ಕೃಷ್ಣರಾಜಸಾಗರ ಜಲಾಶಯದ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವ ವಿಚಾರವಾಗಿ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ರೈತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಮತ್ತು ಜಿಲ್ಲೆಯ ಜನರ ಹಿತವನ್ನು ಕಡೆಗಣಿಸಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ಮಂಡ್ಯ (ಮಾ.08): ಕೃಷ್ಣರಾಜಸಾಗರ ಜಲಾಶಯದ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವ ವಿಚಾರವಾಗಿ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ರೈತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಮತ್ತು ಜಿಲ್ಲೆಯ ಜನರ ಹಿತವನ್ನು ಕಡೆಗಣಿಸಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು. ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಟ್ರಯಲ್ ಬ್ಲಾಸ್ಟ್ ಮತ್ತು ಮೈಷುಗರ್ ಕಾರ್ಖಾನೆ ಕುರಿತು ಆಯೋಜಿಸಿದ್ದ ರೈತಮುಖಂಡರ ಸಭೆಯಲ್ಲಿ ಮಾತನಾಡಿದರು.
ನಾನು ಉದ್ಯಮಿಯಲ್ಲ, ವ್ಯಾಪಾರಿಯೂ ಅಲ್ಲ. ಸ್ವಹಿತ, ಅಧಿಕಾರ ಹಿತವನ್ನೂ ನಾನು ಬಯಸುವುದಿಲ್ಲ. ಅಧಿಕಾರಕ್ಕೆ ಅಂಟಿಕೂರುವ ವ್ಯಕ್ತಿಯೂ ನಾನಲ್ಲ. ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಅಣೆಕಟ್ಟು ಸುರಕ್ಷತಾ ಕಾಯಿದೆ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳು ಹಾಗೂ ಇತರೆ ಸಚಿವರೊಂದಿಗೆ ಮಾತುಕತೆ ನಡೆಸಿ ಸೂಕ್ತವಾದ ತೀರ್ಮಾನವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವುದಾಗಿ ಹೇಳಿದರು. ಕೆಆರ್‌ಎಸ್ ಅಣೆಕಟ್ಟು ಸುರಕ್ಷತೆಯನ್ನು ಕಡೆಗಣಿಸಿ ಟ್ರಯಲ್ ಬ್ಲಾಸ್ಟ್ ಮಾಡಲೇಬೇಕೆಂಬ ಹಠ ನನಗಾಗಲೀ, ಸರ್ಕಾರಕ್ಕೆ ಅಥವಾ ಜಿಲ್ಲಾಡಳಿತಕ್ಕಾಗಲೀ ಇಲ್ಲ. ಟ್ರಯಲ್ ಬ್ಲಾಸ್ಟ್‌ನಿಂದ ಗಣಿಗಾರಿಕೆಗೆ ಅವಕಾಶ ದೊರೆತಲ್ಲಿ ಅಪಾಯ ಸೃಷ್ಟಿಯಾಗಬಹುದೆಂಬ ಆತಂಕ ರೈತರಲ್ಲಿದೆ.
ಕಾಂಗ್ರೆಸ್ ಪಕ್ಷಕ್ಕೆ ಜನರ ಸಾಥ್ ಗ್ಯಾರಂಟಿ: ಸಚಿವ ಈಶ್ವರ್ ಖಂಡ್ರೆ
ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಹೈಕೋರ್ಟ್ ಆದೇಶ ಮಾಡಿದೆ. ಅದನ್ನು ತಡೆಯಲು ಏನು ಮಾಡಬೇಕೆಂಬ ಬಗ್ಗೆ ನಾವೂ ಆಲೋಚಿಸುತ್ತಿದ್ದೇವೆ. ಅದಕ್ಕಾಗಿ ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನು ಪಡೆಯಲಿದ್ದೇವೆ. ಅಣೆಕಟ್ಟು ಸುರಕ್ಷತಾ ಸಮಿತಿ ಕಾಯಿದೆಯನ್ನು ಜೊತೆಗಿಟ್ಟುಕೊಂಡೇ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿಕೊಡಲಿದ್ದೇವೆ ಎಂದರು. ಒಮ್ಮೆ ಟ್ರಯಲ್ ಬ್ಲಾಸ್ಟ್ ನಡೆಸಲೇಬೇಕಾದ ಅನಿವಾರ್ಯತೆ ಎದುರಾದರೆ ಮತ್ತೆ ನಿಮ್ಮೆಲ್ಲರ ಜೊತೆ ಸಭೆ ನಡೆಸಿ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲಿದ್ದೇವೆ. ಮುಂದಿನ ಹತ್ತು ವಾರಗಳೊಳಗೆ ಏನೇನು ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದೋ ಅವೆಲ್ಲವನ್ನೂ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.