
ಬೆಂಗಳೂರು (ಸೆ.20): ಕರ್ನಾಟಕದಲ್ಲಿ ಸೆ. 22 ರಿಂದ ನಡೆಸಲಾಗುವ ಜಾತಿ ಜನಗಣತಿಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ನಂತರ ಈಗ ಬ್ರಾಹ್ಮಣ ಉಪಪಂಗಡಗಳ ಪಟ್ಟಿಯಲ್ಲಿ ಗೊಂದಲಗಳು ಕಂಡುಬಂದಿವೆ. ಈ ಕುರಿತು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಚಿವ ದಿನೇಶ್ ಗುಂಡೂರಾವ್, ಪಟ್ಟಿಯನ್ನು ಪರಿಷ್ಕರಿಸುವಂತೆ ಸಲಹೆ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರ ಪ್ರಕಾರ, ಈ ಪಟ್ಟಿಯಲ್ಲಿ ಹಲವು ಪ್ರಮಾದಗಳಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಎರಡು ಅಂಶಗಳನ್ನು ಅವರು ಎತ್ತಿ ತೋರಿಸಿದ್ದಾರೆ:
ಜಾತಿ ಪಟ್ಟಿಯಲ್ಲಿ ಬ್ರಾಹ್ಮಣ ಮತ್ತು ಅದರ ಉಪಪಂಗಡಗಳನ್ನು ಬೇರೆ ಬೇರೆ ಕ್ರಮ ಸಂಖ್ಯೆಗಳಲ್ಲಿ ನಮೂದಿಸಲಾಗಿದೆ. ಉದಾಹರಣೆಗೆ ಕ್ರಮ ಸಂಖ್ಯೆ 210 - ಬ್ರಾಹ್ಮಣ, ಕ್ರಮ ಸಂಖ್ಯೆ 1216 - ಸ್ಮಾರ್ತ ಬ್ರಾಹ್ಮಣ, ಕ್ರಮ ಸಂಖ್ಯೆ 477 - ಹೊಯ್ಸಳ ಕರ್ನಾಟಕ. ಇದೇ ರೀತಿ ಮಾಧ್ವ ಬ್ರಾಹ್ಮಣ, ಶ್ರೀವೈಷ್ಣವ ಬ್ರಾಹ್ಮಣ ಮುಂತಾದ ಉಪಪಂಗಡಗಳ ಬಗ್ಗೆಯೂ ಗೊಂದಲಗಳಿವೆ. ಒಂದೇ ಬ್ರಾಹ್ಮಣ ಜಾತಿಯ ವಿವಿಧ ಉಪಪಂಗಡಗಳನ್ನು ಇಂಗ್ಲೀಷ್ ಅಕ್ಷರಾನುಸಾರ ಬೇರೆ ಬೇರೆ ಕ್ರಮ ಸಂಖ್ಯೆಗಳಲ್ಲಿ ನಮೂದಿಸಲಾಗಿದೆ ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಬ್ರಾಹ್ಮಣ, ಸ್ಮಾರ್ತ ಬ್ರಾಹ್ಮಣ ಮತ್ತು ಹೊಯ್ಸಳ ಕರ್ನಾಟಕ ಎಂದು ಗುರುತಿಸಿಕೊಳ್ಳಲು ಹೇಗೆ ಸಾಧ್ಯ. ಇದರಿಂದ ಜನಗಣತಿಯಲ್ಲಿ ಗೊಂದಲ ಉಂಟಾಗುತ್ತದೆ ಎಂದಿದ್ದಾರೆ.
ಜನಗಣತಿ ಪಟ್ಟಿಯಲ್ಲಿ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಗಳಿಗೆ ಸೇರಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಇದು ಕಾನೂನುಬಾಹಿರ ಮತ್ತು ಅನೈತಿಕ ಎಂದು ಗುಂಡೂರಾವ್ ಹೇಳಿದ್ದಾರೆ. ಕ್ರಮ ಸಂಖ್ಯೆ 209 - ಬ್ರಾಹ್ಮಣ ಕ್ರಿಶ್ಚಿಯನ್, ಕ್ರಮ ಸಂಖ್ಯೆ 883 - ಬ್ರಾಹ್ಮಣ ಮುಜಾವರ ಮುಸ್ಲಿಂ, ಕ್ರಮ ಸಂಖ್ಯೆ 1384 - ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್ ಎಂದಿದೆ.
ಇದು ಕೇವಲ ಒಂದು ಅನೈತಿಕವಷ್ಟೆ ಅಲ್ಲದೆ ಕಾನೂನು ವಿರೋಧಿಯಾದ ಕ್ರಮ. ಮೊದಲು ಬ್ರಾಹ್ಮಣ ಜಾತಿಗೆ ಸೇರಿದವನಾಗಿದ್ದು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದಾಗ ಆ ವ್ಯಕ್ತಿಯು ತನ್ನ ಹಿಂದಿನ ಜಾತಿಯನ್ನು ಕಳೆದುಕೊಳ್ಳುತ್ತಾನೆ. ಅವನು ಕ್ರಿಶ್ಚಿಯನ್ ಆಗಿ ಮಾತ್ರ ಮುಂದುವರೆಯುತ್ತಾನೆ. ಕ್ರಿಶ್ಚಿಯನ್ ಧರ್ಮದಲ್ಲಿ ಬ್ರಾಹ್ಮಣ ಎಂಬ ಜಾತಿ ಇರುವುದಿಲ್ಲ. ಬ್ರಾಹ್ಮಣನಾಗಿದ್ದಲ್ಲಿ ಅವನು ಹಿಂದು ಧರ್ಮಕ್ಕೆ ಮಾತ್ರ ಸೇರಿದವನಾಗಿರಲೇಬೇಕು. ಇದು ಕಾನೂನಿನ್ವಯ ಉರ್ಜಿತಗೊಳ್ಳುವ ಸಂಗತಿ. ಇದೇ ರೀತಿ ಮೇಲೆ ಉಲ್ಲೇಖಿಸಿದ ಇತರ ಎರಡು ಜಾತಿಗಳಿಗೂ ಅನ್ವಯಿಸುತ್ತದೆ. ಬ್ರಾಹ್ಮಣ ಕ್ರಿಶ್ಚಿಯನ್,ಬ್ರಾಹ್ಮಣ ಮುಜಾವರ ಮುಸ್ಲಿಂ, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್ ಎಂಬುದನ್ನ ಕೈಬಿಡಬೇಕು ಎಂದಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರು ಈ ಗೊಂದಲಗಳನ್ನು ನಿವಾರಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ಮೊದಲಿಗೆ, ಬ್ರಾಹ್ಮಣ ಜಾತಿಯನ್ನು ಒಂದೇ ಕ್ರಮ ಸಂಖ್ಯೆಯಲ್ಲಿ ನಮೂದಿಸಬೇಕು. ಅದರ ನಂತರ, ಉಪಪಂಗಡಗಳನ್ನು ಪ್ರತ್ಯೇಕ ಕ್ರಮ ಸಂಖ್ಯೆಗಳು ಅಥವಾ A, B, C ಅಕ್ಷರಗಳನ್ನು ಬಳಸಿ ಪಟ್ಟಿ ಮಾಡಬೇಕು. ಈ ರೀತಿ ಕ್ರಮಬದ್ಧವಾಗಿ ನಮೂದಿಸಿದರೆ, ಸಮುದಾಯದ ಒಟ್ಟು ಜನಸಂಖ್ಯೆಯನ್ನು ಸುಲಭವಾಗಿ ಲೆಕ್ಕ ಹಾಕಬಹುದು ಎಂದು ಅವರು ತಿಳಿಸಿದ್ದಾರೆ.