ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಒಡತಿಗಾಗಿ ನಾಲ್ಕು ದಿನಗಳ ಕಾಲ ನರ್ಸಿಂಗ್ ಹೋಂ ಎದುರು ನಾಯಿಯೊಂದು ಕಾದು ಕುಳಿತಿದ್ದ ಪ್ರಸಂಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿ (ಜ.8): ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಒಡತಿಗಾಗಿ ನಾಲ್ಕು ದಿನಗಳ ಕಾಲ ನರ್ಸಿಂಗ್ ಹೋಂ ಎದುರು ನಾಯಿಯೊಂದು ಕಾದು ಕುಳಿತಿದ್ದ ಪ್ರಸಂಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ಈ ನಾಯಿಯ ಸ್ವಾಮಿ ನಿಷ್ಠೆ ಚಾರ್ಲಿ 777 ಸಿನಿಮಾವನ್ನು ನೆನಪಿಸುವಂತಿದೆ. ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಅವರು ಅನಾರೋಗ್ಯದಿಂದ ಪಟ್ಟಣದ ಖಾಸಗಿ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದರು.
ನಾಗರತ್ನ ಶಾಸ್ತ್ರಿ ನರ್ಸಿಂಗ್ ಹೋಮ್‌ಗೆ ದಾಖಲಾದಾಗಿನಿಂದ ಬಾಗಿಲಲ್ಲೇ ವಾರ್ಡಿನ ಕಡೆ ಮುಖ ಮಾಡಿ ಕಾದು ನಿಂತಿರುತಿತ್ತು. ಆಸ್ಪತ್ರೆ ಸಿಬ್ಬಂದಿ ಓಡಿಸಿದರೂ ಪುನಃ ಬಂದು ಬಾಗಿಲಲ್ಲೇ ನಿಂತಿರುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಾಗರತ್ನಾ ಶಾಸ್ತ್ರಿ ಎರಡು ದಿನಗಳ ಹಿಂದೆ ಮೃತ ಪಟ್ಟಿದ್ದು ಬಳಿಕ ಪಪ್ಪಿ ಆಹಾರ ಸೇವಿಸಿಲ್ಲ ಎನ್ನಲಾಗಿದೆ. ನಾಯಿ ನರ್ಸಿಂಗ್ ಹೋಮ್ ಬಾಗಿಲಲ್ಲಿ ಕಾದು ಕುಳಿತಿರುವ ಪೋಟೋ ವೈರಲ್ ಆಗಲಾರಂಬಿಸಿದೆ. ನಾಗರತ್ನಾ ಶಾಸ್ತ್ರಿರನ್ನು ಅವರ ಪಪ್ಪಿ ಹೆಸರಿನ 8 ತಿಂಗಳ ನಾಯಿಯ ಈ ವರ್ತನೆ ಸಾರ್ವಜನಿಕವಾಗಿ ಕುತೂಹಲ ಕೆರಳಿಸಿದೆ.
ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ
ದಾಬಸ್‌ಪೇಟೆ: ನೆಲಮಂಗಲ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಓಡಾಡಲು, ಜಾನುವಾರು ಮೇಯಿಸಲು ರೈತರು ಹೆದರುತ್ತಿದ್ದಾರೆ. ತಾಲೂಕಿನ ಭೂಸಂದ್ರ ಗ್ರಾಮದ ಗೋವಿಂದರಾಜು ಅವರಿಗೆ ಸೇರಿದ ತೋಟದ ಮನೆಯಲ್ಲಿ ಚಿರತೆಯೊಂದು ಸಾಕುನಾಯಿಯನ್ನು ಎಳೆದೊಯ್ದಿದೆ. ಅದರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಾಲೂಕಿನ ಹಲವೆಡೆ ಇತ್ತೀಚೆಗೆ ದಾಳಿ ನಡೆಸಿದ್ದು, ಕುರಿ ಮೇಕೆ, ಕೋಳಿ, ನಾಯಿಗಳನ್ನು ಎಳೆದೊಯ್ದಿವೆ. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ನಾಲ್ಕು ಕಡೆ ಬೋನ್ ಇರಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅರಣ್ಯಾಧಿಕಾರಿಗಳು ಈ ಹಿಂದೆ ಬೋನಿನಲ್ಲಿ ಸೆರೆಯಾಗಿದ್ದ ಚಿರತೆಗಳÜನ್ನು ಅರಣ್ಯ ಇಲಾಖೆಯವರು ಪಕ್ಕದ ಮಾಗಡಿ ಅರಣ್ಯ ವಲಯ ಪ್ರದೇಶದ ಸಾವನದುರ್ಗ, ಬನ್ನೇರುಘಟ್ಟಅರಣ್ಯ ಪ್ರದೇಶಗಳಿಗೆ ಬಿಡುತ್ತಾರೆ. ಅದೇ ಚಿರತೆಗಳೇ ಮತ್ತೆ ನೆಲಮಂಗಲ ಅರಣ್ಯ ವಲಯ ಸುತ್ತಮುತ್ತ ಬಂದು ಸೇರಿಕೊಳ್ಳುತ್ತಿವೆ. ಒಮ್ಮೆ ಬೋನಿಗೆ ಬಿದ್ದ ಚಿರತೆಗಳು ಮತ್ತೆ ಆ ಬೋನಿನತ್ತ ಸುಳಿಯುತ್ತಿಲ್ಲ, ಒಂದೇ ದಿನ ಮೂರ್ನಾಲ್ಕು ಕಡೆ ಚಿರತೆ ದಾಳಿ ಮಾಡಿದೆ. ಈ ಭಾಗದಲ್ಲಿ 15-20ಕ್ಕೂ ಹೆಚ್ಚು ಚಿರತೆಗಳು ಇರಬಹುದೆಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.