ಕೊಪ್ಪಳ: ಹನುಮಸಾಗರ ಕನ್ನಡ ನುಡಿ ತೇರಿಗೆ ಕ್ಷಣಗಣನೆ

By Kannadaprabha News  |  First Published Mar 5, 2023, 10:24 AM IST

ಪಟ್ಟಣದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆವರಣದಲ್ಲಿ ನಿರ್ಮಿಸಿದ ಬೃಹತ್‌ ವೇದಿಕೆಯಲ್ಲಿ ಮಾ.5, 6ರಂದು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿ ಡಾ.ಉದಯಶಂಕರ ಪುರಾಣಿಕ ಸರ್ವಾಧ್ಯಕ್ಷತೆಯಲ್ಲಿ ಜರುಗಲಿದೆ.


ಹನುಮಸಾಗರ (ಮಾ.5) : ಪಟ್ಟಣದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆವರಣದಲ್ಲಿ ನಿರ್ಮಿಸಿದ ಬೃಹತ್‌ ವೇದಿಕೆಯಲ್ಲಿ ಮಾ.5, 6ರಂದು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿ ಡಾ.ಉದಯಶಂಕರ ಪುರಾಣಿಕ ಸರ್ವಾಧ್ಯಕ್ಷತೆಯಲ್ಲಿ ಜರುಗಲಿದೆ.

ಅದ್ಧೂರಿ ಅಕ್ಷರ ಜಾತ್ರೆ(Akshar jatre)ಗೆ ಕ್ಷಣಗಣನೆ ಆರಂಭವಾಗಿದೆ. ನುಡಿ ತೇರು ಎಳೆಯಲು ಕನ್ನಡ ಮನಸುಗಳು ಸಜ್ಜಾಗಿವೆ.

Latest Videos

undefined

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ದಿ.ಪಿ.ಬಿ.ಧುತ್ತರಗಿ(PB DDuttaragi) ಮಹಾವೇದಿಕೆಯಲ್ಲಿ ದಿ.ಎಚ್‌.ಟಿ.ಅರಸ್‌ ಸಭಾಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ಜಿಲ್ಲೆಯ ಅನೇಕ ಮಹನೀಯರ ಹೆಸರಿನಲ್ಲಿ ವಿವಿಧ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.

ಮಾ.5ರಂದು ಬೆಳಿಗ್ಗೆ ಶಾಸಕ ಅಮರೇಗೌಡ ಪಾಟೀಲ(MLA Amaregowda patil) ಅವರಿಂದ ರಾಷ್ಟ್ರಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ ಅವರಿಂದ ಪರಿಷತ್ತಿನ ಧ್ವಜಾರೋಹಣ, ತಾಲೂಕು ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ ಅವರಿಂದ ಕನ್ನಡ ಧ್ವಜಾರೋಹಣ ನೆರವೇರಲಿದೆ.

ನಂತರ ಸಮ್ಮೇಳನದ ದ್ವಾರಗಳು ವಿವಿಧ ಮುಖಂಡರಿಂದ ಉದ್ಘಾಟನೆಗೊಳ್ಳಲಿವೆ. ನಂತರ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕನ್ನಡಧ್ವಜದ ಕಟ್ಟೆಯಿಂದ ಪ್ರಾರಂಭಗೊಂಡು ಹಳೆ ಬಸ್‌ನಿಲ್ದಾಣ, ಗ್ರಾಮದೇವತೆ ದೇವಸ್ಥಾನ, ಬೀರಲಿಂಗೇಶ್ವರ ದೇವಸ್ಥಾನ, ರಾಘವೇಂದ್ರಸ್ವಾಮಿಮಠ, ಕರಿಸಿದ್ದೇಶ್ವರಮಠ, ಗಾಂಧಿಸರ್ಕಲ್‌ ಮೂಲಕ ಮಹಾವೇದಿಕೆಗೆ ತೆರಳಲಿದೆ.

ಕೊಪ್ಪಳ: Social Media ದಲ್ಲಿ ಶಿಕ್ಷಕರ ರಾಜಕೀಯ ಬಣ್ಣ ಬಯಲು!

ಮೆರವಣಿಗೆಯಲ್ಲಿ ಮಹಿಳೆಯರ ಕುಂಭ ಮೇಳ, ಡೊಳ್ಳು ಕುಣಿತ, ಕರಡಿ ಮಜಲು, ಕಣಿ ಹಲಗೆ ವಾದ್ಯ, ಬ್ಯಾಂಜೋ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ.

ಅಂದು ಬೆಳಿಗ್ಗೆ 10:30ಕ್ಕೆ ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಇ. ರಂಗಸ್ವಾಮಿ ಸಮ್ಮೇಳನ ಉದ್ಘಾಟಿಸಲಿದ್ದು, ಸಚಿವ ಆನಂದಸಿಂಗ್‌ ದಿಕ್ಸೂಚಿ ನುಡಿಗಳನ್ನಾಡುವರು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಆಶಯ ನುಡಿಗಳನ್ನಾಡುವರು. ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುವರು.

11ನೇ ಸಮ್ಮೇಳನದ ಅಧ್ಯಕ್ಷ ಟಿ.ವಿ. ಮಾಗಳದ ನಿ.ಪೂ. ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು. ಸಂಸದ ಸಂಗಣ್ಣ ಕರಡಿ ಸಮ್ಮೇಳನಾಧ್ಯಕ್ಷರ ನುಡಿ ಬಿಡುಗಡೆ ಮಾಡುವರು. ಸಚಿವ ಹಾಲಪ್ಪ ಆಚಾರ ಮಳಿಗೆಗಳ ಉದ್ಘಾಟಿಸಲಿದ್ದಾರೆ.

ಗೋಷ್ಠಿಗಳು:

ಮಾ.5ರಂದು ಮಧ್ಯಾಹ್ನ 2 ಗಂಟೆಯಿಂದ ‘ಹೊಸ ಶಿಕ್ಷಣ ನೀತಿ ಒಂದು ಅವಲೋಕನ’ ಎಂಬ ವಿಷಯ ಕುರಿತು ನಡೆಯಲಿರುವ 1ನೇ ಗೋಷ್ಠಿಯ ಅಧ್ಯಕ್ಷತೆಯನ್ನು ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ವಹಿಸಲಿದ್ದಾರೆ. ಸಂಜೆ 5 ಗಂಟೆಯಿಂದ ‘ರಂಗಭೂಮಿ ಒಂದು ಅವಲೋಕನ’ ವಿಷಯ ಕುರಿತು ಎರಡನೇ ಗೋಷ್ಠಿ ನಡೆಯಲಿದ್ದು, ಆರ್‌.ಜಿ.ಹಳ್ಳಿ ನಾಗರಾಜ ಅಧ್ಯಕ್ಷತೆ ವಹಿಸುವರು. ಸಂಜೆ 7-30 ರಿಂದ ‘ನಗೋಣ ಬನ್ನಿ’ 3ನೇ ಗೋಷ್ಠಿಯ ಅಧ್ಯಕ್ಷತೆಯನ್ನು ಲಿಂಗಾರೆಡ್ಡಿ ಆಲೂರ ವಹಿಸಲಿದ್ದಾರೆ. ಮಾ.6ರಂದು ಬೆಳಿಗ್ಗೆ 10 ಗಂಟೆಗೆ 4ನೇ ಗೋಷ್ಠಿ ‘ಕವಿಗೋಷ್ಠಿ’ ಸಾಹಿತಿ ಡಾ.ಬಸವರಾಜ ಪೂಜಾರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಿಂಪಲ್‌ ಊಟದ ವ್ಯವಸ್ಥೆ:

ಸಮ್ಮೇಳನದಲ್ಲಿ ಊಟದ ಜವಾಬ್ದಾರಿ ಹೊತ್ತುಕೊಳ್ಳಲು ಕೊನೆ ಕ್ಷಣದಲ್ಲಿ ಗ್ರಾಪಂನವರು ನಿರಾಕರಿಸಿದ್ದರಿಂದ ಸಮ್ಮೇಳನ ನಡೆಸಲು ಅನುದಾನ ಕೊರತೆ ಎದುರಿಸುತ್ತಿರುವ ಕಸಾಪ ಪದಾಧಿಕಾರಿಗಳು ದಾನಿಗಳಿಂದ ದವಸ ಧಾನ್ಯ ಹಾಗೂ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ. ಭಾನುವಾರ ಬೆಳಿಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಶೇಂಗಾ ಚಟ್ನಿ, ಮಧ್ಯಾಹ್ನದ ಊಟಕ್ಕೆ ಹುಗ್ಗಿ, ಬದನೆಕಾಯಿ ಪಲ್ಲೆ, ಅನ್ನ ಸಾಂಬಾರ್‌, ರಾತ್ರಿ ಊಟಕ್ಕೆ ಅನ್ನ ಸಾಂಬಾರ್‌, ಸೋಮವಾರ ಬೆಳಗಿನ ಉಪಹಾರಕ್ಕೆ ಅವಲಕ್ಕಿ ವಗ್ಗರಣಿ, ಮಧ್ಯಾಹ್ನ ಉದುರು ಸಜ್ಜಕ, ಬದನೆಕಾಯಿ ಪಲ್ಲೆ, ಅನ್ನ ಸಾಂಬಾರ್‌ ವ್ಯವಸ್ಥೆ ಇರಲಿದೆ.

ಸಮ್ಮೇಳನ ಆಮಂತ್ರಣ ಪತ್ರಿಕೆಯಲ್ಲಿ ಮೃತರ ಹೆಸರು!

ಕುಷ್ಟಗಿ:: ತಾಲೂಕಿನ ಹನುಮಸಾಗರದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಮುದ್ರಿಸಲಾಗಿರುವ ಆಮಂತ್ರಣ ಪತ್ರಿಕೆಯಲ್ಲಿ ಮೃತಪಟ್ಟಮುಖ್ಯ ಶಿಕ್ಷಕ ಶಂಕರಪ್ಪ ನಾಟೇಕಾರ ಹೆಸರನ್ನು ಸಮ್ಮೇಳನದ ವಸತಿ ಸಮಿತಿಗೆ ನೇಮಿಸಿ ಕಸಾಪ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

12ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪಿಡಿಎಫ್‌ ಆಮಂತ್ರಣ ಪತ್ರಿಕೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೋಂದಾಯಿಸಲು ತಿಳಿಸಿರುವ ಹೆಸರನ್ನು ಹಾಕದೇ ಮೃತಪಟ್ಟಿರುವ ರಾಮಣ್ಣ ಚೌಡಕಿ ಎಂಬ ಚೌಡಕಿಪದ ಕಲಾವಿದರೊಬ್ಬರ ಹೆಸರು ಹಾಕುವ ಮೂಲಕ ಆಶ್ಚರ್ಯವನ್ನು ಸೃಷ್ಟಿಯಾಗುವಂತೆ ಮಾಡಿರುವ ಪರಿಷತ್ತು, ಅದರ ಬೆನ್ನಲ್ಲೆ ಮತ್ತೊಂದನ್ನು ಎಡವಟ್ಟು ಮಾಡಿಕೊಂಡಿದೆ.

ಗೊರೆಬಿಹಾಳ ಶಾಲೆಯ ಮುಖ್ಯ ಶಿಕ್ಷಕ ಶಂಕರಪ್ಪ ನಾಟೇಕಾರ್‌ ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಮೃತ ಮುಖ್ಯ ಶಿಕ್ಷಕನನ್ನು ವಸತಿ ಸಮಿತಿಯ ಪಟ್ಟಿಯಲ್ಲಿ ಸೇರಿಸಿರುವುದು ಕಸಾಪ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ.

ಕೊಪ್ಪಳ: ಕಿವಿಗೆ ಹೂ ಇಟ್ಕೊಂಡು ನಗರಸಭೆ ಬಿಜೆಪಿ ಸದಸ್ಯನ ವಿನೂತನ ಪ್ರತಿಭಟನೆ

ಮೃತರ ಹೆಸರನ್ನು ಸಮ್ಮೇಳನದ ಆಹ್ವಾನ ಪತ್ರದಲ್ಲಿ ಉಲ್ಲೇಖಿಸಿ ಸ್ವಯಂಕೃತ ತಪ್ಪಿಗೆ ವಿಪರೀತ ಮುಜುಗರ ಎದುರಿಸುವಂತಾಗಿದೆ. ಈ ಹಿಂದೆ ಹಾಕಿರುವ ರಾಮಣ್ಣ ಚೌಡಕಿ ಹೆಸರನ್ನು ಅಳಿಸಿ ಹಾಕುವ ಮೂಲಕ ಆಮಂತ್ರಣ ಪತ್ರಿಕೆಯನ್ನು ಹಂಚುತ್ತಿದ್ದಾಗ ಈ ವಿಷಯವು ಬಯಲಿಗೆ ಬಂದಿದೆ ಎನ್ನಲಾಗಿದೆ.

click me!