'ಶಿರಾ : ಇದು ನನ್ನ ಕೊನೆ ಚುನಾವಣೆ ಎಂದು ಮೃತ ಸತ್ಯನಾರಾಯಣ ಹೇಳಿದ್ದರು'

By Kannadaprabha NewsFirst Published Oct 16, 2020, 11:48 AM IST
Highlights

ಸತ್ಯನಾರಾಯಣ ಅವರ ನಿಧನದಿಂದಾಗಿ ಶಿರಾ ಕ್ಷೇತ್ರ ತೆರವಾಗಿದ್ದು ಇದೀಗ ಉಪ ಚುನಾವಣೆ ನಡೆಯುತ್ತಿದೆ. ಈ ಹಿಂದೆ  ಇಲ್ಲಿ ಸತ್ಯನಾರಾಯಣ ಅವರು ಇದು ನನ್ನ ಕೊನೆ  ಚುನಾವಣೆ ಎಂದು ಹೇಳಿದ್ದರೆನ್ನಲಾಗಿದೆ. 

ಶಿರಾ (ಅ.16):  ಅಭಿವೃದ್ಧಿ ಶೀಲ ಸರ್ಕಾರಕ್ಕಾಗಿ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಚಂದ್ರ ಅವರನ್ನು ಆಶೀರ್ವದಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತದಾರರಲ್ಲಿ ಮನವಿ ಮಾಡಿದರು.

ಶಿರಾದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ. ಜಯಚಂದ್ರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಜನರಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿದ್ದೆವು. ಹಾಗೆಯೇ ಶಿರಾ ಕ್ಷೇತ್ರದಲ್ಲೂ ಅಭಿವೃದ್ಧಿಯ ಮಹಾಪೂರವೇ ಹರಿದಿತ್ತು. ಹಾಗೆಯೇ ಸಿರಾದಲ್ಲೂ ಅಭಿವೃದ್ಧಿ ಕಾರ್ಯಗಳು ಚುರುಕಾಗಲು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ ಅವರು ಮತದಾರರಲ್ಲಿ ಕೋರಿದರು.

ಉಪಚುನಾವಣೆ ಬೇಕು ಎಂದು ಯಾರೂ ಬಯಸಿರಲಿಲ್ಲ. ಸತ್ಯನಾರಾಯಣ ಅವರೇ ಇದು ನನ್ನ ಕೊನೆ ಚುನಾವಣೆ ಎಂದು ಮತದಾರರಲ್ಲಿ ಮನವಿ ಮಾಡಿದ್ದರಿಂದ ನಾವು ಸೋಲನುಭವಿಸಬೇಕಾಯಿತು. ಆದರೆ ಈ ಬಾರಿ ಸಿರಾ ಮತದಾರರ ಬಗ್ಗೆ ನಮಗೆ ನಂಬಿಕೆ ಇದೆ ಎಂದರು.

'ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಜೆಡಿಎಸ್‌ನದ್ದೇ ಭಯ’ ..

ಮತದಾರರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಜಯಚಂದ್ರ ಅವರಿಗೆ ಆಶೀರ್ವಾದ ಮಾಡಬೇಕು. ಈ ರಾಜ್ಯದಲ್ಲಿ ಶಾಂತಿ ಕಾಪಾಡುವ ಜತೆಗೆ ಮತ್ತೆ ಉತ್ತಮವಾದ ಸ್ಥಿತಿಗೆ ಕೊಂಡೊಯ್ಯಬೇಕು. ವಿಶೇಷವಾಗಿ ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಕಾಂಗ್ರೆಸ್‌ ಪಕ್ಷ ಋುಣಿಯಾಗಿರಲಿದೆ ಎಂದು ಅವರು ಹೇಳಿದರು..

ಕಳೆದ ಬಾರಿ ರಾಜ್ಯಕ್ಕೆ ಅಭಿವೃದ್ಧಿಶೀಲ ಸರ್ಕಾರವನ್ನು ಕೊಟ್ಟಿದ್ದೆವು. ಅಭಿವೃದ್ಧಿ ಹೇಗಿರುತ್ತದೆ ಎಂಬುದನ್ನು ಕಳೆದ ಕಾಂಗ್ರೆಸ್‌ ಸರ್ಕಾರದಲ್ಲಿ ಕೆಲಸ ಮಾಡುವ ಮೂಲಕ ತೋರಿಸಿದ್ದೇವೆ. ನಿರುದ್ಯೋಗ ಸಮಸ್ಯೆ, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲ ವರ್ಗದವರಿಗೂ ವಿಶೇಷ ಒತ್ತು ನೀಡಿದ್ದೇವೆ ಎಂದ ಅವರು, ಶಾಂತಿ, ನೆಮ್ಮದಿ ಮತ್ತು ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌, ಅಭ್ಯರ್ಥಿ ಟಿ.ಬಿ. ಜಯಚಂದ್ರ, ಮಾಜಿ ಶಾಸಕ ಕೆ.ಎನ್‌. ರಾಜಣ್ಣ, ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ನವೆಂಬರ್ 3ಕ್ಕೆ ಚುನಾವಣೆ ನಡೆಯಲಿದ್ದು, ನವೆಂಬರ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ

click me!