ದೇವೇಗೌಡರೇ ನನ್ನನ್ನು ಕೆಣಕಬೇಡಿ : ಅನರ್ಹ ಶಾಸಕನ ವಾರ್ನಿಂಗ್

By Kannadaprabha NewsFirst Published Sep 15, 2019, 1:54 PM IST
Highlights

ಜೆಡಿಎಸ್ ಅನರ್ಹ ಶಾಸಕ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಸವಾಲು ಹಾಕಿದ್ದಾರೆ. 

ಕೆ.ಆರ್‌. ಪೇಟೆ [ಸೆ.15]:  ಮೊನ್ನೆ ಕೆ.ಆರ್‌.ಪೇಟೆಯಲ್ಲಿ ನಡೆದ ಜೆಡಿಎಸ್‌ ಸಭೆಯಲ್ಲಿ ನಾಯಕರು ನನ್ನನ್ನು ಹೀನಾಯವಾಗಿ ಹೀಯಾಳಿಸಿ ಹೋಗಿದ್ದಾರೆ. ನಾನು ಚಂಗ್ಲು, ಎಂಜಲು ಎಂತಲ್ಲಾ ಟೀಕಿಸಿದ್ದಾರೆ. ದೇವೇಗೌಡರ ಕುಟುಂಬ ಕುತಂತ್ರ, ತಂತ್ರಗಳನ್ನು ನಾನು ಬಯಲಿಗೆ ಎಳೆದು, ಜನರಿಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಕೆ.ಆರ್‌.ಪೇಟೆ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡರು  ಬಹಿರಂಗ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡರು, ನನ್ನ ಬಗ್ಗೆ ಜೆಡಿಎಸ್‌ ನಾಯಕರುಗಳು ಹೀನಾಯವಾಗಿ ಮಾತನಾಡಿದ್ದಾರೆ. ಕಳೆದ ಐದು ವರ್ಷದಿಂದ ಇವರ ಕುಟುಂಬ ಹಾಗೂ ದೇವೇಗೌಡರ ಹೆಣ್ಣು ಮಕ್ಕಳು ನನಗೆ ಎಷ್ಟುಮಾನಸಿಕ ಕಿರುಕುಳ ಕೊಟ್ಟಿದ್ದಾರೆ ಎಂಬುದು ರಾಜ್ಯಕ್ಕೆ ಗೊತ್ತಿರುವ ಸಂಗತಿ. ಗೌಡರ ಕುಟುಂಬದ ಅಣ್ಣ- ತಮ್ಮಂದಿರು ಈ ದೇಶಕ್ಕೆ ನೀಡುವ ಕೊಡುಗೆ ಏನು ಸ್ವಾಮಿ? ಕುಟುಂಬಕ್ಕೆ ಮಾತ್ರ ಇವರುಗಳು ಸೀಮಿತ, ಬೇರೆಯವರು ಉದ್ಧಾರ ಆಗುತ್ತಾರೆ ಎಂದರೆ ಗೌಡರ ಕುಟುಂಬ ಸಹಿಸುವುದಿಲ್ಲ ಎಂದರು.

ರೇವಣ್ಣ ನಂಗ್ಯಾಕೆ ಟಿಕೆಟ್‌ ಕೊಡಿಸಿದರು?

ಈ ರೇವಣ್ಣ ನನ್ನ ಚಂಗ್ಲು, ಎಂಜಲು ಎಂದು ಹೀಯಾಳಿಸಿದ್ದಾರೆ. ರೇವಣ್ಣನಿಗೆ ನಾಚಿಕೆ ಆಗಬೇಕು. ಅವರು ಹೋಟೆಲ… ಉದ್ಯಮ ಮಾಡಿಲ್ವಾ? ನನಗೆ ಟಿಕೆಚ್‌ ಏಕೆ ಕೊಟ್ಟರು? ಮಾಜಿ ಸ್ಪೀಕರ್‌ ಕೃಷ್ಣರನ್ನು ಕೆ.ಆರ್‌.ಪೇಟೆಯಿಂದ ಏಕೆ ಓಡಿಸಬೇಕಿತ್ತು. ರಾಜ್ಯದ ಎಲ್ಲಾ ಗುತ್ತಿಗೆದಾರರಿಗೂ ರೇವಣ್ಣನ ಹಣೆಬರಹ ಗೊತ್ತು. ನನಗೆ ಕೊಡೋದು, ತೆಗೆದುಕೊಳ್ಳೋದನ್ನು ಹೇಳಿ ಕೊಟ್ಟಿದ್ದೇ ಈ ರೇವಣ್ಣ. ಕಳೆದ ಬಾರಿ ಚುನಾವಣೆಯಲ್ಲಿ ನಿಲ್ಲಬಾರದು ಎಂದುಕೊಂಡಿದ್ದೆ. ಆದರೂ ನನ್ನನ್ನು ಕಣಕ್ಕೆ ಇಳಿಸಿದ್ದು ಯಾಕೆ ಗೊತ್ತಾ? ಅದೇ ರಹಸ್ಯ ಸಂಗತಿ ಸ್ವಾಮಿ ಎಂದು ವ್ಯಂಗ್ಯವಾಗಿ ಹೇಳಿದರು.

ನೀವು ದೇಶ ಪ್ರೇಮಿಯಲ್ಲ, ಕುಟುಂಬ ಪ್ರೇಮಿ:

ಈ ದೇವೇಗೌಡರ ಕೈಲಿ ತಮ್ಮ ಮಕ್ಕಳು, ಕುಟುಂಬದವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲಿನಿಂದಲೂ ಕುಟುಂಬ, ಕುಟುಂಬ ಅಂತ ಸಲುಗೆ ತೋರಿಸಿದರು. ಈಗ ದೇವೇಗೌಡರು ಒಕ್ಕಲಿಗನಾಗಿ ಹುಟ್ಟಬಾರದಿತ್ತು ಎನ್ನುತ್ತಾರೆ. ಎಷ್ಟುಮಂದಿ ಒಕ್ಕಲಿಗ ನಾಯಕರನ್ನು ಇವರು ಮತ್ತು ಇವರ ಕುಟುಂಬ ಬೆಳೆಯಲು ಬಿಟ್ಟಿಗೆ ಹೇಳಿ ನೋಡೋಣ ಎಂದು ಪ್ರಶ್ನೆ ಮಾಡಿ, ದೇವೇಗೌಡರನ್ನು ಸಿಎಂ, ಪಿಎಂ ಮಾಡಿದ್ದು ಈ ಒಕ್ಕಲಿಗರು. ದೇವೇಗೌಡರು ದೇಶ ಪ್ರೇಮಿಯಾಗಲಿ, ಕುಟುಂಬದ ಪ್ರೇಮಿಯಾಗೋದು ಬೇಡ ಎನ್ನುವ ಕಾರಣಕ್ಕಾಗಿ. ಆದರೆ ಇವರುಗಳು ಕುಟುಂಬಕ್ಕೆ ಸೀಮಿತವಾದರು. ಬೇರೆಯವರನ್ನು ತುಳಿಯಲು ಮುಂದಾದರು. ದೇವೇಗೌಡರೇ ನನ್ನನ್ನು ಕೆಣಕಬೇಡಿ ಹುಷಾರ್‌.. ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೇವಣ್ಣ ಸತ್ಯ ಹರಿಶ್ಚಚಂದ್ರನಲ್ಲ:

ದೋಸ್ತಿ ಸರ್ಕಾರದಲ್ಲಿ ರೇವಣ್ಣ ಜೆಡಿಎಸ್‌ ಶಾಸಕರಿಗೆ ಸಾಕಷ್ಟುಕಿರುಕುಳ ಕೊಟ್ಟರು. ರೇವಣ್ಣನ ಬಳಿ ಅನುದಾನಕ್ಕಾಗಿ ಅವರ ಕಚೇರಿಗೆ ಹೋದರೆ ದನಗಳ ರೀತಿಯಲ್ಲಿ ಬೆದರಿಸಿ ಕಳುಹಿಸುತ್ತಿದ್ದರು. ರೇವಣ್ಣ ಸತ್ಯಹರಿಶ್ಚಂದ್ರನಲ್ಲ. ಈ ಪುಣ್ಯಾತ್ಮನೇ ದೋಸ್ತಿ ಸರ್ಕಾರ ಬೀಳಲು ನೇರ ಕಾರಣ ಎಂದರು.

ಅನುದಾನ ಕೊಟ್ಟಿದ್ದರೆ ಧರ್ಮಸ್ಥಳದಲ್ಲಿ ಆಣೆ ಮಾಡಿ:

ಮಾಜಿ ಸಚಿವ ಪುಟ್ಟರಾಜು ಒಬ್ಬ ಮಾಹಾನ್‌ ಸುಳ್ಳುಗಾರ. ಅವರು ಸಂಸದರಾಗಿದ್ದಾಗ ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು? ನಾವು ಓಟು ಹಾಕಿರಲಿಲ್ವಾ? ಜಿಲ್ಲಾ ಮಂತ್ರಿಯಾಗಿ ಎಷ್ಟುಅನುದಾನ ಕೊಟ್ರಿ. ನೀವು ದೇವೇಗೌಡರ ಕುಟುಂಬದ ಭಕ್ತ. ಕೆ.ಆರ್‌.ಪೇಟೆ ಸಾಕಷ್ಟುಅನುದಾನ ಕೊಟ್ಟಿದ್ದೇವೆ ಎಂದು ಸಮಾವೇಶದ ದಿನ ಬೊಬ್ಬೆ ಹೊಡೆದಿದ್ದೀರಾ.. ಬನ್ನಿ ಧರ್ಮಸ್ಥಳ ಹೋಗಿ ಆಣೆ- ಪ್ರಮಾಣ ಮಾಡೋಣ. ಎಷ್ಟುಅನುದಾನ ಕೊಟ್ರಿ ಎಂಬುದನ್ನು ಸ್ವಾಮಿ ಮುಂದೆ ಹೇಳಿ ಎಂದು ಮಾಜಿ ಸಚಿವ ಪುಟ್ಟರಾಜು ಅವರನ್ನು ಕುಟುಕಿದರು.

ಜೆಡಿಎಸ್‌ ಪಕ್ಷದಲ್ಲಿ ಇದುವರೆಗೂ ಯಾರನ್ನು ಬೆಳೆಯಲು ಬಿಟ್ಟಿಲ್ಲ. ನನಗೆ ಎಷ್ಟುಕಿರುಕುಳ ಕೊಟ್ಟರೂ ಕೂಡ ನಾನು ಕ್ಷೇತ್ರ ಬಿಟ್ಟು ಹೋಗಲ್ಲ. ದೇವೇಗೌಡರ ಬಗ್ಗೆ ಗೌರವವಿದೆ. ಆ ಗೌರವವನ್ನು ಕಳೆದುಕೊಳ್ಳಬೇಡಿ. ದೇವೇಗೌಡರಿಗೆ ಅವರ ಕುಟುಂಬ ಬಿಟ್ಟು ಇನ್ಯಾರು ಬೆಳಿಬಾರದೆಂಬ ಭಾವನೆ ಬದಲಾಗಬೇಕು. ದೋಸ್ತಿ ಸರ್ಕಾರದಲ್ಲಿ ಬೇರೆ ವ್ಯಕ್ತಿಯನ್ನು ಸಿಎಂ ಮಾಡಬಹುದಿತ್ತು. ಈ ಹಿಂದೆ ಕಾಂಗ್ರೆಸ್‌- ಜೆಡಿಎಸ್‌ ಸರ್ಕಾರದಲ್ಲಿ ಮಗನಿಗೆ ಸಿಎಂ ಸ್ಥಾನ ಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದರು. ನಂತರ ಅಪ್ಪ ಮಕ್ಕಳು ವಚನ ಭ್ರಷ್ಟರಾದರು. ದೇವೇಗೌಡರು ಮಾಡಿದ ದ್ರೋಹಗಳನ್ನು ರಾಜ್ಯದ ಜನ ಮರೆತಿಲ್ಲ ಸ್ವಾಮಿ. ಈ ಕುಮಾರಸ್ವಾಮಿ ಅಂತು ಅನುದಾನ ಕೊಡಲಿಲ್ಲ. ನಮ್ಮ ಯಡಿಯೂರಪ್ಪ ಕೊಡ್ತಾರೆ. ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ ಕಾದು ನೋಡಿ ಎಂದು ಸವಾಲು ಹಾಕಿದರು.

ಸುಪ್ರಿಂ ಕೋರ್ಟ್‌ ಹಾಕಿಕೊಂಡು ರುಬ್ಬುತ್ತಿದೆ:

ಅನರ್ಹ ಶಾಸಕರನ್ನು ಸುಪ್ರೀಂ ಕೋರ್ಟ್‌ ಹಾಕಿಕೊಂಡು ರುಬ್ಬುತ್ತಿದೆ. ನಮ್ಮ ದುಡ್ಡನ್ನೇ ಖರ್ಚು ಮಾಡಿ ಸುಪ್ರೀಂಕೋಟ್‌ನಲ್ಲಿ ಪ್ರಕರಣ ನಡೆಸುತ್ತಿದ್ದೇವೆ. ಬಿಜೆಪಿ ಅವರು ನಮಗೆ ಖರ್ಚಿಗೆ ಹಣ ಕೊಟ್ಟಿಲ್ಲ. ನಿನ್ನೆ ಸುಧಾಕರ್‌ ಮನೆಯಲ್ಲಿ ಅನರ್ಹ ಶಾಸಕರ ಸೇರಿದ್ದು ನಿಜ. ಸುಧಾಕರ್‌ ಹುಟ್ಟುಹಬ್ಬದ ಅಂಗವಾಗಿ ಅವರ ಮನೆಯಲ್ಲಿ ಕಾರ್ಯಕ್ರಮ ಇತ್ತು. ಊಟಕ್ಕೆ ಹೋಗಿ ಬಂದಿದ್ದೆವು. ಈ ಸಮ್ಮಿಶ್ರ ಸರ್ಕಾರ ಬೀಳಿಸಲು ನಾವೆಲ್ಲಾ ಶಾಸಕರು ಸಾಕಷ್ಟುಶ್ರಮ ಪಟ್ಟಿದ್ದೇವೆ, ಒಂದಾಗಿ ಮಾತನಾಡಿದ್ದೇವೆ. ಮುಂದಿನ ನಡೆ ಕುರಿತು ಚರ್ಚೆ ಮಾಡಿದೆವು ಎಂದು ಹೇಳಿದರು.

click me!