ಯುವ ಮನಸ್ಸುಗಳನ್ನು ಸೆಳೆಯುತ್ತಿದೆ ಪ್ರಕೃತಿ ನಿರ್ಮಿಸಿದ ಮಿನಿ ಫಾಲ್ಸ್| ಪ್ರಕೃತಿ ಮಧ್ಯೆ ಕಂಗೊಳಿಸುತ್ತಿರೋ ಜಲಲಧಾರೆ| ಬಾಗಲಕೋಟೆಯ ನವನಗರಕ್ಕೆ ಹೊಂದಿಕೊಂಡಿರುವ ಮುಚಖಂಡಿ ಕೆರೆ| ಯುವಕ- ಯುವತಿಯರಿಗೆ ವೀಕ್ ಎಂಡ್ ಮಸ್ತಿ ಸ್ಪಾಟ್| ಬರದಾಗಿದ್ದ ಮುಚಖಂಡಿಗೆ ಕೆರೆಗೆ ಹರಿದು ಬರುತ್ತಿರುವ ನೀರು|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಜು.23): ಮಹಾರಾಷ್ಟ್ರದಲ್ಲಿ ನಿರಂತರ ಮಳೆಯ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹೀಗಾಗಿ ಇತ್ತ ಆಲಮಟ್ಟಿ ಹಿನ್ನೀರಿಗೆ ಭರಪೂರ ನೀರು ಹರಿದು ಬರುತ್ತಿದೆ.
ಹಿನ್ನೀರಿನಿಂದ ಕೆರೆಗೆ ನೀರು ತುಂಬುತ್ತಿರುವುದರಿಂದ ಮೈ ನವಿರೇಳಿಸೋ ಮಿನಿಫಾಲ್ಸ್‌ವೊಂದನ್ನು ನಿರ್ಮಿಸಿದೆ. ಭರಪೂರ ನೀರಿನ ಮಧ್ಯೆ ಎಂಜಾಯ್ ಮಾಡೋ ಯುವಕ-ಯುವತಿಯರಿಗೆ ಇದು ವೀಕ್ ಎಂಡ್ ಮಸ್ತಿ ತಾಣವಾಗಿ ರೂಪಾಂತರಗೊಂಡಿದೆ.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಚಖಂಡಿ ಕೆರೆಯಲ್ಲಿ ಪ್ರಕೃತಿಯೇ ಮಿನಿ ಫಾಲ್ಸ್ ನಿರ್ಮಿಸಿದೆ. ನೀರಿಲ್ಲದೆ ಒಣಗಿ ಬರಿದಾಗಿದ್ದ ಕೆರೆಗೆ ಇದೀಗ ಆಲಮಟ್ಟಿ ಜಲಾಶಯದಿಂದ ನಿತ್ಯ ನೀರು ತುಂಬಿಸಲಾಗುತ್ತಿದೆ. ಹೀಗಾಗಿ ಕೆರೆಯ ಮೇಲ್ಬಾಗದಿಂದ ಏಕಕಾಲಕ್ಕೆ ಬಿಡುವ ನೀರು ಇದೀಗ ಮಿನಿ ಫಾಲ್ಸ್ ನಿರ್ಮಿಸಿ ಎಲ್ಲರನ್ನ ಕೈಬೀಸಿ ಕರೆಯುವಂತೆ ಮಾಡಿದೆ.
ಚಿಕ್ಕ ಚಿಕ್ಕ ತೊರೆಯಾಗಿ ಮಿನಿ ಫಾಲ್ಸ್ ಮಾದರಿ ರೂಪದಲ್ಲಿ ಹರಿಯುವ ಈ ಜಲಧಾರೆಯನ್ನು ನೋಡಲು ನಿತ್ಯವೂ ಜನ ಬರುತ್ತಿದ್ದಾರೆ. ಅದರಲ್ಲೂ ಈ ಭಾಗದ ಜಜನರಿಗೆ ಇದು ವೀಕ್ ಆ್ಯಂಡ್ ಮಸ್ತಿ ತಾಣವಾಗಿ ರೂಪಗೊಂಡಿದೆ. ನೀರಿನ ಜಲರಾಶಿಯ ಮಧ್ಯೆ ಯುವಕ ಯುವತಿಯರು ನಿಂತು ಎಂಜಾಯ್ ಮಾಡುವುದರ ಜೊತೆಗೆ ಸೆಲ್ಪಿ ತೆಗೆದುಕೊಳ್ಳುವುದರಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ.
ಇನ್ನು ಕೇವಲ ಮಿನಿಫಾಲ್ಸ್‌ವೊಂದೇ ಇಲ್ಲಿಯ ಆಕರ್ಷಣೆ ಅಲ್ಲ. ಬದಲಾಗಿ ಬ್ರಿಟಿಷರ ಕಾಲದ ಅಂದ್ರೆ 1882ರಲ್ಲಿ ಕಟ್ಟಿದ ಈ ಬೃಹತ್ ಕೆರೆಯ ಸುತ್ತ ಬೆಟ್ಟಗುಡ್ಡಗಳಿದ್ದು, ಅವುಗಳು ಕೂಡ ಇದೀಗ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿವೆ. ನುಣಪಾದ ಕಲ್ಲಿನ ಬೆಟ್ಟ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದೆ.
ಈ ಮಧ್ಯೆ ಕೆರೆಯ ಎಡಭಾಗದಲ್ಲಿ ಬೀಳುವ ನೀರಿನಲ್ಲಿ ನಿರ್ಮಾಣವಾಗಿರುವ ಮಿನಿ ಫಾಲ್ಸ್ ಎಲ್ಲರನ್ನು ಕೈಬೀಸಿ ಕರೆಯುವಂತೆ ಮಾಡಿದೆ. ಹೀಗಾಗಿ ಇದೊಂದು ಇಷ್ಟಪಡುವ ತಾಣವಾಗಿದ್ದು, ಈ ಸ್ಥಳದಲ್ಲಿ ಪ್ರವಾಸೋದ್ಯಮ ದೃಷ್ಠಿಯಿಂದ ಅಭಿವೃದ್ಧಿ ಆಗಬೇಕು ಅಂತಾರೆ ಯುವತಿಯರು.
ಒಟ್ಟಿನಲ್ಲಿ ನೀರಿಲ್ಲದೆ ಒಣಗಿ ಹೋಗಿದ್ದ ಮುಚಖಂಡಿ ಕೆರೆ ಇದೀಗ ನೀರಿನಿಂದ ಆವೃತ್ತವಾಗುತ್ತಿದ್ದು, ಮತ್ತೊಂದೆಡೆ ನೀರು ತುಂಬಿಸೋ ವೇಳೆ ನಿರ್ಮಾಣವಾಗೋ ಮಿನಿ ಫಾಲ್ಸ್ ಇದೀಗ ಈ ಭಾಗದ ಜನರ ಫೆವರೆಟ್ ತಾಣವಾಗಿ ಪರಿಣಿಮಿಸಿದೆ.