
ಮೈಸೂರು : ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಭತ್ತದ ಚೀಲಗಳನ್ನು ಸಹಾಯಧನದ ಮೂಲಕ ವಿತರಿಸಲಾಗುತ್ತಿದೆ.
2023-24ನೇ ಸಾಲಿನ ಮುಂಗಾರು ಹಂಗಾಮು ಚುರುಕುಗೊಂಡಿದ್ದು, ತಾಲೂಕಿನಲ್ಲಿ ಭತ್ತದ ಬಿತ್ತನೆಗೆ ರೈತರು ಭರದಿಂದ ಸಿದ್ಧತೆ ನಡೆಸಿದ್ದಾರೆ. ತಾಲೂಕಿನ ಕಸಬಾ, ಜಯಪುರ, ಇಲವಾಲ ಮತ್ತು ವರುಣ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಹೆಚ್ಚುವರಿಯಾಗಿ ಮೆಲ್ಲಹಳ್ಳಿ, ಸಿದ್ದಲಿಂಗಪುರ ಮತ್ತು ನಾಗನಹಳ್ಳಿಯ ಕೃಷಿ ಪತ್ತಿನ ಸಹಾಕರ ಸಂಘಗಳಲ್ಲಿ ರೈತರಿಗೆ ಕೆ- ಕಿಸಾನ್ ವೆಬ್‌ಸೈಟ್ ಮೂಲಕ ಕ್ಯೂಆರ್ ಕೋಡ್ ಬಳಸಿಕೊಂಡು ಭತ್ತದ ಬಿತ್ತನೆ ಬೀಜದ ಚೀಲಗಳನ್ನು ಸಹಾಯಧನದ ಮೂಲಕ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ.
ಹಾಲಿ ಪ್ರತಿ ಕೆಜಿ ಭತ್ತಕ್ಕೆ ಸಾಮಾನ್ಯ ವರ್ಗದವರಿಗೆ . 8 ಹಾಗೂ ಪ.ಜಾತಿ, ಪ.ಪಂಗಡ ರೈತರಿಗೆ . 12ನಂತೆ ಸಹಾಯ ಧನ ನೀಡಲಾಗುತ್ತಿದೆ. ಈ ಸೌಲಭ್ಯ ಪಡೆಯಲು ರೈತರು ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್ ಅಥವಾ ಎಫ್‌ಐಡಿ ಸಂಕ?ಎ ನೀಡಬೇಕಿದ್ದು, ಹಾಲಿ ಎಂಟಿಯು- 1001, ಜಯ, ಐರ್- 64, ಜೆಜಿಎಲ್- 1784, ಜ್ಯೋತಿ, ತನು, ಆರ್‌ಎನ್‌ಆರ್ ತಳಿಯ ಬಿತ್ತನೆ ಬೀಜಗಳ ದಾಸ್ತಾನನ್ನು ರೈತರಿಗೆ ವಿತರಿಸಲಾಗುತ್ತಿದೆ.
ತಾಲೂಕಿನ ರೈತರು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಲು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ ಕೋರಿದ್ದಾರೆ.