡಿಗೇಡಿಗಳು ದಾಂಧಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಕಾಳಾಪುರ ಗ್ರಾಮದ ಬಸಕ್ಕ (50), ಪೊಲೀಸ್‌ ಪೇದೆ ಲಿಂಗಯ್ಯ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿಷಯ ತಿಳಿಯುತ್ತಿದ್ದಂತೆ ಹೆಚ್ಚಿನ ಪೊಲೀಸ್‌ ಬಂದೋಬಸ್‌್ತ ನಿಯೋಜನೆಗೊಂಡಿದ್ದು, ಸ್ಥಳಕ್ಕೆ ಎಸ್‌ಪಿ ಶ್ರೀಹರಿಬಾಬು ಭೇಟಿ ನೀಡಿ ಕಿಡಿಗೇಡಿಗಳ ದಾಂಧಲೆಯಿಂದ ಗಾಯಗೊಂಡ ಗ್ರಾಮಸ್ಥರನ್ನು ಸಂತೈಸಿ, ಈ ಸಂಬಂಧ ಗ್ರಾಮದವರು ದೂರು ನೀಡಿದರೆ ಪ್ರಕರಣ ದಾಖಲಿಸುವುದಾಗಿ ಹೇಳಿದರು.

ಸದ್ಯ ಕಾಳಾಪುರ ಗ್ರಾಮದಲ್ಲಿ ಅಡಿಷನಲ್‌ ಎಸ್‌.ಪಿ.ಶಿವಕುಮಾರ ನೇತೃತ್ವದ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿ ಠಿಕಾಣಿ ಹೂಡಿದ್ದು, ಪರಿಸ್ಥಿತಿಯನ್ನು ಶಾಂತವಾಗಿದೆ. ಹೊಳಲ್ಕೇರಿ ಶಾಸಕ ಎಂ.ಚಂದ್ರಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಸ್‌.ದೊಡ್ಡರಾಮಣ್ಣ ಭೇಟಿ ನೀಡಿ ಕಿಡಿಗೇಡಿಗಳ ದಾಂಧಲೆಯಿಂದ ಗಾಯಗೊಂಡವರನ್ನು ಸಂತೈಸಿದರು.

ಕಾಳಾಪುರ ಗ್ರಾಮದತ್ತ ಹೊರಗಿನವರು ಬರದಂತೆ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದಾರೆ.

ನಿಷೇಧಾಜ್ಞೆ ಜಾರಿ

ತರಳಬಾಳು ಹುಣ್ಣಿಮೆ ಮೆರವಣಿಗೆ ವೇಳೆ ಸಣ್ಣ ಗಲಾಟೆ ಆಗಿದ್ದು, ಈಗ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಗಲಾಟೆ ನಡೆದ ಪ್ರದೇಶದಲ್ಲಿ 144 ಕಲಂ ಜಾರಿ ಮಾಡಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ ತಿಳಿಸಿದರು.

ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ಮುನ್ನಲೆಗೆ ಫೆ.26ರಂದು ಸಾಣೇಹಳ್ಳಿ ಮಠದಲ್ಲಿ ಸಮಾವೇಶ

ಹಂಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರಳಬಾಳು ಹುಣ್ಣಿಮೆ ಮೆರವಣಿಗೆ ಹಿನ್ನೆಲೆ ಉಜ್ಜಯಿನಿ ಭಾಗದಲ್ಲಿ ಬಂದೋಬಸ್‌್ತ ಹಾಕಲಾಗಿತ್ತು. ಆದರೆ, ಕಾಳಾಪುರ ಗ್ರಾಮದಲ್ಲಿ ಮೆರವಣಿಗೆಯಲ್ಲಿ ಇದ್ದವರು ಹಾಗೂ ಕೆಲ ಗ್ರಾಮಸ್ಥರ ನಡುವೆ ಜಗಳವಾಗಿ ಐದಾರು ಜನ ಗಾಯಗೊಂಡಿದ್ದಾರೆ. ನಾಲ್ಕು ಪೊಲೀಸರ ಮೇಲೆಯೂ ಹಲ್ಲೆಯಾಗಿದೆ. ಎಸ್ಪಿ ಶ್ರೀಹರಿಬಾಬು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಪರಿಸ್ಥಿತಿ ಹತೋಟಿಗೆ ಬಂದಿದೆ. ಸಿರಿಗೆರೆ ತರಳಬಾಳುಪೀಠ ಹಾಗೂ ಉಜ್ಜಯಿನಿ ಪೀಠದ ನಡುವಿನ ವ್ಯಾಜ್ಯದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತಿರುವೆ ಎಂದು ಸುದ್ದಿಗಾರರ ಪ್ರಶ್ನೆಗೆ ಜಿಲ್ಲಾಧಿಕಾರಿ ವೆಂಕಟೇಶ ಪ್ರತಿಕ್ರಿಯಿಸಿದರು.

click me!