ತಮ್ಮ ಜೀವವವನ್ನೇ ತ್ಯಾಗ ಮಾಡಿ ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಿರುವ ಧಾರ್ಮಿಕ ಮುಖಂಡರ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತನಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಟಾಂಗ್ ನೀಡಿದ್ದಾರೆ.
ಬೆಳಗಾವಿ (ಡಿ.20): ತಮ್ಮ ಜೀವವವನ್ನೇ ತ್ಯಾಗ ಮಾಡಿ ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಿರುವ ಧಾರ್ಮಿಕ ಮುಖಂಡರ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತನಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಚನನಂದ ಶ್ರೀಗಳೇ ಇರಲಿ ಅಥವಾ ಯಾರೇ ಇರಲಿ ಸಮಾಜ ಸುಧಾರಣೆಗೆ ಶ್ರಮಿಸುತ್ತಿರುವ ಧಾರ್ಮಿಕ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಬೇಕಾದ ಅಗತ್ಯವಿಲ್ಲಘಿ. ಇದು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಬಹಳ ದೊಡ್ಡ ನಾಯಕರು. ಅವರ ಬಗ್ಗೆ ನಾನು ಮಾತನಾಡುವಷ್ಟು ದೊಡ್ಡ ವ್ಯಕ್ತಿಯಲ್ಲ. ನಾವು ಯಾರ ಬಗ್ಗೆಯಾದರೂ ಮಾತನಾಡಿದರೆ ಅದಕ್ಕೊಂದು ತೂಕವಿರಬೇಕು. ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು. ಹೀಗೆ ಮಾತನಾಡಿದರೆ ಅದು ನಮ್ಮ ಕೀಳು ಅಭಿರುಚಿಯನ್ನು ತೋರಿಸುತ್ತದೆ ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ನಿರಾಣಿ ವಾಗ್ದಾಳಿ ನಡೆಸಿದರು.
ಯಾವುದೇ ಸ್ವಾಮೀಜಿಗಳ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತನಾಡಬಾರದು. ಹಿಂದೂ ಸಮಾಜದಲ್ಲಿ ಖಾವಿ ಧರಿಸಿದವರಿಗೆ ಸಾಕಷ್ಟು ಗೌರವ ಕೊಡುತ್ತಾರೆ. ಪಂಚಮಸಾಲಿ ಸೇರಿದಂತೆ ಮತ್ತೊಂದು ಸಮಾಜದ ಧಾರ್ಮಿಕ ಮುಖಂಡರ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದರು.
ಯತ್ನಾಳ್ ದೊಡ್ಡವರ ಬಗ್ಗೆ ಮಾತನಾಡಿದರೆನಾನು ದೊಡ್ಡ ವ್ಯಕ್ತಿಯಾಗುತ್ತೇನೆ ಎಂದು ಭಾವಿಸಿದ್ದಾರೆ. ಶ್ರೀಗಳು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲರ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಮಾತಿಗೆ ಹೆಚ್ಚಿನ ಮಹತ್ವ ಕೊಡಬಾರದು ಎಂದರು.
ಯಡಿಯೂರಪ್ಪ ಅತ್ಯಂತ ದೊಡ್ಡ ವ್ಯಕ್ತಿ:
ಇಡೀ ದಕ್ಷಿಣ ಭಾರತದಲ್ಲೆ ಯಡಿಯೂರಪ್ಪ ಅತ್ಯಂತ ದೊಡ್ಡ ವ್ಯಕ್ತಿ. ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರ ದೊಡ್ಡದಿದೆ. ಆದರೆ ಯತ್ನಾಳ್ ತಾನು ಯಾರ ಬಗ್ಗೆ ಮಾತನಾಡಿ ಧಕ್ಕಿಸಿಕೊಳ್ಳಬಲ್ಲೆ ಎಂದುಕೊಂಡಿದ್ದಾರೆ. ಇವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ನಿರಾಣಿ ವ್ಯಂಗ್ಯವಾಡಿದರು.
ಯಡಿಯೂರಪ್ಪನವರ ಬಗ್ಗೆ ಲಘುವಾಗಿ ಮಾತನಾಡುವುದರಲ್ಲಿ ಅರ್ಥವಿಲ್ಲ. ಅವರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲು ಎಂದೂ ವಿರೋಧಿಸಿಲ್ಲ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಈ ರೀತಿ ಮಾತನಾಡುತ್ತಾರೆ. ಅದನ್ನು ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದರು.
ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 3ಬಿಗೆ ಸೇರ್ಪಡೆ ಮಾಡಲು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪನವರು. ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದ್ದರು. ಸಮುದಾಯಕ್ಕೆ ಅವರ ಕೊಡುಗೆ ಸಾಕಷ್ಟಿದೆ ಎಂದು ನಿರಾಣಿ ಪ್ರಶಂಶಿಸಿದರು.
ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೊಂದು ಕಾನೂನಾತ್ಮಕ ವಿಷಯ. ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡುವವರೆಗೂ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆತುರಕ್ಕೆ ಬಿದ್ದು ನಿರ್ಧಾರಗಳನ್ನು ತೆಗೆದುಕೊಂಡರೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಸರ್ಕಾರ ಇಡುತ್ತದೆ ಎಂದು ಹೇಳಿದರು.
ಈಶ್ವರಪ್ಪ, ರಮೇಶ್ ಜಾರಕಿಹೊಳಿ ಅವರುಗಳನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು:
ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ , ರಮೇಶ್ ಜಾರಕಿಹೊಳಿ ಅವರುಗಳನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದಕ್ಕೆ ನನ್ನ ಸಂಪೂರ್ಣ ಸಹಮತವಿದೆ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಜೊತೆ ಪಕ್ಷ ಸಂಘಟಿಸುವುದರಲ್ಲಿ ಈಶ್ವರಪ್ಪ ಅವರ ಪಾತ್ರ ಬಹಳ ಇದೆ ಎಂದರು.
ಸ್ವಾಮೀಜಿ ಜತೆ ಇರೋ ಫೋಟೋ ಪೋಸ್ಟ್: ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷರ ಮೇಲೆ ಹಲ್ಲೆಗೆ ಮುಂದಾದ ಮಹಿಳೆ
ರಮೇಶ್ ಜಾರಕಿಹೊಳಿ ಮತ್ತು ಈಶ್ವರಪ್ಪನವರಿಗೆ ಸಚಿವ ಸ್ಥಾನ ಕೊಡಬೇಕೆಂಬುದರಲ್ಲಿ ಎರಡು ಮಾತಿಲ್ಲಘಿ. ಪಕ್ಷವು ಯಾವ ಕಾಲಕ್ಕೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬುದನ್ನು ಪಕ್ಷವು ತೀರ್ಮಾನಿಸುತ್ತದೆ. ರಮೇಶ್ ಜಾರಕಿಹೊಳಿ ಸಚಿವ ಸ್ಥಾನವನ್ನೇ ತ್ಯಾಗ ಮಾಡಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅವರನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಖಂಡಿವಾಗಿಯೂ ಅವರಿಗೆ ಸ್ಥಾನಮಾನ ಸಿಗಲಿದೆ ಎಂದರು.
Assembly election- ಗುಜರಾತ್ ಫಲಿತಾಂಶ ಕರ್ನಾಟಕ ಮೇಲೂ ಪರಿಣಾಮ ಬೀರಲಿದೆ- ಸಚಿವ ಮುರುಗೇಶ್ ನಿರಾಣಿ
ಸಚಿವ ಸ್ಥಾನ ಸಿಗದಿದ್ದಕ್ಕೆ ಈ ಇಬ್ಬರು ಸದನಕ್ಕೆ ಗೈರುಹಾಜರಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಮುಖ್ಯಮಂತ್ರಿಗಳು ಅವರನ್ನು ಕರೆದು ಮಾತನಾಡಿಸಿದ್ದಾರೆ. ಯಾರೊಬ್ಬರಿಗೂ ಈ ಬಗ್ಗೆ ಅಸಮಾಧಾನವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಇಬ್ಬರು ಕೂಡ ಸದನಕ್ಕೆ ಬರುತ್ತಾರೆ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ನಮ್ಮ ವರಿಷ್ಠರು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ನಿರಾಣಿ ಅವರು
ಹೇಳಿದರು.