ಸಂಜನಾ ಗಲ್ರಾನಿಗೆ ಶಸ್ತ್ರಚಿಕಿತ್ಸೆ ಅಗತ್ಯ: ನಟಿಗೆ ಸಿಗುತ್ತಾ ಜಾಮೀನು?

By Kannadaprabha NewsFirst Published Dec 11, 2020, 10:24 AM IST
Highlights

ಹೈಕೋರ್ಟ್‌ಗೆ ವರದಿ ಸಲ್ಲಿಸಿದ ವೈದ್ಯರು| ಇಂದು ಮತ್ತೆ ವಿಚಾರಣೆ: ಡ್ರಗ್ಸ್‌ ಕೇಸಲ್ಲಿ ನಟಿಗೆ ಸಿಗುತ್ತಾ ಜಾಮೀನು?| ಸದ್ಯಕ್ಕೆ ಔಷಧಿಯಲ್ಲೇ ಚಿಕಿತ್ಸೆ ಮುಂದುವರೆಯಬಹುದು. ಅಗತ್ಯಬಿದ್ದರೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಬೇಕು| 

ಬೆಂಗಳೂರು(ಡಿ.11): ಮಾದಕ ದ್ರವ್ಯ ಪ್ರಕರಣದಲ್ಲಿ ಜೈಲುಪಾಲಾಗಿ ಈಗ ಅನಾರೋಗ್ಯದಿಂದ ಬಳಲುತ್ತಿರುವ ನಟಿ ಸಂಜನಾ ಗಲ್ರಾನಿಗೆ ಶಸ್ತ್ರ ಚಿಕಿತ್ಸೆ ಮಾಡುವ ಅಗತ್ಯವಿದೆ ಎಂದು ವಾಣಿ ವಿಲಾಸ ಆಸ್ಪತ್ರೆ ವೈದ್ಯರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. 

ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಜಾಮೀನು ನೀಡುವಂತೆ ಕೋರಿ ನಟಿ ಸಂಜನಾ ಗಲ್ರಾನಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸಿಸಿಬಿ ಪರ ವಿಶೇಷ ಅಭಿಯೋಜಕ ವೀರಣ್ಣ ತಿಗಡಿ ಅವರು, ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು ಸಲ್ಲಿಸಿರುವ ಸಂಜನಾರ ವೈದ್ಯಕೀಯ ವರದಿಯನ್ನು ನ್ಯಾಯಪೀಠಕ್ಕೆ ಒದಗಿಸಿದರು. 

ನಟಿ ಸಂಜನಾ ಆರೋಗ್ಯ ಸ್ಥಿತಿ ಬಗ್ಗೆ ವರದಿ ನೀಡಲು ಸೂಚನೆ

ಸದ್ಯಕ್ಕೆ ಔಷಧಿಯಲ್ಲೇ ಚಿಕಿತ್ಸೆ ಮುಂದುವರೆಯಬಹುದು. ಅಗತ್ಯಬಿದ್ದರೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕರು ನ್ಯಾಯಪೀಠದ ಗಮನಕ್ಕೆ ತಂದರು. ಜತೆಗೆ, ಈ ಕುರಿತು ಹೆಚ್ಚಿನ ವಾದ ಮಂಡನೆಗೆ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಬೇಕೆಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ತನಗೆ ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿದ್ದು, ಚಳಿಗಾಲದಲ್ಲಿ ಮತ್ತಷ್ಟುಉಲ್ಬಣಿಸುತ್ತದೆ. ಹಿಂದೊಮ್ಮೆ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದೆ. ಹೀಗಾಗಿ, ಅಗತ್ಯ ಚಿಕಿತ್ಸೆ ಪಡೆಯಲು ಪ್ರಕರಣದಲ್ಲಿ ಜಾಮೀನು ನೀಡಬೇಕು ಎಂದು ಕೋರಿ ನಟಿ ಸಂಜನಾ ಗಲ್ರಾನಿ ಅರ್ಜಿ ಸಲ್ಲಿಸಿದ್ದಾರೆ. ವೈದ್ಯಕೀಯ ವರದಿ ಆಧರಿಸಿ ಅರ್ಜಿಯನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದ ಹೈಕೋರ್ಟ್‌, ಸಂಜನಾರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ವರದಿ ಸಲ್ಲಿಸುವಂತೆ ಡಿ.7ರಂದು ವಾಣಿ ವಿಲಾಸ ಆಸ್ಪತ್ರೆ ವೈದ್ಯರಿಗೆ ಸೂಚಿಸಿತ್ತು.
 

click me!