
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಕೃಷಿ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಎತ್ತು, ಉಪ ಜೀವನಕ್ಕೆ ಆಸರೆಯಾಗಿದ್ದ ಆಕಳು-ಕರು, ಎಮ್ಮೆಗಳನ್ನು ಬರದ ಹೊಡೆತಕ್ಕೆ ಮೇವು, ನೀರಿಲ್ಲದೆ ರೈತ ಕಣ್ಣೀರಿಡುತ್ತಾ ಮಾರಾಟಕ್ಕೆ ಮುಂದಾಗಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಗೆ ಅವುಗಳನ್ನು ಕೇಳುವವರೇ ಇಲ್ಲ. ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಿ ಮನೆಯತ್ತ ಹೆಜ್ಜೆ ಇಡುತ್ತಿದ್ದಾನೆ.
ತಾಲೂಕಿನ ಮುಂಗಾರು, ಹಿಂಗಾರು ಮಳೆ ಇಲ್ಲದೇ ಭೂತಾಯಿ ನೀರಿಗಾಗಿ ಬಾಯ್ದೆರೆದುಕೊಂಡಿದ್ದಾಳೆ. ಉಪ ಜೀವನಕ್ಕಾಗಿ ಸಾಕಿರುವ ಜಾನುವಾರುಗಳಿಗೆ ಅಡವಿಯಲ್ಲಿ ಹಿಡಿ ಮೇವಿಲ್ಲ, ಕೆರೆ-ಕಟ್ಟೆಗಳಲ್ಲಿ ಹನಿ ನೀರಿಲ್ಲದೆ ಖಾಲಿಯಾಗಿವೆ. ಎತ್ತು, ದನ-ಕರುಗಳ ಗೋಳಾಟ ನೋಡಲಾಗದೇ ಭಾರವಾದ ಮನಸ್ಸಿನಿಂದ, ದನದ ಸಂತೆಗೆ ಜಾನುವಾರು ತಂದು ಮಾರಾಟಕ್ಕೆ ಮುಂದಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ತಾಲೂಕಿನಲ್ಲಿ ಸರಾಸರಿ 6 ತಿಂಗಳಲ್ಲಿ 520 ಎತ್ತು, 1000 ಹೋರಿ, 1800 ಆಕಳು, 100 ಕೋಣ, 750 ಎಮ್ಮೆಗಳು ಮಾರಾಟವಾಗಿವೆ. ₹ 90 ಸಾವಿರದಿಂದ ₹ 1 ಲಕ್ಷದ ವರೆಗೂ ಮಾರಾಟವಾಗುತ್ತಿದ್ದ ಹಾಲು ಕೊಡುವ ಆಕಳು ಕೇವಲ ₹ 45 ಸಾವಿರದಿಂದ ₹ 75 ಸಾವಿರಕ್ಕೆ ಮಾರಾಟವಾಗುತ್ತಿವೆ. ಜೋಡಿ ಎತ್ತು ಉಳುಮೆ ಮೇಳೆ ₹ 1.50 ಲಕ್ಷದಿಂದ ₹ 2 ಲಕ್ಷದ ವರೆಗೂ ಮಾರಾಟವಾದರೆ ಇದೀಗ ₹ 80 ಸಾವಿರದಿಂದ ₹ 1 ಲಕ್ಷಕ್ಕೆ ಮಾರಾಟವಾಗುತ್ತಿವೆ. ಹೋರಿಗಳು ₹ 60000ರಿಂದ ₹ 80000 ವರೆಗೂ ಮಾರಾಟವಾಗುತ್ತಿವೆ. ಒಟ್ಟಾರೆ ₹ 50 ಸಾವಿರದಿಂದ ₹ 80 ಸಾವಿರ ವರೆಗೂ ದರ ಕುಸಿತವಾಗಿದೆ.
ಹಿಂಗಾರು ಬಿತ್ತನೆ ಇಲ್ಲ, ಎತ್ತುಗಳನ್ನು ಖರೀದಿಸಿ ಏನು ಮಾಡಬೇಕು, ಭೂಮಿಯಲ್ಲಿ ಕೆಲಸವಿಲ್ಲ, ಅವುಗಳಿಗೆ ಮುಂದಿನ ಮುಂಗಾರು ಮಳೆ ಬರುವ ವರೆಗೂ ಮೇವು ಸಂಗ್ರಹಿಸಬೇಕು, ನೀರಿನ ವ್ಯವಸ್ಥೆ ಮಾಡಬೇಕಿದೆ. ಬದುಕಿನ ನಿರ್ವಹಣೆಗೆ ಕೂಲಿ ಬದುಕು ಮಾಡಿ ಜಾನುವಾರು, ಎತ್ತುಗಳ ಸಾಕುವುದು ಕಷ್ಟಕರವಾಗಿದೆ ಎನ್ನುತ್ತಾರೆ ರೈತರು.
ಬರ ಬಂದಿರುವ ಹಿನ್ನೆಲೆಯಲ್ಲಿ ಕಸಾಯಿಖಾನೆ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡು, ಕಡಿಮೆ ದರದಲ್ಲಿ ಆಕಳು, ಕರು ಎತ್ತು ಎಮ್ಮೆಗಳನ್ನು ಖರೀದಿ ಮಾಡುತ್ತಿದ್ದಾರೆ. ಆದರಿಂದ ಸರ್ಕಾರ ಆಕಳು ಕರು, ಎತ್ತು, ಎಮ್ಮೆಗಳಿಗೆ ಮೇವಿನ ಬ್ಯಾಂಕ್ನಿಂದ ಮೇವು ಸರಬರಾಜು, ಕುಡಿಯುವ ನೀರಿನ ವ್ಯವಸ್ಥೆ ಮಾಡಿದಾಗ, ರೈತರು ಜಾನುವಾರು ಮಾರಾಟ ಮಾಡದೇ ಉಳಿಸಿಕೊಳ್ಳಲು ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ.
ರೈತರ ಉಪ ಜೀವನಕ್ಕಿರುವ ಹಸು, ಎಮ್ಮೆಗಳಿಗೆ ಮೇವಿನ ಕೊರತೆಯಿಂದ, ದನದ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ, ರೈತರ ನಿರೀಕ್ಷಿತ ದರ ಸಿಗುತ್ತಿಲ್ಲ. ಖರೀದಿದಾರರ ಸಂಖ್ಯೆಯೇ ಕಡಿಮೆ ಇದೆ.
ತಿಮ್ಮಪ್ಪ ನಾಯಕ, ಕಾರ್ಯದರ್ಶಿ, ಎಪಿಎಂಸಿ, ಹೂವಿನಹಡಗಲಿ
ಮಳೆ ಇಲ್ಲದೇ ಬರ ಎದುರಾಗಿದ್ದು ಆಕಳು, ಎತ್ತು ಸಾಕಾಣೆ ಕಷ್ಟವಾಗುತ್ತಿದೆ. ಮೇವು-ನೀರಿನ ಸಮಸ್ಯೆ ಇದೆ. ಅವುಗಳ ಗೋಳಾಟ ನೋಡಲಾಗದೇ ಮನಸ್ಸು ಭಾರ ಮಾಡಿಕೊಂಡು ಮಾರಾಟಕ್ಕೆ ಮುಂದಾಗಿದ್ದೇವೆ. ಆದರೆ, ಬಾಳ ಕಡಿಮೆ ಬೆಲೆ ಕೇಳುತ್ತಿದ್ದಾರೆ ಎಂದು ರೈರ ನಿಂಗಪ್ಪ ಬಿದರಹಳ್ಳಿ ಅಳಲು ತೋಡಿಕೊಂಡರು.
ಇದನ್ನೂ ಓದಿ: ಗ್ರಾಮಸ್ಥರು ಮದುವೆ ನಂತರ ನಡೆಯುವ ಬೀಗರ ಊಟ ನಿಷೇಧಿಸಲು ಗ್ರಾಮಸ್ಥರಿಂದ ಒಮ್ಮತದ ನಿರ್ಧಾರ; ಮಹತ್ವದ ಹೆಜ್ಜೆ