Latest Videos

ವಿಜಯಪುರದಲ್ಲಿ ಸೈಕ್ಲಿಂಗ್ ಅಕಾಡೆಮಿಗೆ ಸಿಎಂ ಜತೆ ಚರ್ಚೆ: ಸಚಿವ ಎಂ.ಬಿ.ಪಾಟೀಲ್‌

By Kannadaprabha NewsFirst Published Jan 11, 2024, 11:59 PM IST
Highlights

ವಿಜಯಪುರದಲ್ಲಿ ಸೈಕ್ಲಿಂಗ್ ಅಕಾಡೆಮಿ ಸ್ಥಾಪಿಸಲು ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರ ಜೊತೆ ಚರ್ಚಿಸಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು. 
 

ವಿಜಯಪುರ (ಜ.11): ವಿಜಯಪುರದಲ್ಲಿ ಸೈಕ್ಲಿಂಗ್ ಅಕಾಡೆಮಿ ಸ್ಥಾಪಿಸಲು ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರ ಜೊತೆ ಚರ್ಚಿಸಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು. ನಗರದಲ್ಲಿ ಕರ್ನಾಟಕ ರಾಜ್ಯ ಅಮೇಚೂರ್ ಸೈಕ್ಲಿಂಗ್ ಸಂಸ್ಥೆಯಿಂದ ನಡೆಯಲಿರುವ ನಾಲ್ಕು ದಿನಗಳ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಜಯಪುರದಲ್ಲಿ ಸೈಕ್ಲಿಂಗ್ ವೆಲೊಡ್ರಂ ಕಾಮಗಾರಿ ಶೀಘ್ರದಲ್ಲಿ ಪೂರ್ಣವಾಗಲಿದೆ. ಅದಕ್ಕೆ ಅಗತ್ಯವಾಗಿರುವ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಲಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ವಿಜಯಪುರದಲ್ಲಿ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಬೇಕಿರುವ ಅತ್ಯುತ್ತಮ ಹವಾಮಾನ ಮತ್ತು ಪೂರಕ ವಾತಾರವಣವಿದೆ. ಅಲ್ಲದೇ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟ್‌ಗಳು ರೋಡ್ ಸೈಕ್ಲಿಂಗ್‌ನಲ್ಲಿ ರಾಷ್ಟ್ರಾದ್ಯಂತ ಹೆಸರು ಮಾಡಿದ್ದಾರೆ. ಹೀಗಾಗಿ ಇಲ್ಲಿ ಸೈಕ್ಲಿಂಗ್ ಅಕಾಡೆಮಿ ಸ್ಥಾಪನೆಯಿಂದ ರೋಡ್ ಸೈಕ್ಲಿಂಗ್, ವೆಲೋಡ್ರಂ ಸೈಕ್ಲಿಂಗ್ ಮತ್ತು ಗುಡ್ಡಗಾಡು ಸೈಕ್ಲಿಂಗ್ ಸ್ಪರ್ಧಿಗಳಿಗೂ ಅನುಕೂಲವಾಗಲಿದೆ ಎಂದು ವಿವರಿಸಿದರು.

ಕೊಡಗು ಜಿಲ್ಲೆಯ 10 ಸಾವಿರ ಜನರಿಗಿಲ್ಲ ಗೃಹಜ್ಯೋತಿ ಭಾಗ್ಯ: ಕಾಫಿತೋಟದ ಕೂಲಿಕಾರರೇ ಯೋಜನೆಯಿಂದ ವಂಚಿತರು!

ಈ ಅಕಾಡೆಮಿ ಸ್ಥಾಪನೆಯಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳು ಸೈಕ್ಲಿಸ್ಟ್‌ಗಳಿಗೆ ಸಿಗಲಿವೆ. ಅಲ್ಲದೇ, ಸ್ಥಳೀಯ ಬಡ ಮತ್ತು ಪ್ರತಿಭಾವಂತ ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗಲಿದೆ. ಇದಕ್ಕಾಗಿ ಇಲಾಖೆಯ ಸಿಎಸ್ಆರ್ ಫಂಡ್ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯಿಂದಲೂ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ತೋರುವ ಓರ್ವ ಕ್ರೀಡಾಪಟು ಮತ್ತು ತಂಡ ಗೆಲ್ಲಬಹುದು. ಆದರೆ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯವಾಗಿದೆ. ದೇಶದ ನಾನಾ ರಾಜ್ಯಗಳಿಂದ ಇಲ್ಲಿಗೆ ಬಂದಿರುವ ಕ್ರೀಡಾಪಟುಗಳು ಇಲ್ಲಿನ ಗೋಳಗುಮ್ಮಟ, ಕಪ್ಪು ತಾಜಮಹಲ್ ಎಂದೇ ಹೆಸರಾಗಿರುವ ಇಬ್ರಾಹಿಂ ರೋಜಾ, ಬಾರಾ ಕಮಾನ್ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಸುಂದರ ನೆನಪುಗಳೊಂದಿಗೆ ನಿಮ್ಮೂರಿಗೆ ಮರಳಿ ಎಂದು ಸಲಹೆ ನೀಡಿದರು.

ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ರಾಜು ಬಿರಾದಾರ ಮಾತನಾಡಿ, ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ಮತ್ತಿತರರು ಸೈಕ್ಲಿಂಗ್‌ಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಹೀಗಾಗಿ ಈವರೆಗೆ ನಡೆದ ಒಟ್ಟು 28 ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಕ್ರೀಡಾಕೂಟಗಳಲ್ಲಿ ವಿಜಯಪುರ ಜಿಲ್ಲೆಯ ಸೈಕ್ಲಿಸ್ಟ್‌ಗಳು 13 ಬಾರಿ ಜನರಲ್ ಚಾಂಪಿಯನ್‌ ಆಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದರು.

ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮಣಿಂದರ ಪಾಲಸಿಂಗ್, ಶಾಸಕ ವಿಠ್ಠಲ ಕಟಕದೊಂಡ, ಪ್ರಕಾಶ ರಾಠೋಡ, ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಕುರಣಿ ಹಾಜರಿದ್ದರು. ಇದಕ್ಕೂ ಮೊದಲು ಸಚಿವರು ನಾನಾ ರಾಜ್ಯಗಳಿಂದ ಆಗಮಿಸಿದ ಸೈಕ್ಲಿಸ್ಟ್‌ಗಳ ಜೊತೆ ಸೈಕ್ಲಿಂಗ್ ವಿಷಯಗಳ ಕುರಿತು ಮಾಹಿತಿ ಪಡೆದರು.

ಮೊದಲ ದಿನ ಫಲಿತಾಂಶ: ೧೮ ವರ್ಷದೊಳಗಿನ ಬಾಲಕಿಯರ ೨೦ ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್‌ನಲ್ಲಿ ರಾಜಸ್ಥಾನದ ಹರ್ಷಿತಾ ಜಕಾರ ೨೯ ನಿ ೨೭:೨೧೦ ಸೆ. ಪ್ರಥಮ. ಕರ್ನಾಟಕ ನಂದಾ ಚಿಚಖಂಡಿ ೩೦ ನಿ೧೮:೦೨೯ ಸೆ. ದ್ವಿತೀಯ ಹಾಗೂ ಕರ್ನಾಟಕದ ಅನುಪಮಾ ಗುಳೇದ ೩೦ ನಿ೪೯:೬೪೯ ಸೆ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ೧೬ ವರ್ಷದೊಳಗಿನ ಬಾಲಕರ ೨೦ ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್‌ನಲ್ಲಿ ರಾಜಸ್ಥಾನದ ಶೌರ್ಯ ಶೇರೋನ್ ೨೬ ೨೪:೧೨೬ ಸೆ. ಪ್ರಥಮ. ರಾಜಸ್ಥಾನದ ರಾಧಾಕಿಶನ್ ಹುಡ್ಡಾ ೨೬ನಿ ೫೧:೧೮೪ ಸೆ ದ್ವಿತೀಯ ಹಾಗೂ ಕರ್ನಾಟಕದ ಯಲ್ಲೇಶ ಹುಡೇದ ೨೭ನಿ೦೬:೪೨೦ ಸೆ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ತಪ್ಪಿಸಲು ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ!

೨೩ ವರ್ಷದೊಳಗಿನ ಪುರುಷರ ೪೦ ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್‌ನಲ್ಲಿ ರಾಜಸ್ಥಾನದ ಮಾನವ ಸರ್ದಾ. ೫೨ನಿ೪೭:೩೫೬ ಸೆ. ಪ್ರಥಮ, ಚಂಡೀಗಡದ ದುಶ್ಯಂತ ಬೇನಿವಾಲ ೫೩ನಿ೦೯:೮೪೦ ಸೆ. ದ್ವಿತೀಯ ಹಾಗೂ ಹರಿಯಾಣದ ಸಾಹಿಲ್. ೫೩ನಿ೫೯:೦೭೦ ಸೆ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪುರುಷರ ೪೦ ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್‌ನಲ್ಲಿ ಕರ್ನಾಟಕದ ನವೀನ್ ಜಾನ್ ೪೯ನಿ ೫೧:೯೭೭ ಸೆ. ಪ್ರಥಮ, ದಿನೇಶಕುಮಾರ ಸರ್ವಿಸಸ್ ೫೧ನಿ೦೮:೭೫೬ ಸೆ ದ್ವಿತೀಯ ಹಾಗೂ ತಮಿಳುನಾಡು ಜೋಯಲ್ ಸಂತೋಷ ಸುಂದರಂ ಎಸ್. ೫೧ನಿ೨೮:೨೯೩ ಸೆ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

click me!