
ಹುಬ್ಬಳ್ಳಿ: ಮದ್ಯದ ಅಮಲಿನಲ್ಲಿ ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೊಬ್ಬ ಸಾವಿಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಹೊಸೂರು ಪ್ರದೇಶದಲ್ಲಿ ತಡರಾತ್ರಿ ನಡೆದಿದೆ. ಈ ಘಟನೆಯಲ್ಲಿ ಗದಗ ಜಿಲ್ಲೆಯ ನೀಲಗುಂದ ಮೂಲದ ನೀಲಪ್ಪ ಮಲ್ಲಿಗವಾಡ (40) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನೀಲಪ್ಪ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಇತ್ತೀಚಿಗಷ್ಟೇ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿದ್ದರು. ದಂಪತಿಯ ನಡುವೆ ದಿನನಿತ್ಯವೂ ಜಗಳ ನಡೆಯುತ್ತಿದ್ದು, ಕುಟುಂಬ ಕಲಹ ತೀವ್ರ ಸ್ವರೂಪ ಪಡೆದುಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ನಡೆದ ಜಗಳದ ವೇಳೆ ನೀಲಪ್ಪ ಅವರು ಪತ್ನಿ ವಿಜಯಲಕ್ಷ್ಮಿಗೆ ಚಾಕು ಹಾಕಲು ಮುಂದಾದರೆಂದು ಆರೋಪಿಸಲಾಗಿದೆ. ಈ ಸಂದರ್ಭ ಭಯಗೊಂಡ ವಿಜಯಲಕ್ಷ್ಮಿ ತಮ್ಮ ಮಕ್ಕಳೊಂದಿಗೆ ತಾಯಿ ಮನೆಗೆ ತೆರಳಿದ್ದಾರೆ. ಪತ್ನಿ ಮತ್ತು ಮಕ್ಕಳು ಮನೆಯಿಂದ ಹೊರಟ ಬಳಿಕ, ನೀಲಪ್ಪ ಮಲ್ಲಿಗವಾಡ ಮನೆಯಲ್ಲಿ ಒಬ್ಬನೇ ಇದ್ದ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿ ಮನೆಯೊಳಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಬೆಂಕಿ ಹಚ್ಚಿಕೊಂಡ ಬಳಿಕ ಗಂಭೀರವಾಗಿ ಸುಟ್ಟ ಗಾಯಗಳೊಂದಿಗೆ ನೀಲಪ್ಪ ಅವರು ವಿಜಯಲಕ್ಷ್ಮಿಯ ತಾಯಿ ಮನೆಗೆ ತೆರಳಿದ್ದಾರೆ. ತಕ್ಷಣ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ವೈದ್ಯರು ನೀಡಿದ ಮಾಹಿತಿ ಪ್ರಕಾರ, ನೀಲಪ್ಪ ಅವರ ದೇಹದ ಸುಮಾರು 70 ಶೇಕಡಾ ಭಾಗ ಸುಟ್ಟಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಘಟನೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕುಟುಂಬ ಕಲಹದ ಹಿನ್ನೆಲೆ, ಮದ್ಯಪಾನ ಹಾಗೂ ಆತ್ಮಹಾನಿ ಯತ್ನದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಮತ್ತೊಮ್ಮೆ ಮದ್ಯದ ಅಮಲು ಮತ್ತು ಕುಟುಂಬ ಕಲಹಗಳು ಎಂತಹ ಭೀಕರ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ದುರಂತ ಉದಾಹರಣೆಯಾಗಿದೆ.