ಶಿವಕುಮಾರ ಸ್ವಾಮೀಜಿಯವರ ಕಾಯಕ ಶ್ರದ್ಧೆ ನಮ್ಮ ಬದುಕಿನ ದಾರಿಯಾದಾಗ ಮಾತ್ರ ಅವರ ತತ್ವಗಳ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್. ಪರಮೇಶ್ ತಿಳಿಸಿದರು.
ತುಮಕೂರು: ಶಿವಕುಮಾರ ಸ್ವಾಮೀಜಿಯವರ ಕಾಯಕ ಶ್ರದ್ಧೆ ನಮ್ಮ ಬದುಕಿನ ದಾರಿಯಾದಾಗ ಮಾತ್ರ ಅವರ ತತ್ವಗಳ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್. ಪರಮೇಶ್ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ನಡೆದಾಡುವ ದೇವರು ಡಾ. ಶಿವಕುಮಾರ ಮಹಾಶಿವಯೋಗಿಗಳ 116ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿ ಪೂಜ್ಯರ ಕಾಲಘಟ್ಟದಲ್ಲಿ ಇದ್ದು, ಅವರ ಸೇವೆ ಮಾಡಿದ ನಾವೆಲ್ಲರೂ ಅವರ ಜೀವನ ಸಂದೇಶಗಳನ್ನು ಜಗತ್ತಿಗೆ ಸಾರುವ ಜವಾಬ್ದಾರಿಯನ್ನೂ ಹೊತ್ತು, ನಿಷ್ಠೆಯಿಂದ ಪೂರೈಸಬೇಕು ಎಂದರು. ಸಿದ್ಧಗಂಗಾ ಮೆಡಿಕಲ… ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ಮಾತನಾಡಿ ಶ್ರೀಗಳ ಮಮತೆ, ಸಮಯಪಾಲನೆ, ಮಿತಹಾರ, ಹಿತಮಾತು ನಮ್ಮ ವೃತ್ತಿ ಜೀವನದಲ್ಲಿ ಅವಳವಡಿಸಿಕೊಳ್ಳಬೇಕು. ಪೂಜ್ಯರ ಆಶಯದಂತೆ ಪ್ರತಿಯೊಬ್ಬರಿಗೂ ಆರೋಗ್ಯ ಕಾಳಜಿ ತಲುಪಿಸುವಲ್ಲಿ ಹೆಚ್ಚಿನ ಆಸಕ್ತಿವಹಿಸಬೇಕು ಎಂದು ಹೇಳಿದರು.
undefined
ಮೆಡಿಕಲ… ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಹಿರಿಯ ಹೃದ್ರೋಗ ತಜ್ಞ ಹಾಗೂ ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಡಾ.ಭಾನುಪ್ರಕಾಶ್, ಡಾ.ಅಮರ್, ಸಿಇಓ ಡಾ ಸಂಜೀವಕುಮಾರ್ ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಗುರುವಂದನೆ
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 116ನೇ ಜನ್ಮ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
12ನೇ ಶತಮಾನದ ಬಸವಣ್ಣನವರ ತತ್ವಾದರ್ಶಗಳನ್ನು ಚಾಚೂ ತಪ್ಪದೇ ಪಾಲನೆ ಮಾಡುತ್ತಾ ಸಮಾಜದ ಉದ್ಧಾರಕ್ಕೆ ಸದಾ ತುಡಿಯುತ್ತಿದ್ದ ಆಧುನಿಕ ಬಸವಣ್ಣ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿಗೆ ವಿವಿಧ ಮಠಾಧೀಶರು, ಹರಗುರುಚರಮೂರ್ತಿಗಳು, ಗಣ್ಯಾತಿ ಗಣ್ಯರು ಹಾಗೂ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ನಾಡಿನ ಭಕ್ತಾದಿಗಳ ಮನ ಮನೆಗಳ ದೈವೀ ಪ್ರಭೆಯಾಗಿದ್ದ ಲಿಂ. ಡಾ. ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು, ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ಭಜನಾ ಮಂತ್ರ ಘೋಷಗಳು ಮೊಳಗಿದವು.
ಕಳಸ ಸ್ಥಾಪನೆ:
ಶ್ರೀಗಳ 116ನೇ ಜಯಂತಿ ವಿಶೇಷವಾಗಿ ನಸುಕಿನಲ್ಲೇ ಶ್ರೀ ಕ್ಷೇತ್ರದ ಬೆಟ್ಟದ ಮೇಲೆ ಪುನರ್ ನಿರ್ಮಾಣಗೊಂಡಿರುವ ಸಿದ್ದಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ವಿಮಾನ ಗೋಪುರದ ಮೇಲೆ ಕಳಸ ಸ್ಥಾಪನೆ ಮಾಡಲಾಯಿತು. ಕಳಸ ಸ್ಥಾಪನೆ ಬಳಿಕ ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ, 108 ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ, ಮಹಾಮಂಗಳಾರತಿ ನೆರವೇರಿತು.
ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಯವರು ಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸುವ ಮೂಲಕ ಆಶೀರ್ವಾದ ಪಡೆದರು. ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಕಂಚಿನ ಪುತ್ಥಳಿ ಮೆರವಣಿಗೆ:
ಗದ್ದುಗೆ ಮಂದಿರದ ಮುಂಭಾಗದಿಂದ ಆರಂಭವಾದ ಶ್ರೀಗಳ ಕಂಚಿನ ಪುತ್ಥಳಿ ಹೊತ್ತ ರುದ್ರಾಕ್ಷಿ ಮಂಟಪದ ಮೆರವಣಿಗೆಗೆ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯುದ್ಧಕ್ಕೂ ನಂದಿಧ್ವಜ ಕುಣಿತ, ಕರಡಿ ವಾದ್ಯ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು. ಶ್ರೀಮಠದ ಆವರಣದಲ್ಲಿ ಮೆರವಣಿಗೆಯುದ್ದಕ್ಕೂ ಪೂರ್ಣಕುಂಭ ಕಳಸ ಹೊತ್ತ ಸುಮಂಗಲಿಯರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
116 ಮಕ್ಕಳಿಗೆ ನಾಮಕರಣ:
ಡಾ. ಶಿವಕುಮಾರ ಮಹಾಸ್ವಾಮೀಜಿ ಅನ್ನದಾ ಸೇವಾ ಟ್ರಸ್ಟ್ ವತಿಯಿಂದ ನಡೆದಾಡುವ ದೇವರು, ತ್ರಿವಿಧ ದಾಸೋಹಮೂರ್ತಿ, ಪದ್ಮಭೂಷಣ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತ್ಯುತ್ಸವದ ಅಂಗವಾಗಿ 116 ಮಕ್ಕಳಿಗೆ ‘ಶಿ’ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ನಾಮಕರಣ ಮಾಡಲಾಯಿತು.
ಈ ಉಚಿತ ನಾಮಕರಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಹೊಸ ತೊಟ್ಟಿಲು, ತೊಟ್ಟಿಲ ಹಾಸಿಗೆ, ತೊಟ್ಟಿಲ ದಿಂಬು ಹಾಗೂ ಶ್ರೀಗಳ ಭಾವಚಿತ್ರವನ್ನು ಉಚಿತವಾಗಿ ನೀಡಲಾಯಿತು.
ಹೂವಿನ ಶಿವಲಿಂಗ ಆಕರ್ಷಣೆ:
ಶ್ರೀಮಠದ ಆವರಣದಲ್ಲಿ ಭಕ್ತರೊಬ್ಬರು ಬಗೆ ಬಗೆಯ ಹೂವುಗಳಿಂದ ನಿರ್ಮಿಸಿದ್ದ ಶಿವಲಿಂಗ ಶ್ರೀಗಳ 116ನೇ ಜಯಂತ್ಯುತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ರಾಜ್ಯದ ವಿವಿಧೆಡೆಗಳಿಂದ ಮಠಕ್ಕೆ ಆಗಮಿಸಿದ್ದ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ವಸ್ತುಪ್ರದರ್ಶನ ಆವರಣ, ಪ್ರಾರ್ಥನಾ ಮಂದಿರ, ಹಳೆಯ ಮತ್ತು ಹೊಸ ಪ್ರಸಾದ ನಿಲಯ, ಸಾದರ ಕೊಪ್ಪಲು ಸೇರಿದಂತೆ 5 ಕಡೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಸಂಸದ ಜಿ.ಎಸ್. ಬಸವರಾಜು, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಹಾಗೂ ವಿವಿಧ ಮಠಾಧೀಶರುಗಳು ಶ್ರೀಗಳ ಗದ್ದುಗೆ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.
ಈ ಬಾರಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮಠಕ್ಕೆ ಯಾವುದೇ ರಾಜಕಾರಣಿಗಳು, ಸಚಿವರು ಭೇಟಿ ನೀಡಿಲ್ಲ. ಹಾಗಾಗಿ ಶ್ರೀಮಠಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಪೊಲೀಸರಿಂದ ಯಾವುದೇ ರೀತಿಯ ಕಿರಿಕಿರಿ ಇಲ್ಲದೆ ನಿರಾಯಾಸದಾಯಕವಾಗಿ ಭಕ್ತರು ಮಠಕ್ಕೆ ಬಂದು ಗದ್ದುಗೆ ದರ್ಶನ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಶ್ರೀಗಳ 116ನೇ ಜಯಂತಿ ಪ್ರಯುಕ್ತ ತುಮಕೂರು ನಗರದಾದ್ಯಂತ ಭಕ್ತವೃಂದ ಪೆಂಡಾಲ್ಗಳನ್ನು ಹಾಕಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನದಾಸೋಹ ಏರ್ಪಡಿಸುವ ಮೂಲಕ ಭಕ್ತಿ ಸಮರ್ಪಿಸಿದರು.