* ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ
* ವಿಷ್ಣುಗುಪ್ತ ವಿದ್ಯಾಪೀಠಕ್ಕೂ ಭೇಟಿ ನೀಡಿ ಹೆಗ್ಗಡೆ ಮೆಚ್ಚುಗೆ
* ದೇಶಪ್ರೇಮ ಬೆಳೆಸುವ ವಿದ್ಯೆ ದೊರೆಯಲಿ
ಗೋಕರ್ಣ(ಜು.02): ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಹೆಗ್ಗಡೆಯವರು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳನ್ನು ಗೋಕರ್ಣದ ಅಶೋಕೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಜೊತೆಗೆ ವಿಷ್ಣುಗುಪ್ತ ವಿದ್ಯಾಪೀಠಕ್ಕೂ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶಪ್ರೇಮ ಬೆಳೆಸುವ ವಿದ್ಯೆ ದೊರೆಯಲಿ
ದೇಶ ಪ್ರೇಮದೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ಬದ್ಧರಾಗುವ ಪಾರಂಪರಿಕ ವಿದ್ಯೆ ನೀಡುವುದು ವಿಷ್ಣುಗುಪ್ತ ವಿದ್ಯಾಪೀಠದ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ ಜೊತೆಯಾಗಿದ್ದು, ಆಧುನಿಕ ಶಿಕ್ಷಣದ ಜೊತೆ ಪ್ರಾಚೀನ ವಿದ್ಯೆ ನೀಡಲಾಗುತ್ತಿದೆ ಎಂದು ರಾಘವೇಶ್ವರ ಭಾರತೀ ಶ್ರೀ ನುಡಿದರು.
ಯಾಂತ್ರಿಕೃತ ಭತ್ತ ಬೇಸಾಯ, ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಚಾಲನೆ
ಅಶೋಕೆ ಮೂಲಮಠದ ವಿದ್ಯಾಪೀಠದಲ್ಲಿ ರಾಷ್ಟ್ರೀಯ ಮುಕ್ತ ವಿದ್ಯಾಲಯದ ಎರಡು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಆರ್ಶೀವಚನದಲ್ಲಿ ಹೇಳಿದರು. ವಿದ್ಯಾರ್ಥಿಗಳಿಗೆ ಊಟ, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಗಳಿದ್ದು, ಗುರುಕುಲ ಮಾದರಿಯ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ ಎಂದ ಶ್ರೀಗಳು, ಎನ್‌ಐಒಎಸ್‌ನ ಎಲ್ಲ ಶೈಕ್ಷಣಿಕ ಚಟುವಟಿಕೆಗಳು ಉತ್ತಮವಾಗಿ ನಡೆಯಲಿ ಎಂದು ಆಶೀರ್ವದಿಸಿದರು.
ಎನ್‌ಐಒಎಸ್‌ನ ಡಾ. ಸರೋಜಾ ಶರ್ಮಾ ಮಾತನಾಡಿ, ನಮ್ಮ ವ್ಯಕ್ತಿತ್ವ ಬೆಳೆವಣಿಗೆ ಶಿಕ್ಷಣ ಪೂರಕವಾಗಿದೆ. ಆಧುನಿಕ ಶಿಕ್ಷಣದ ಜೊತೆ ದೇಶದ ಸಂಸ್ಕೃತಿಯನ್ನು ಪರಿಚಯಿಸುವ ಪಾಠಗಳೊಂದಿಗೆ ವಿದ್ಯಾರ್ಥಿಗಳನ್ನು ಸಂಸ್ಕಾರಯುತರನ್ನಾಗಿ ರೂಪಿಸುವುದು ಸಂಸ್ಥೆಯ ಉದ್ದೇಶ ಎಂದರು. ಸಂಸ್ಥೆಯಲ್ಲಿ ಕಲಿತವರಿಗೆ ವಿಶ್ವದ ಎಲ್ಲೆಡೆ ಮಾನ್ಯತೆ ಇದ್ದು, ಉದ್ಯೋಗವು ಸಿಗುತ್ತದೆ. ಹೊರ ದೇಶದಲ್ಲೂ ಇದರ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿರುವುದನ್ನು ವಿವರಿಸಿದರು.
ವಿವಿಧ ತರಗತಿಯಲ್ಲಿ ಎಲ್ಲ ಭಾಷೆಗಳ ಆಯ್ಕೆಯಿದ್ದು, ಉತ್ತರ ಭಾರತ, ದಕ್ಷಿಣ ಭಾರತದ ಭಾಷೆಗಳ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ಗುಪ್ತವಾಗಿ ಹರಿಯುವ ಸರಸ್ವತಿ ನದಿಯಂತೆ ಸರಸ್ವತಿ ರೂಪದಲ್ಲಿ ಮಕ್ಕಳಲ್ಲಿ ವಿದ್ಯೆ ಅರಳಲಿ ಎಂದರು.
ಅಡಕೆ ಕಳ್ಳಸಾಗಣೆ: ಪ್ರಧಾನಿ ಮೋದಿಗೆ ಪತ್ರ ಬರೆದು ವೀರೇಂದ್ರ ಹೆಗ್ಗಡೆ ಕಳವಳ
ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ರಜನೀಶ ಕುಮಾರ ಶುಕ್ಲಾ ಮಾತನಾಡಿ, ದೇಶದ ಎಲ್ಲಡೆ ದೂರ ಶಿಕ್ಷಣ ನೀಡುತ್ತಿದ್ದು, ಅದರಂತೆ ಇಲ್ಲಿನ ವಿದ್ಯಾಪೀಠದಲಿಯೂ ನಮ್ಮ ಶಿಕ್ಷಣ ಪದ್ಧತಿ ಅಳವಡಿಸಲಾಗಿದೆ. ಭಾರತದ ಉಜ್ವಲ ಭವಿಷ್ಯಕ್ಕೆ ಇಲ್ಲಿನ ವಿದ್ಯಾಪೀಠ ಪೂರಕವಾಗಲಿ ಎಂದು ಆಶಿಸಿದರು. ಶ್ರೀಗಳ ಸಹಕಾರ, ಆಶೀರ್ವಾದ ನಿರಂತರವಾಗಿರಲಿ ಎಂದರು. ಎಸ್.ಎಸ್. ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ವಿಷ್ಟುಗುಪ್ತ ವಿದ್ಯಾಪೀಠದ ಭರತನಾಟ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ. ಸುಭದ್ರಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಠದ ವಿವಿಧ ವಿಭಾಗದ ಪ್ರಮುಖರಾದ ಮೋಹನ ಹೆಗಡೆ, ಎಸ್.ಜಿ. ಭಟ್, ಡಿ.ಡಿ. ಶರ್ಮಾ, ಸತ್ಯನಾರಾಯಣ ಶರ್ಮಾ ಮತ್ತಿತರರು ಇದ್ದರು. ಇದೇ ವೇಳೆ ಪಾಲ್ಗೊಂಡ ಗಣ್ಯರಿಗೆ ಶ್ರೀಗಳು ನೆನಪಿನ ಕಾಣಿಕೆ ನೀಡಿ ಆಶೀರ್ವದಿಸಿದರು.