ತಾಲೂಕಿನ ಸಿ.ಎನ್ ದುರ್ಗಾ ಹೋಬಳಿಯ ತೋವಿನಕೆರೆ ಗ್ರಾಮದಲ್ಲಿ ರೈತರಿಂದ ತಾಜಾ ತರಕಾರಿ ನೇರ ಮಾರಾಟವಾಗುತ್ತಿದೆ.
ಕೊರಟಗೆರೆ : ತಾಲೂಕಿನ ಸಿ.ಎನ್ ದುರ್ಗಾ ಹೋಬಳಿಯ ತೋವಿನಕೆರೆ ಗ್ರಾಮದಲ್ಲಿ ರೈತರಿಂದ ತಾಜಾ ತರಕಾರಿ ನೇರ ಮಾರಾಟವಾಗುತ್ತಿದೆ.
ಸರ್ಕಾರ ಬೆಳೆಗಾರರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಕೋಟ್ಯಾಂತರ ರು. ಖರ್ಚು ಮಾಡುತ್ತಿದ್ದು, ಹಲವು ಸೌಲಭ್ಯಗಳನ್ನು ರೂಪಿಸುತ್ತಿದೆ. ತೋವಿನಕೆರೆಯ ಸುತ್ತಮುತ್ತಲಿನ ಪ್ರದೇಶಗಳ ಹೆಚ್ಚಿನ ರೈತರು ತಾವು ಬೆಳೆದ ಹೂವು, , ಸೊಪ್ಪು ಮತ್ತು ವೀಳ್ಯದೆಲೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಹಲವು ದಶಕಗಳಿಂದ ನಡೆಯುತ್ತಿದೆ. ಅವರೆಕಾಯಿ, ತೊಗರಿ ಕಾಯಿ ಸುಗ್ಗಿಯ ಕಾಲದಲ್ಲಿ ಪ್ರತಿ ದಿನ ಕ್ವಿಂಟಲ್ ಗಟ್ಟಲೇ ಮಾರಾಟವಾಗುತ್ತದೆ.
undefined
ತೋವಿನಕೆರೆ ಮಾರ್ಗದಲ್ಲಿ ಪ್ರಯಾಣ ಮಾಡುವ ವಾಹನ ಸವಾರರು ಮನೆಗೆ ಬೇಕಾದ ತರಕಾರಿ ಸೊಪ್ಪುಗಳನ್ನು ಖರೀದಿ ಮಾಡುತ್ತಾರೆ. ರೈತರು ಜಮೀನಿನಲ್ಲಿ ಅವರೆಕಾಯಿ ತೊಗರಿಕಾಯಿ ಕಿತ್ತ ಕೆಲವೇ ನಿಮಿಷಗಳಲ್ಲಿ ಮಾರಾಟಕ್ಕೆ ತರುವುದರಿಂದ ಅವರೆಕಾಯಿಯ ಸೊಗಡು ಕೈಗೆ ಅಂಟುತ್ತದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ತಾಜಾ ಅವರೆ, ತೊಗರಿ ಕಾಯಿಯನ್ನು ಮಾರಾಟ ಮಾಡುತ್ತಾರೆ. ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಬಸ್ ನಿಲ್ದಾಣದಲ್ಲಿ ರೈತ ಮಾರಾಟಗಾರರು ಕಾಣುತ್ತಾರೆ. ಸುತ್ತಮುತ್ತಲಿನ ಐವತ್ತುಕ್ಕೂ ಹೆಚ್ಚು ಹಳ್ಳಿಗಳ ರೈತರಿಗೆ ನೆಮ್ಮದಿ ನೀಡಿದೆ.
ಸ್ವಾಭಾವಿಕವಾಗಿ ಜಮೀನಿನಲ್ಲಿ ಬೆಳೆದ ಅಣಬೆಗೆ ಹೆಚ್ಚು ಬೇಡಿಕೆ ಇದ್ದು, ಸಿಗದೇ ನಿರಾಶೆಯಾಗಿ ಹೋಗುವವರೆ ಹೆಚ್ಚಾಗಿದ್ದಾರೆ. ರೈತರಿಗೆ ವ್ಯವಸ್ಥಿತವಾಗಿ ಕುಳಿತು ಮಾರಾಟ ಮಾಡಲು ಸಾಧ್ಯವಿಲ್ಲ. ಮುಖ್ಯವಾದ ರಸ್ತೆ ಬದಿ ಮಾರುತ್ತಾರೆ. ಓಡಾಡುವ ವಾಹನ ಸವಾರರ ಕಣ್ಣಿಗೆ ಕಾಣುವುದರಿಂದ ಇದೆ ಅನುಕೂಲ ಎನ್ನುತ್ತಾರೆ ಹೆಚ್ಚಿನ ರೈತರು. ಮಧ್ಯವರ್ತಿಗಳು ಅನೇಕ ಬಾರಿ ರೈತರ ಹೆಸರಿನಲ್ಲಿ ತುಮಕೂರು ಮಾರುಕಟ್ಟೆಯಿಂದ ತಂದು ಮಾರಾಟ ಮಾಡುತ್ತಿರುತ್ತಾರೆ.
ಒಟ್ಟಾರೆಯಾಗಿ ರೈತರು ತಾವು ಬೆಳೆದ ಹಣ್ಣು, ತರಕಾರಿಗಳನ್ನು ತಾವೇ ಮಾರಟ ಮಾಡುವುದರಿಂದ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಲಗೇಜು ಚಾರ್ಜ್ ಉಳಿದು ಮತ್ತು ದಲ್ಲಾಳಿಗಳ ಹಾವಳಿ ತಪ್ಪಿದೆ. ಜೊತಗೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಆಗಿಂದಾಗ್ಗೆ ರೈತರಿಗೆ ಹಣ ಸಿಗುತ್ತಿರುವುದರಿಂದ ರೈತರ ಮುಖದಲ್ಲಿ ಸಂತೋಷ ಮನೆಮಾಡಿದೆ.