ವಿಜೃಂಭಣೆಯ ಶ್ರೀ ದೊಡ್ಡಬಸವೇಶ್ವರ ರಥೋತ್ಸವ| ಬಳ್ಳಾರಿ ಜಿಲ್ಲೆಯ ಕುರುಗೋಡದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ| ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ್ದ ಭಕ್ತರು|
ಕುರುಗೋಡು(ಮಾ.10):ಪಟ್ಟಣದ ಐತಿಹಾಸಿಕ ಶ್ರೀ ದೊಡ್ಡಬಸವೇಶ್ವರ ಜಾತ್ರಾ ಮಹಾರಥೋತ್ಸವ ವಿಜೃಂಭಣೆಯಿಂದ ಸೋಮವಾರ ಸಂಜೆ ನಡೆದಿದೆ.
ರಥೋತ್ಸವದ ನಿಮಿತ್ತ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ದೊಡ್ಡಬಸವೇಶ್ವರ ದೇವರಿಗೆ ವಿಶೇಷ ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉತ್ಸವದ ಮೊದಲಿಗೆ ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮಲಾಪುರ ಗ್ರಾಮದಿಂದ ಧೂಳುಗಾಯಿ, ಕಳಸ ಮತ್ತು ಪೂರ್ಣಕುಂಭದ ಮೆರವಣಿಗೆ ನಡೆಯಿತು. ಆನಂತರ ಹೂವು ಮತ್ತು ತರವಾರಿ ವಸ್ತ್ರಗಳಿಂದ ಅಲಂಕೃತಗೊಂಡ ದೊಡ್ಡಬಸವೇಶ್ವರ ಗೂಳಿ ಮೆರವಣಿಗೆ ಸಕಲ ವಾದ್ಯ ಹಾಗೂ ಮುತ್ತೈದೆಯರ ಕಳಸದೊಂದಿಗೆ ನೀಲಮ್ಮ ಮಠಕ್ಕೆ ತೆರಳಿ ವಿಶೇಷ ಪೂಜೆ ನಡೆಸಿ ಮಠದ ಸ್ವಾಮಿಯನ್ನು ಮೆರವಣಿಗೆ ಮೂಲಕ ರಥಕ್ಕೆ ಕರೆ ತರಲಾಯಿತು.
ಪ್ರತಿವರ್ಷ 6 ಗಂಟೆಗೆ ರಥ ಎಳೆಯಲಾಗುತ್ತಿತ್ತು. ಆದರೆ ಈ ವರ್ಷ ಸಂಜೆ 5.40ಕ್ಕೆ 60 ಅಡಿ ಎತ್ತರದ ರಥವನ್ನು ದೇವಸ್ಥಾನದ ಮುಂಭಾಗದಿಂದ ರಥಬೀದಿಯಲ್ಲಿ ಎದುರು ಬಸವಣ್ಣ ದೇವಸ್ಥಾನದ ವರೆಗೆ ಎಳೆದು ಆನಂತರ ಸ್ವಸ್ಥಾನಕ್ಕೆ ಹಿಂತಿರುಗಿಸಲಾಯಿತು. ಈ ಬಾರಿ ರಥೋತ್ಸವಕ್ಕೆ ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರ ಆಗಮಿಸಿದ್ದರು. ಕುರುಗೋಡು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಹೊರ ಜಿಲ್ಲೆ ಹಾಗೂ ರಾಜ್ಯದ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ರಥೋತ್ಸವದ ನಿಮಿತ್ತ ಯುವಕರು ಮಜ್ಜಿಗೆ ಅರವಟ್ಟಿಗೆ ತೆರೆದು ಬಿಸಿಲಲ್ಲಿ ಬೆಂದ ಜನರಿಗೆ ತಂಪು ನೀಡಿದರು. ರಥೋತ್ಸವದಲ್ಲಿ ಪಾಲ್ಗೊಂಡ ಜನರಿಗೆ ಇಲಾಖೆ ವತಿಯಿಂದ ರೈತ ಸಮುದಾಯ ಭವನದಲ್ಲಿ ಹಾಗೂ ಖಾಸಗಿ ಮತ್ತು ನಾನಾ ಧಾರ್ಮಿಕ ಸಂಘಗಳ ವತಿಯಿಂದ ಪಟ್ಟಣದ ಕಂಪ್ಲಿ, ಗೆಣಿಕೆಹಾಳ್, ಮುಷ್ಟಗಟ್ಟೆರಸ್ತೆ, ರಾಘವಾಂಕ ಮಠದಲ್ಲಿ ಉಚಿತ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.
ದೇವಸ್ಥಾನದ ಪ್ರಾಂಗಣದಲ್ಲಿ ತಾತ್ಕಾಲಿಕ ಮಹಿಳಾ ಪೊಲೀಸ್ ಠಾಣೆ ತೆರೆಯಲಾಗಿತ್ತು. ಅಲ್ಲದೆ ದೇವಸ್ಥಾನದ ಒಳಗೆ ಮತ್ತು ಸುತ್ತಮುತ್ತ 16 ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ನಾನಾ ಗ್ರಾಮದಿಂದ ಬರುವ ವಾಹನ ನಿಲುಗಡೆಗೆ 5 ರಸ್ತೆಗಳಲ್ಲಿ ವಿಶೇಷ ನಿಲ್ದಾಣ ನಿರ್ಮಿಸಲಾಗಿತ್ತು. ಭಕ್ತರ ಪ್ರಯಾಣಕ್ಕೆ ಸಾರಿಗೆ ಇಲಾಖೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಟ್ಟಣದ ಪುರಸಭೆ ಜಾತ್ರಾರ್ಥಿಗಳಿಗೆ 6 ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ವಿತರಿಸಲಾಯಿತು. ಅಲ್ಲದೆ ಪ್ರತಿ ವಾರ್ಡಿನಲ್ಲು ಬೀದಿ ದೀಪಗಳನ್ನ ಅಳವಡಿಸಲಾಗಿತ್ತು.
ಭಕ್ತರಿಗೆ ಅನ್ನದಾಸೋಹ
ಶ್ರೀ ದೊಡ್ಡಬಸವೇಶ್ವರ ಸ್ವಾಮಿಯ ಮಹಾರಥೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ಸ್ಥಳೀಯ ಸಂಘ, ಸಂಸ್ಥೆ ಹಾಗೂ ನಾಗರಿಕರ ವತಿಯಿಂದ ಹಲವೆಡೆ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು. ಅರವಟ್ಟಿಗೆಯನ್ನೂ ಸ್ಥಾಪಿಸಲಾಗಿತ್ತು. ಬಾದನಹಟ್ಟಿರಸ್ತೆ, ಗೆಣಿಕೆಹಾಳ್ ರಸ್ತೆ, ಸಿಂದಿಗೇರಿ ರಸ್ತೆ, ಬಳ್ಳಾರಿ ರಸ್ತೆ, ಮುಷ್ಟಗಟ್ಟೆರಸ್ತೆ, ಕಂಪ್ಲಿ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಪೆಟ್ರೋಲ್ ಬಂಕ್ ಇನ್ನಿತರ ರಸ್ತೆಗಳಲ್ಲಿ ದಾಸೋಹ ಸೇವೆ ಬೆಳಗ್ಗೆಯಿಂದ ಜರುಗಿದೆ.
ವಿಶೇಷ:
ಬಳ್ಳಾರಿ ರಸ್ತೆಯ ಶ್ರೀ ಕೊಟ್ಟೂರು ಸ್ವಾಮಿ ಮಠದ ಎದುರಗಡೆಯ ಆವರಣದಲ್ಲಿ ಮಸೀದಿಪುರದ ಪ್ರಥಮ ದರ್ಜೆ ಗುತ್ತಿಗೆದಾರ ಎಂ. ಸಿದ್ದರಾಮನಗೌಡ ಹಾಗೂ ಸಹೋದರರ ವತಿಯಿಂದ ಎರಡು ದಿನಗಳಿಂದ ಬೆಳಗ್ಗೆಯಿಂದ ಸಂಜೆ ವರೆಗೆ ಬಂದ ಭಕ್ತರಿಗೆಲ್ಲ ಅನ್ನ ದಾಸೋಹ ನಡೆಸಿರುವುದು ವಿಶೇಷವಾಗಿ ಕಂಡು ಬಂದಿದೆ.
ಕಾರ್ಯಕ್ರಮದಲ್ಲಿ ಕೊಟ್ಟೂರು ಸ್ವಾಮಿ ಮಠದ ಸಂಗನಬಸವೇಶ್ವರ ಮಹಾ ಸ್ವಾಮಿಗಳು, ಹಾವಿಗೆ ಮಠದ ರಾಘವಾಂಕ ಮಹಾಸ್ವಾಮಿಗಳು, ಎಮ್ಮಿಗನೂರಿನ ವಾಮದೇವ ಮಹಾಸ್ವಾಮಿಗಳು, ಬಳ್ಳಾರಿಯ ಕಲ್ಯಾಣ ಸ್ವಾಮೀಜಿಗಳು, ಹಾಲಕೇರಿ ಮಠದ ಶ್ರೀಗಳು, ಕೊಟ್ಟೂರು ದೇವರು ಶ್ರೀಗಳು, ಬೆಣಕಲ್ ರಾಮಲಿಂಗಯ್ಯ ಸ್ವಾಮಿಗಳು, ಮಸೀದಿಪುರದ ಕೆ.ಎಂ. ಸಿದ್ದಲಿಂಗ ಸ್ವಾಮಿಗಳು, ಮೋಕ ಗುಳಿಗೆ ಮಠದ ಬಸವರಾಜಸ್ವಾಮಿ, ಎಂ. ಬಸವನಗೌಡ ಕುಟುಂಬ ವರ್ಗದವರು ಉಪಸ್ಥಿತರಿದ್ದರು.