ವಾಹನದ ಸುಳಿವು ಸಹ ಸಿಗುತ್ತಿಲ್ಲ| ದೊಡ್ಡ ತಲೆನೋವಾಯಿತು ಪಿ. 1173 ಸಂಪರ್ಕದ ವ್ಯಕ್ತಿ| ಆ ಸಹ ಪ್ರಯಾಣಿಕ ಕೊಪ್ಪಳ ನಿವಾಸಿಯೇ?|ಕೊರೋನಾ ಸೋಂಕಿತ ಪ್ರಯಾಣಿಸಿದ ಟಾಟಾ ಏಸ್ ವಾಹನ ಈ ವರೆಗೂ ಪತ್ತೆಯಾಗಿಲ್ಲ. ಇದಕ್ಕಾಗಿ ಇನ್ನು ಪ್ರಯತ್ನ ನಡೆಯುತ್ತಲೇ ಇದೆ: ಜಿಲ್ಲಾಧಿಕಾರು ಪಿ. ಸುನೀಲ್‌ಕುಮಾರ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.27): ಮುಂಬೈನಿಂದ ಬಂದು ಕೋವಿಡ್-19 ಸೋಂಕಿಗೆ ತುತ್ತಾದ ವ್ಯಕ್ತಿ (ಪಿ.1173)ಯ ಸಹ ಪ್ರಯಾಣಿಕ ಮತ್ತು ಆತ ಪ್ರಯಾಣಿಸಿದ ಟಾಟಾ ಏಸ್ ವಾಹನ ಇದುವರೆಗೂ ಪತ್ತೆಯಾಗಿಲ್ಲ. ಕಳೆದೊಂದು ವಾರದಲ್ಲಿ ಕಣ್ಣಿಗೆ ಎಣ್ಣೆ ಹಾಕಿಕೊಂಡು ಜಿಲ್ಲಾಡಳಿತ ಶತಾಯ ಗತಾಯ ಶ್ರಮಿಸಿದರೂ ಪತ್ತೆಯಾಗದೆ ಇರುವುದು ಜಿಲ್ಲಾಡಳಿತಕ್ಕೆ ದೊಡ್ಡ ಆತಂಕವಾಗಿದೆ.
ಮುಂಬೈದಿಂದ ಬಂದಿರುವ ಈ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಇವರ ಸಹ ಪ್ರಯಾಣಿಕನ ಹೆಸರು ಶೇಖರಪ್ಪ ಮತ್ತು ಮಾಹಿತಿಗಾಗಿ ನೀಡಿದ ಮೊಬೈಲ್ ನಂಬರ್ ತಪ್ಪಾಗಿದೆ. ನೀಡಿದ ಮೊಬೈಲ್ ಸಂಖ್ಯೆ ತಮಿಳನಾಡಿನಲ್ಲಿ ಪತ್ತೆಯಾಗಿದೆ. ಇದರಿಂದ ಬೆಚ್ಚಿ ಬಿದ್ದಿರುವ ಜಿಲ್ಲಾಡಳಿತ ಸಾರ್ವಜನಿಕವಾಗಿಯೇ ಪ್ರಕಟಣೆಯನ್ನು ಕೋರಿ, ಶೇಖರಪ್ಪ ಎನ್ನುವ ವ್ಯಕ್ತಿಯ ಪತ್ತೆಗಾಗಿ ಮನವಿ ಮಾಡಿಕೊಂಡಿದೆ.
ಬ್ಯಾಂಕ್ ಉದ್ಯೋಗಿಗೆ ತಗುಲಿದ ಕೊರೋನಾ: ಆತಂಕದಲ್ಲಿ ಕೊಪ್ಪಳದ ಜನತೆ
ಕೊಪ್ಪಳದಲ್ಲಿಯೇ ಇದ್ದಾರೆ:
ಪಾಸಿಟಿವ್ ವ್ಯಕ್ತಿಯೊಂದಿಗೆ ಪ್ರಯಾಣಿಸಿರುವ ಈ ವ್ಯಕ್ತಿಯೂ ಕೊಪ್ಪಳದಲ್ಲಿಯೇ ಇದ್ದಾನೆ ಎನ್ನಲಾಗುತ್ತಿದೆ. ತಪ್ಪು ಮೊಬೈಲ್ ಸಂಖ್ಯೆ ನೀಡಿ, ತಪ್ಪು ಹೆಸರು ಹೇಳಿ ತಪ್ಪಿಸಿಕೊಂಡಿದ್ದಾನೆ. ಹೀಗಾಗಿ, ಇವರಿಂದ ಸೊಂಕು ಹರಡುವ ಸಾಧ್ಯತೆ ಇರುವುದರಿಂದ ಪತ್ತೆ ಮಾಡುವುದೇ ಜಿಲ್ಲಾಡಳಿತಕ್ಕೆ ಸವಾಲಿನ ಕಾರ್ಯವಾಗಿದೆ. ತಬ್ಲೀಘಿ ಬಳಿಕ ಈ ರೀತಿ ತಪ್ಪಿಸಿಕೊಂಡು ಸುತ್ತಾಡುತ್ತಿರುವ ಮೊದಲ ವ್ಯಕ್ತಿ ಎನ್ನಲಾಗುತ್ತಿದೆ. ತಾನು ಪ್ರಯಾಣಿಸಿದ ವ್ಯಕ್ತಿಗೆ ಸೊಂಕು ಇರುವುದು ಖಚಿತಪಟ್ಟಮೇಲೆಯಾದರೂ ಬಂದು ಕ್ವಾರಂಟೈನ್ ಆಗಬೇಕಾಗಿತ್ತು. ಆದರೆ ಹಾಗೆ ಮಾಡದೆ ಬಚ್ಚಿಟ್ಟುಕೊಂಡಿರುವುದರಿಂದ ತೀವ್ರ ಸಮಸ್ಯೆಯಾಗಿದೆ.
ಪತ್ತೆಯಾಗದ ವಾಹನ:
ಮುಂಬೈದಿಂದ ಬಂದಿರುವ 1173 ವ್ಯಕ್ತಿಯನ್ನು ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಕರೆತಂದಿರುವ ಟಾಟಾ ಏಸ್ ವಾಹನವನ್ನು ಪತ್ತೆ ಮಾಡಲು ಜಿಲ್ಲಾಡಳಿತ ಹರಸಾಹಸ ಮಾಡುತ್ತಿದೆ. ಸಿಸಿ ಕ್ಯಾಮೆರಾ ಪರಿಶೀಲಿಸಿದರೂ ವಾಹನ ಪತ್ತೆಯಾಗುತ್ತಿಲ್ಲ. ಈ ವಾಹನ ಎಲ್ಲಿಗೆ ಹೋಯಿತು? ಅದರಲ್ಲಿದ್ದ ಚಾಲಕ ಎಲ್ಲಿದ್ದಾನೆ? ಈತನ ಪ್ರಾಥಮಿಕ ಸಂಪರ್ಕದ ವ್ಯಕ್ತಿಯಾಗುವುದರಿಂದ ರೋಗ ಹರಡಲಿದೆ ಎಂದು ಜಿಲ್ಲಾಡಳಿತ ಆತಂಕಕ್ಕೆ ಒಳಗಾಗಿದೆ. ಇದಕ್ಕಾಗಿ ತಂಡವನ್ನೇ ರಚಿಸಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ವಾಹನದ ನೋಂದಣಿಯಾಗದೆ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.
ಅಧಿಕಾರಿಗೆ ಕ್ವಾರಂಟೈನ್:
ಇನ್ನೊಂದು ಪ್ರಕರಣದಲ್ಲಿ ಹಾಸನದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೋರ್ವರು ಪಾಸಿಟಿವ್ ಬಂದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದವರಾಗಿದ್ದಾರೆ. ಆದರೂ ಸಹ ಕೊಪ್ಪಳ ಬಳಿಯ ಐಆರ್‌ಬಿಗೆ ಆಗಮಿಸಿ, ಕುಟುಂಬದವರನ್ನು ಭೇಟಿಯಾಗಿ ಹೋಗಿದ್ದಾರೆ. ಇದು ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಅವರನ್ನು ಕ್ವಾರಂಟೈನ್ ಮಾಡಿದೆ. ತಿಳಿವಳಿಕೆ ಇರುವ ಅಧಿಕಾರಿಯೇ ಈ ರೀತಿ ಮಾಡಿರುವುದು ಈಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಪಿ. 1173 ಜತೆಗಿದ್ದ ಸಹ ಪ್ರಯಾಣಿಕ ಮತ್ತು ಅವರು ಪ್ರಯಾಣಿಸಿದ ಟಾಟಾ ಏಸ್ ವಾಹನ ಈ ವರೆಗೂ ಪತ್ತೆಯಾಗಿಲ್ಲ. ಇದಕ್ಕಾಗಿ ಇನ್ನು ಪ್ರಯತ್ನ ನಡೆಯುತ್ತಲೇ ಇದೆ ಎಂದು ಡಿಸಿ ಪಿ. ಸುನೀಲ್‌ಕುಮಾರ ಅವರು ತಿಳಿಸಿದ್ದಾರೆ.