ಬೆಂಗಳೂರಲ್ಲಿ ವೈನ್‌ ಮೇಳಕ್ಕೆ ಚಾಲನೆ: ಶೇ.10 ರಿಯಾಯಿತಿ

By Kannadaprabha NewsFirst Published Jan 15, 2023, 9:31 AM IST
Highlights

ರಾಜ್ಯದಲ್ಲಿ ವೈನ್‌ ನೀತಿ ಜಾರಿಗೊಳಿಸಿದ ನಂತರ ದ್ರಾಕ್ಷಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿದೆ. ರಾಜ್ಯದಲ್ಲಿ 17 ವೈನ್‌ ಕಂಪನಿಗಳಿದ್ದು, 4 ಸಾವಿರ ಎಕರೆ ಪ್ರದೇಶದಲ್ಲಿ ದಾಕ್ಷಿ ಬೆಳೆ ಬೆಳೆಯುತ್ತಾರೆ. ರೆಡ್‌ ವೈನ್‌, ವೈಟ್‌, ರೋಸ್‌, ಫೈನಾಪಲ್‌, ಹನಿಕ್ರಷ್‌, ಸ್ಪಾರ್‌ ಲೆಗ್‌ ಸೇರಿದಂತೆ ವಿವಿಧ ಮಾದರಿಯ ವೈನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಬೆಂಗಳೂರು(ಜ.15):  ಆರೋಗ್ಯಕರ ವೈನ್‌ ಬಳಕೆ ಉತ್ತೇಜಿಸುವ ಜೊತೆಗೆ ದ್ರಾಕ್ಷಿ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ‘ಕರ್ನಾಟಕ ದ್ರಾಕ್ಷಿ ಮತ್ತು ವೈನ್‌ ಮಂಡಳಿ’ ಎರಡು ದಿನಗಳ ‘ದ್ರಾಕ್ಷಾರಸ ಮೇಳ 2023’ ನಗರದಲ್ಲಿ ಆರಂಭವಾಗಿದೆ. ಪೈನಾಪಲ್‌ನಿಂದ ತಯಾರಿಸಿದ ವೈನ್‌ ಈ ಮೇಳದ ವಿಶೇಷವಾಗಿದೆ. ಶನಿವಾರ ಮಲ್ಲೇಶ್ವರದ ‘ಮಂತ್ರಿಮಾಲ್‌’ನಲ್ಲಿ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ದ್ರಾಕ್ಷಾರಸ ಮೇಳಕ್ಕೆ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಹಾಗೂ ನಿರ್ದೇಶಕ ಎಸ್‌.ಅಭಿಲಾಷ್‌ ಕಾರ್ತಿಕ್‌ ಚಾಲನೆ ನೀಡಿದರು.

ನಂತರ ಮಾತನಾಡಿದ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು, ರಾಜ್ಯದಲ್ಲಿ ವೈನ್‌ ನೀತಿ ಜಾರಿಗೊಳಿಸಿದ ನಂತರ ದ್ರಾಕ್ಷಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿದೆ. ರಾಜ್ಯದಲ್ಲಿ 17 ವೈನ್‌ ಕಂಪನಿಗಳಿದ್ದು, 4 ಸಾವಿರ ಎಕರೆ ಪ್ರದೇಶದಲ್ಲಿ ದಾಕ್ಷಿ ಬೆಳೆ ಬೆಳೆಯುತ್ತಾರೆ. ರೆಡ್‌ ವೈನ್‌, ವೈಟ್‌, ರೋಸ್‌, ಫೈನಾಪಲ್‌, ಹನಿಕ್ರಷ್‌, ಸ್ಪಾರ್‌ ಲೆಗ್‌ ಸೇರಿದಂತೆ ವಿವಿಧ ಮಾದರಿಯ ವೈನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಎರಡು ದಿನ ನಡೆಯುವ ಮೇಳದಲ್ಲಿ ಗ್ರಾಹಕರಿಗೆ ಕನಿಷ್ಠ ಶೇ.10ರಷ್ಟು ರಿಯಾಯಿತಿ ಸಿಗಲಿದೆ. ಆಯಾ ವೈನರಿಗಳು ಇನ್ನೂ ಹೆಚ್ಚಿನ ರಿಯಾಯಿತಿಯನ್ನು ನೀಡಬಹುದು ಎಂದರು.

National Wine Day 2022: ವೈನ್‌ನಲ್ಲೂ ಎಷ್ಟೊಂದು ವಿಧಗಳು

ಬಿಯರ್‌ ಕ್ಯಾನ್‌ ಮಾದರಿ ವೈನ್‌ ಕ್ಯಾನ್‌

ವೈನ್‌ ಮೇಳದಲ್ಲಿ ಪ್ರಟೇಲಿ ವೈನ್‌ ಸಂಸ್ಥೆ ಬಿಯರ್‌ ಕ್ಯಾನ್‌ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ‘ವೈನ್‌ ಕ್ಯಾನ್‌’ ಪರಿಚಯಿಸಿದೆ. ಟಿನ್‌ನಲ್ಲಿ ಕ್ಲಾಸಿಕ್‌ ರೆಡ್‌, ಕ್ಲಾಸಿಕ್‌ ವೈಟ್‌, ರೋಸೆ ಮತ್ತು ಬಬ್ಲಿ ಎಂಬ ನಾಲ್ಕು ಮಾದರಿಯ ವೈನ್‌ಗಳು ದೊರೆಯುತ್ತಿವೆ. ಪ್ರಟೇಲಿ ಸಂಸ್ಥೆ ಮೇಳದಲ್ಲಿ ಕ್ಯಾಬುನೆಟ್‌ ಫ್ರಾನ್ಸಿಸ್‌ ಶಿಶಿರಾಜ್‌ ಎಂಬ ಬ್ರ್ಯಾಂಡನ್ನು ಸಹ ಪರಿಚಯಿಸಿದೆ. ದ್ರಾಕ್ಷಿ ಮೇಳದಲ್ಲಿ ಯುವತಿಯರು ಸ್ಥಳದಲ್ಲೇ ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನನ್ನು ತಯಾರಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

click me!