ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮಹಾವೀರ್ ಈಡೆನ್ಫೀಲ್ಡ್ ಬಡಾವಣೆಯಲ್ಲಿ ಡ್ರೈನೇಜ್ ನೀರು ದಿಗ್ಬಂಧ ಹೇರಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆಯಾದ ಪರಿಣಾಮ ಬಡಾವಣೆ ಮುಖ್ಯಗೇಟ್ ಮತ್ತು ಸಂಪರ್ಕ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ.
ಆನೇಕಲ್(ಅ.31): ಬೆಳಕಿನ ಹಬ್ಬ ದೀಪಾವಳಿಯಂದೇ ಜನರಿಗೆ ಕತ್ತಲೆಯ ಕಾರ್ಮೋಡ ಆರವಿಸಿದ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡ ನಾಗಮಂಗಲ ಬಳಿಯ ಬಡಾವಣೆಯಲ್ಲಿ ಇಂದು(ಗುರುವಾರ) ನಡೆದಿದೆ.
ಹೌದು, ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮಹಾವೀರ್ ಈಡೆನ್ಫೀಲ್ಡ್ ಬಡಾವಣೆಯಲ್ಲಿ ಡ್ರೈನೇಜ್ ನೀರು ದಿಗ್ಬಂಧ ಹೇರಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆಯಾದ ಪರಿಣಾಮ ಬಡಾವಣೆ ಮುಖ್ಯಗೇಟ್ ಮತ್ತು ಸಂಪರ್ಕ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ.
ಜಲದಿಗ್ಭಂಧನದಿಂದ ಬಡಾವಣೆ ನಿವಾಸಿಗಳು ಪರದಾಟ ನಡೆಸುತ್ತಿದ್ದಾರೆ. ಚರಂಡಿ ನೀರು ಬಡಾವಣೆಗೆ ನುಗ್ಗುತ್ತಿದೆ. ಇದರಿಂದಾಗಿ ಆಂಬ್ಯುಲೆನ್ಸ್, ಶಾಲಾ ವಾಹನ, ಕ್ಯಾಬ್, ಸ್ವಿಗ್ಗಿ, ಝೊಮ್ಯಾಟೋ ಸೇವೆ ಬಂದ್ ಆಗಿದೆ. ಬಡಾವಣೆಯ ಮುಖ್ಯ ರಸ್ತೆ ಜಲಾವೃತ ಹಿನ್ನೆಲೆ ಎಲ್ಲಾ ಸೇವೆ ಬಂದ್ ಆಗಿದೆ.
ಮೂಲಭೂತ ಸೌಕರ್ಯಗಳಿಲ್ಲದೆ ಬಡಾವಣೆಯ ನಿವಾಸಿಗಳು ಹೌರಾಣಾಗಿದ್ದಾರೆ. ವಯೋವೃದ್ಧರು, ಮಕ್ಕಳು ಗರ್ಭಿಣಿ ಮಹಿಳೆಯರು ಓಡಾಡಲು ಸಂಕಷ್ಟ ಎದುರಿಸುತ್ತಿದ್ದಾರೆ. ಕುಡಿಯುವ ನೀರಿನ ಕೊಳವೆಬಾವಿಗೆ ಕೊಳಚೆ ನೀರು ಸೇರಿಕೊಂಡಿದೆ. ಕಲುಷಿತ ನೀರು ಸೇವನೆಗೆ ಜನರು ತುತ್ತಾಗುತ್ತಿದ್ದಾರೆ. ಡೆಂಘಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳಿಂದ ಜನರು ತತ್ತರಿಸಿದ್ದಾರೆ.
ಬಿಡಿಎಗೆ ನಿವಾಸಿಗಳು ತೆರಿಗೆ ಪಾವತಿ ಮಾಡುತ್ತಿದ್ದಾರೆ. ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಲ್ಲಿ ಬಿಡಿಎ ನಿರ್ಲಕ್ಷ್ಯ ವಹಿಸಿದೆ. ಸ್ಥಳೀಯ ಕೋನಪ್ಪನ ಅಗ್ರಹಾರ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಶಾಂತಿಪುರ ಗ್ರಾಮ ಪಂಚಾಯತಿ ಮತ್ತು ಕೋನಪ್ಪನ ಅಗ್ರಹಾರ ಪುರಸಭೆ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.
ಇನ್ನು ಮಹಾವೀರ್ ಬಿಲ್ಡರ್ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ಬಡಾವಣೆ ನಿರ್ಮಾಣ ಮಾಡಿದ್ದ ಮಹಾವೀರ್ ಬಿಲ್ಡರ್ ಕ್ಯಾರೆ ಎನ್ನುತ್ತಿಲ್ಲ. ಹಾಗಾಗಿ ನಮಗೆ ನೆಮ್ಮದಿಯಿಂದ ಬದುಕಲು ವ್ಯವಸ್ಥೆಯನ್ನ ಕಲ್ಪಿಸಿ. ದೀಪಾವಳಿ ಹಬ್ಬದ ದಿನವೇ ನಾವುಗಳು ಕತ್ತಲೆಯಲ್ಲಿದ್ದೇವೆ ಎಂದು ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.