ಕಾರಿಗೆ ಲಾರಿ ಡಿಕ್ಕಿಯಾಗಿ ಭೀಕರ ಅವಘಡ : ಚಾಲಕ ಸಜೀವ ದಹನ

Kannadaprabha News   | Kannada Prabha
Published : Mar 28, 2026, 06:43 AM IST
Driver

ಸಾರಾಂಶ

ಗೂಗಲ್ ಮ್ಯಾಪ್‌ ನೋಡಿ ತಪ್ಪು ದಾರಿಯಲ್ಲಿ ಬಂದು ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿ ಪರಿಣಾಮ ಸಂಭವಿಸಿದ ಅಗ್ನಿ ಅವಘಡದಲ್ಲಿ ಚಾಲಕನೊಬ್ಬ ಸಜೀವ ದಹನವಾಗಿರುವ ದಾರುಣ ಘಟನೆ ನಗರದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.

ಬೆಂಗಳೂರು : ಗೂಗಲ್ ಮ್ಯಾಪ್‌ ನೋಡಿ ತಪ್ಪು ದಾರಿಯಲ್ಲಿ ಬಂದು ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿ ಪರಿಣಾಮ ಸಂಭವಿಸಿದ ಅಗ್ನಿ ಅವಘಡದಲ್ಲಿ ಚಾಲಕನೊಬ್ಬ ಸಜೀವ ದಹನವಾಗಿರುವ ದಾರುಣ ಘಟನೆ ನಗರದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.

ಕುರುಬರಹಳ್ಳಿಯ ನಿವಾಸಿ ಅಂಬದಾಸ್‌ ಪ್ರಕಾಶ್‌ (23) ಮೃತ ದುರ್ದೈವಿ. ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಲಾರಿ ಚಾಲಕ ಶರ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾನೆ. ಅಲ್ಲದೆ ಈ ಅವಘಡದಲ್ಲಿ ತ್ಯಾಜ್ಯ ಗೋದಾಮು ಸಹ ಸುಟ್ಟು ಭಸ್ಮವಾಗಿದೆ.

ಆಂಧ್ರಪ್ರದೇಶದಿಂದ ಸುಮನಹಳ್ಳಿ ಬಳಿಗೆ ಕಬ್ಬಿಣ ಸಾಗಿಸುವಾಗ ದಾರಿ ತಪ್ಪಿ ಮಹಾಲಕ್ಷ್ಮೀ ಲೇಔಟ್‌ಗೆ ಲಾರಿ ತೆರಳಿದೆ. ಆಗ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಲಾರಿ ಗುದ್ದಿಸಿದಾಗ ಈ ಅಗ್ನಿ ಅವಘಡ ಸಂಭವಿಸಿದೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ತೆರಳಿ ನಾಲ್ಕೈದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನೆಗೆ ಆಸರೆಯಾಗಿದ್ದ ದಾಸ್

ಕುರುಬರಹಳ್ಳಿಯಲ್ಲಿ ತನ್ನ ತಾಯಿ ಹಾಗೂ ಸೋದರಿ ಜತೆ ನೆಲೆಸಿದ್ದ ಕಲಬುರಗಿ ಜಿಲ್ಲೆಯ ಪದವೀಧರ ಅಂಬದಾಸ್ ಅವರು, ಕೆಲ ದಿನಗಳ ಹಿಂದೆ ಸಾಲ ಮಾಡಿ ಸಿಎನ್‌ಜಿ ಕಾರನ್ನು ಖರೀದಿಸಿದ್ದರು. ಸಾಲ ತೀರಿಸಲು ಹಗಲಿರುಳು ಅವರು ದುಡಿಯುತ್ತಿದ್ದರು. ಬಾಡಿಗೆ ಜತೆ ಖಾಸಗಿ ಕಂಪನಿಗಳೊಂದಿಗೆ ಕೂಡ ದಾಸ್ ಒಡಂಬಡಿಕೆ ಮಾಡಿಕೊಂಡಿದ್ದರು. ಆ ಕುಟುಂಬಕ್ಕೆ ದಾಸ್ ಅವರೇ ಆಧಾರಸ್ತಂಭವಾಗಿದ್ದರು. ಈ ದುರಂತ ದಾಸ್ ಕುಟುಂಬಕ್ಕೆ ಆಘಾತ ತಂದಿದೆ.

ಇಎಂಐ ಪಾವತಿಗೆ ರಾತ್ರಿ ಕೆಲಸ

ಪ್ರತಿ ತಿಂಗಳು ಸುಮಾರು 25 ಸಾವಿರ ರು. ಕಾರಿನ ಇಎಂಐ ಅನ್ನು ದಾಸ್ ಪಾವತಿಸುತ್ತಿದ್ದರು. ಆದರೆ ಈ ಬಾರಿ ಸ್ಪಲ್ಪ ಹಣದ ಸಮಸ್ಯೆ ಎದುರಾಗಿತ್ತು. ಈ ಹಣ ಹೊಂದಿಸುವ ಸಲುವಾಗಿ ಅವರು ರಾತ್ರಿ ವೇಳೆ ಸಹ ಬಾಡಿಗೆ ಓಡಿಸುತ್ತಿದ್ದರು. ಅಂತೆಯೇ ಗುರುವಾರ ರಾತ್ರಿ ಬಾಡಿಗೆ ಕಾಯುತ್ತ ಮನೆ ಹತ್ತಿರ ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ದಾಸ್ ವಿಶ್ರಾಂತಿ ಪಡೆಯುತ್ತಿದ್ದರು.

ಆದರೆ ಲಾರಿ ರೂಪದಲ್ಲಿ ಅವರಿಗೆ ಮೃತ್ಯು ಒಕ್ಕರಿಸಿದೆ. ಕುರುಬರಹಳ್ಳಿ ಕಡೆಯಿಂದ ರಾತ್ರಿ 1.30ರ ಸುಮಾರಿಗೆ ಕಬ್ಬಿಣ ತುಂಬಿದ್ದ ಲಾರಿ, ಪೈಪ್‌ ಲೈನ್ ರಸ್ತೆಯ ಇಳಿಜಾರಿನಲ್ಲಿ ಸಾಗಿದೆ. ಆಗ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಲಾರಿ ಅಪ್ಪಳಿಸಿದೆ. ಬಳಿಕ 100 ಮೀಟರ್‌ ದೂರ ಕಾರನ್ನು ಎಳೆದುಕೊಂಡು ಹೋದ ಲಾರಿ, ಅಲ್ಲೇ ಸಮೀಪದ ಗುಜರಿ ವಸ್ತುಗಳ ಗೋದಾಮಿಗೆ ಗುದ್ದಿದೆ. ಈ ಡಿಕ್ಕಿಯಿಂದ ಕಿಡಿ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ಈ ಘಟನೆ ವೇಳೆ ಕಾರಿನಿಂದ ಹೊರ ಬರಲಾಗದೆ ಅಗ್ನಿಯಲ್ಲಿ ದಾಸ್ ಬೆಂದು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಲಾರಿಯಿಂದ ಜಿಗಿದ ಚಾಲಕ

ಗೋದಾಮಿಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಕೂಡಲೇ ಲಾರಿಯಿಂದ ಚಾಲಕ ಶರ್ಮಾ ಹೊರಗೆ ಜಿಗಿದಿದ್ದಾನೆ. ಆಗ ಆತನ ತಲೆ ಹಾಗೂ ಕೈಕಾಲುಗಳಿಗೆ ಪೆಟ್ಟಾಗಿದೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ 4 ವಾಹನಗಳಲ್ಲಿ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಆಗಮಿಸಿದ್ದಾರೆ. ಕೊನೆಗೆ ನಾಲ್ಕೈದು ತಾಸುಗಳ ಕಾರ್ಯಾಚರಣೆ ಬಳಿಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಈ ಸಂಬಂಧ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ.ಗೋಪಾಲಯ್ಯ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ದಾರಿ ತಪ್ಪಿದ ಚಾಲಕ

ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಜಿಂದಾಲ್‌ ಕಂಪನಿಯಿಂದ ನಗರಕ್ಕೆ ಕಬ್ಬಿಣವನ್ನು ಲಾರಿ ಚಾಲಕ ತುಂಬಿಕೊಂಡು ಬಂದಿದ್ದ. ಸುಮನಹಳ್ಳಿ ಸಮೀಪದಲ್ಲಿರುವ ಗೋದಾಮಿಗೆ ಆತ ಕಬ್ಬಿಣ ತೆಗೆದುಕೊಂಡು ಹೋಗಬೇಕಿತ್ತು. ಅಂತೆಯೇ ಬಳ್ಳಾರಿ ರಸ್ತೆ ಮೂಲಕ ನಗರಕ್ಕೆ ಬಂದ ಚಾಲಕ, ಗೊರಗುಂಟೆಪಾಳ್ಯ ಹಾದು ಸುಮನಹಳ್ಳಿ ಕಡೆಗೆ ಹೋಗಬೇಕಿತ್ತು.

ಆದರೆ ದಾರಿ ತಪ್ಪಿ ವೆಸ್ಟ್ ಆಫ್‌ ಕಾರ್ಡ್ ರಸ್ತೆಗೆ ಆತ ಬಂದಿದ್ದಾನೆ. ರಸ್ತೆ ಗೊಂದಲವಾಗಿ ರಾಜಾಜಿನಗರದ ಮೋದಿ ಮೇಲ್ಸೇತುವೆಯಲ್ಲಿ ಲಾರಿ ನಿಲ್ಲಿಸಿದ ಚಾಲಕ, ಅಲ್ಲಿ ಸಾರ್ವಜನಿಕರನ್ನು ಸುಮನಹಳ್ಳಿ ಸಾಗುವ ದಾರಿ ಬಗ್ಗೆ ವಿಚಾರಿಸಿದ್ದಾನೆ. ಆಗ ಬಸವೇಶ್ವರನಗರ ಮೂಲಕ ಸಾಗುವಂತೆ ಸಾರ್ವಜನಿಕರ ಸೂಚಿಸಿದ್ದಾರೆ. ಆಗ ಗೂಗಲ್ ಮ್ಯಾಪ್ ಹಾಕಿಕೊಂಡು ಚಾಲಕ ಮುಂದುವರಿದಿದ್ದಾನೆ. ಕೊನೆಗೆ ಕುರುಬರಹಳ್ಳಿಯ ಪೈಪ್‌ ಲೈನ್‌ ರಸ್ತೆಗೆ ಬಂದಾಗ ಇಳಿ ಜಾರಿನ ಹಾದಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಅದ್ದಾಡಿಡ್ಡಿಯಾಗಿ ಚಲಿಸಿದೆ. ಆಗ ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಬ್‌ಗೆ ಲಾರಿ ಗುದ್ದಿ ಅಗ್ನಿ ಅವಘಡ ಸಂಭವಿಸಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಗೂಗಲ್ ಮ್ಯಾಪ್‌ ಬಗ್ಗೆ ಗೊಂದಲ

ಗೂಗಲ್ ಮ್ಯಾಪ್ ನೋಡಿ ಚಾಲಕ ದಾರಿ ತಪ್ಪಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆದರೆ ಗಾಯಾಳು ಲಾರಿ ಚಾಲಕ ಈ ಬಗ್ಗೆ ಗೊಂದಲಕಾರಿ ಹೇಳಿಕೆ ಕೊಟ್ಟಿದ್ದಾನೆ. ಒಮ್ಮೆ ಗೂಗಲ್ ಮ್ಯಾಪ್ ಬಳಿಸಿದೆ ಎಂದರೆ, ಮತ್ತೊಂದು ಬಾರಿ ಇಲ್ಲ ಎನ್ನುತ್ತಾನೆ. ಘಟನೆಯಲ್ಲಿ ಚಾಲಕನ ಮೊಬೈಲ್ ಸುಟ್ಟು ಹೋಗಿದೆ. ಹೀಗಾಗಿ ಗೂಗಲ್ ಮ್ಯಾಪ್ ಬಳಕೆ ಬಗ್ಗೆ ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪದವಿ ಓದಿದ ಬಳಿಕ ಕೆಲಸಕ್ಕೆ ಹೋಗದೆ ಸ್ವಂತ ಉದ್ಯಮವನ್ನು ನಡೆಸುವ ಕನಸನ್ನು ಮಗ ಕಂಡಿದ್ದ. ಆಗ ದಿನಸಿ ಅಂಗಡಿ ಇಡುವಂತೆ ಆತನಿಗೆ ಸಲಹೆ ನೀಡಿದೆ. ಆದರೆ ಕೇಳದೆ ಕ್ಯಾಬ್ ಖರೀದಿಸಿದ. ನಮ್ಮ ಬದುಕಿಗೆ ಆಸರೆಯಾಗಿದ್ದ ಮಗನ ಅರ್ಧ ದಾರಿಯಲ್ಲೇ ಬಿಟ್ಟು ಹೋದ. ನಮ್ಮ ಜೀವನಕ್ಕೆ ದಿಕ್ಕು ಯಾರು?

-ಮೃತ ಅಂಬದಾಸ್ ತಾಯಿ

- ಆಂಧ್ರದಿಂದ ಸುಮನಹಳ್ಳಿ ಬಳಿಗೆ ಕಬ್ಬಿಣ ಸಾಗಿಸಲು ಲಾರಿ ಮಹಾಲಕ್ಷ್ಮೀ ಲೇಔಟ್‌ಗೆ ತೆರಳಿದೆ- ಗೂಗಲ್ ಮ್ಯಾಪ್‌ ನೋಡಿ ತಪ್ಪು ದಾರಿಯಲ್ಲಿ ಬಂದ ಲಾರಿಯಿಂದ ಭೀಕರ ಅವಘಡ- ಆಂಧ್ರದಿಂದ ಸುಮನಹಳ್ಳಿ ಬಳಿಗೆ ಕಬ್ಬಿಣ ಸಾಗಿಸಲು ಲಾರಿ ಮಹಾಲಕ್ಷ್ಮೀ ಲೇಔಟ್‌ಗೆ ಬಂದಿದೆ-ಆಗ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿ ನಿಂತಿದ್ದ ಕಾರಿಗೆ ಜೋರಾಗಿ ಗುದ್ದಿದೆ -ಕೂಡಲೇ ಬೆಂಕಿ ಹೊತ್ತಿಕೊಂಡು ಲಾರಿ, ಕಾರು ಸುಟ್ಟಿದೆ. ಕಾರಲ್ಲಿದ್ದ ಚಾಲಕ ಸಜೀವ ದಹನವಾಗಿದ್ದಾನೆ-ಲಾರಿ ಚಾಲಕ ಪ್ರಾಣಾಪಾಯದಿಂದ ಪಾರು, ನಾಲ್ಕೈದು ತಾಸು ಬೆಂಕಿ ನಂದಿಸಿದ ಅಗ್ನಿಶಾಮಕ ದಳ

PREV
Read more Articles on
click me!

Recommended Stories

ಮೈಸೂರಿನಲ್ಲಿ ಮತ್ತೊಂದು ಬೃಹತ್‌ ಡ್ರಗ್ಸ್‌ ಜಾಲ ಪತ್ತೆ
ಆಡಳಿತಾಧಿಕಾರಿಯ ಬಜೆಟ್‌ ಮಂಡನೆಗೆ ಸಾಕ್ಷಿಯಾದ ಪಾಲಿಕೆ!