ಹುಣಸೂರು ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ : ಸಾಮೂಹಿಕ ರಾಜೀನಾಮೆಗೆ ಮುಂದು

Published : Apr 16, 2023, 08:54 AM ISTUpdated : Apr 16, 2023, 09:50 AM IST
   ಹುಣಸೂರು ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ : ಸಾಮೂಹಿಕ ರಾಜೀನಾಮೆಗೆ ಮುಂದು

ಸಾರಾಂಶ

ಹುಣಸೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್‌ ಆಯ್ಕೆಯ ವಿರುದ್ಧ ತಾಲೂಕು ಬಿಜೆಪಿ ಘಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.

 ಹುಣಸೂರು :  ಹುಣಸೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್‌ ಆಯ್ಕೆಯ ವಿರುದ್ಧ ತಾಲೂಕು ಬಿಜೆಪಿ ಘಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.

ಪಟ್ಟಣದ ನಗರಮಂಡಲ ಅಧ್ಯಕ್ಷ ಗಣೇಶ್‌ ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಹಾ ಶಕ್ತಿಕೇಂದ್ರ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಮತ್ತು ಸದಸ್ಯರ ಸಭೆಯಲ್ಲಿ ಅಭ್ಯರ್ಥಿಯ ಆಯ್ಕೆ ಕುರಿತು ತೀವ್ರ ವಿರೋಧ ವ್ಯಕ್ತವಾಯಿತು.

ಬಹುತೇಕ ಮುಖಂಡರು ಹೈಕಮಾಂಡ್‌ ಅಭ್ಯರ್ಥಿಯ ಆಯ್ಕೆಯಲ್ಲಿ ಪಕ್ಷಕ್ಕಾಗಿ ದಶಕಗಳಿಂದ ದುಡಿದ ನಾಯಕರನ್ನು ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ಥಳೀಯವಾಗಿ ಪಕ್ಷದ ಕಟ್ಟಾಳುಗಳಾಗಿ ದುಡಿದ ನಮ್ಮನ್ನು ಪಕ್ಷ ಕಡೆಗಣಿಸಿರುವುದು ಸರಿಯಲ್ಲ. 30-40ವರ್ಷಗಳಿಂದ ಪಕ್ಷದ ಬಾವುಟವನ್ನು ಹಿಡಿದು ತಾಲೂಕಿನಾದ್ಯಂತ ಪಕ್ಷ ಸಂಘಟನೆ ಮಾಡಿದ್ದೇವೆ. ಹೀಗಿರುವಾಗ 3 ತಿಂಗಳ ಹಿಂದೆ ಬಂದ ವ್ಯಕ್ತಿಗೆ ಟಿಕೆಟ್‌ ನೀಡುವುದಾದರೆ ಅರ್ಥವೇನು? ಪಕ್ಷದ ತತ್ವ ಸಿದ್ದಾಂತ ಗೊತ್ತಿಲ್ಲದ ವ್ಯಕ್ತಿಗೆ ಟಿಕೆಟ್‌ ನೀಡಿದ್ದು ಸರಿಯೇ? ಅಭ್ಯರ್ಥಿಯ ಆಯ್ಕೆ ಕುರಿತಂತೆ ಅಭಿಪ್ರಾಯ ಸಂಗ್ರಹಕ್ಕಾಗಿ ಜಿಲ್ಲಾ ಸಮಿತಿ ನಡೆಸಿದ ಚುನಾವಣೆಯ ಫಲಿತಾಂಶವೇನು ಅದರ ಪ್ರಯೋಜನವೇನು ಎನ್ನುವುದು ತಿಳಿದಿಲ್ಲ. ಪಕ್ಷದ ಈ ನಿರ್ಧಾರದಿಂದ ತಾಲೂಕು ಘಟಕದ ಬಹುತೇಕರು ಅಸಮಾಧಾನಗೊಂಡಿದ್ದಾರೆ ಎಂದು ಬೇಸರಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್‌ ಮತ್ತು ಚುನಾವಣಾ ಸಂಚಾಲಕ ಮಹದೇವಯ್ಯ ಸದಸ್ಯರನ್ನು ಸಮಾಧಾನಿಸಲು ನಿಂತಾಗ ಅವರಿಗೆ ಮಾತನಾಡಲು ಅವಕಾಶ ನೀಡದೇ Nೕರಾವ್‌ ಮಾಡಲಾಯಿತು. ನೀವು ಅಭ್ಯರ್ಥಿಯನ್ನು ಬದಲಿಸಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದರು. ಸದಸ್ಯರ ಆಕ್ರೋಶವನ್ನು ಗಮನಿಸಿದ ಜಿಲ್ಲಾಧ್ಯಕ್ಷರು, ಸಭೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳ ಅಭಿಪ್ರಾಯದ ಕುರಿತು ವರಿಷ್ಠರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿ ಸಭೆಯಿಂದ ನಿರ್ಗಮಿಸಿದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಯೋಗಾನಂದಕುಮಾರ್‌, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ನಗರ ಮಂಡಲ ಅಧ್ಯಕ್ಷ ಗಣೇಶ್‌ ಕುಮಾರಸ್ವಾಮಿ, ರೈತಮೋರ್ಚಾ ಜಿಲ್ಲಾಧ್ಯಕ್ಷ ಜಾಬಗೆರೆ ರಮೇಶ್‌, ಮುಖಂಡರಾದ ನಾಗರಾಜ ಮಲ್ಲಾಢಿ, ಹನಗೋಡು ಮಂಜುನಾಥ್‌, ಎಸ್ಟಿಮೋರ್ಚಾ ಅಧ್ಯಕ್ಷ ಅಣ್ಣಯ್ಯನಾಯಕ, ಮಹದೇವ ಹೆಗ್ಗಡೆ, ಚಂದ್ರಶೇಖರ್‌, ಸೂರ್ಯ ಕುಮಾರ್‌ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

PREV
Read more Articles on
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!