ಏಜೆಂಟರ ಹಾವಳಿ ತಪ್ಪಿಸಲು ತಹಸೀಲ್ದಾರ್ ಹಾಗೂ ಸಬ್ ರಜಿಸ್ಟ್ರಾರ ಕಚೇರಿಗಳ ಎಲ್ಲ ದಾಖಲೆಗಳನ್ನು ಶೀಘ್ರವೇ ಡಿಜಿಟಲೀಕರಣ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಹುಬ್ಬಳ್ಳಿ (ಫೆ.01): ಏಜೆಂಟರ ಹಾವಳಿ ತಪ್ಪಿಸಲು ತಹಸೀಲ್ದಾರ್ ಹಾಗೂ ಸಬ್ ರಜಿಸ್ಟ್ರಾರ ಕಚೇರಿಗಳ ಎಲ್ಲ ದಾಖಲೆಗಳನ್ನು ಶೀಘ್ರವೇ ಡಿಜಿಟಲೀಕರಣ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಇದರೊಂದಿಗೆ ಹುಬ್ಬಳ್ಳಿಯಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಭೂಸುರಕ್ಷಾ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಬೆಳಗಾವಿಗೆ ತೆರಳುವ ಮುನ್ನ ಬುಧವಾರ ಹುಬ್ಬಳ್ಳಿ ತಹಸೀಲ್ದಾರ್ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ದಾಖಲೆ, ಕೆಲಸಗಳನ್ನೆಲ್ಲ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲೆಲ್ಲಿ ಏಜೆಂಟರ ಹಾವಳಿ ಇದೆ ಎನ್ನುವುದರ ಬಗ್ಗೆ ಸರಕಾರ ಪರಿಶೀಲನೆ ಮಾಡುತ್ತಿದೆ. ಏಕೆಂದರೆ, ನಾವೇ ನಿಂತು ಏಜೆಂಟರ ಹಾವಳಿ ತಪ್ಪಿಸಲು ಸಾಧ್ಯವಿಲ್ಲ. ಅದಕ್ಕಾಗಿ ಅವರಿಗೆ ಕೆಲಸವೇ ಇಲ್ಲದಂತೆ ಎಲ್ಲ ದಾಖಲೆಗಳನ್ನು ಡಿಜಟಲೀಕರಣ ಮಾಡುತ್ತಿದ್ದೇವೆ ಎಂದರು. ಯಾವ ಯಾವ ಅಧಿಕಾರಿಗಳ ಹತ್ತಿರ ಕಡತ ಎಷ್ಟು ದಿನ ಇವೆ ಎನ್ನುವುದನ್ನು ತಹಸೀಲ್ದಾರ್‌ಗೆ ತಿಳಿಯುವಂತೆ ಮಾಡಲಾಗಿದೆ. ಇದರಿಂದ ಎಲ್ಲ ಕಡತಗಳು ಆನ್‌ಲೈನ್ ಮೂಲಕವೇ ವಿಲೇವಾರಿ ಆಗುತ್ತಿರುವುದರಿಂದ ಮೊದಲಿನಂತೆ ಯಾವುದೇ ದಾಖಲೆ ಪಡೆಯಲು ವಿಳಂಬವಾಗುವುದಿಲ್ಲ ಎಂದು ಹೇಳಿದರು.
ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್‌ನಿಂದ ಚದರಡಿ ಖಾತೆ ಸೃಷ್ಟಿ: ವಿಜಯೇಂದ್ರ ವ್ಯಂಗ್ಯ
ಸಬ್ ರಜಿಸ್ಟ್ರರ್ ಕಚೇರಿಯಲ್ಲಿ ಭೂದಾಖಲೆಗಳ ತಿದ್ದುಪಡಿ, ಮಿಸ್ಸಿಂಗ್ ಸೇರಿ ಹಲವು ಸಮಸ್ಯೆ ಆಗಿದ್ದವು. ಇನ್ನು ಸರ್ವರ್ ಸಮಸ್ಯೆಯಿಂದ ಕಾವೇರಿ 2.0 ನೋಂದಣಿ ಸರಿಯಾಗುತ್ತಿಲ್ಲ. ಒಂದೊಂದು ನೋಂದಣಿಗೆ ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ ಎಂಬ ದೂರುಗಳು ಬಂದಿದ್ದವು. ಈಗಾಗಲೇ ಸ್ಕ್ಯಾನರ್, ಕಂಪ್ಯೂಟರ್ ಬಂದಿವೆ. ಶೀಘ್ರವೇ ಕೆಲಸ ಆರಂಭವಾಗಲಿದೆ. ಆವಾಗ ಜೆ ಸ್ಲಿಮ್‌ನಿಂದ ಆಗುತ್ತಿದ್ದ ಸಮಸ್ಯೆ ನಿವಾರಣೆಯಾಗಲಿದೆ. ಇದರಿಂದ ಕೇವಲ 15 ನಿಮಿಷದಲ್ಲಿ ನೋಂದಣಿ ಕಾರ್ಯ ಪೂರ್ಣಗೊಳ್ಳುತ್ತಿದೆ ಎಂದರು. ಭೂ ಸುರಕ್ಷಾ ಕಾರ್ಯಕ್ರಮವನ್ನು 31 ಜಿಲ್ಲೆಯ ಒಂದೊಂದು ತಾಲೂಕಿಗೆ ಕೊಡಲಾಗುತ್ತದೆ. ಅದು ಹುಬ್ಬಳ್ಳಿಯಲ್ಲಿ ಒಂದೆರಡು ದಿನಗಳಲ್ಲಿ ಆರಂಭವಾಗಲಿದೆ ಎಂದು ಹೇಳಿದರು.
ಅವಶ್ಯಕ ಸಿಬ್ಬಂದಿ, ಅಗತ್ಯ ಸಲಕರಣೆಗಳನ್ನು ನೀಡಲಾಗಿದೆ. ಸಿಬ್ಬಂದಿ ವೇತನವನ್ನು ಸರ್ಕಾರ ಭರಿಸಲಿದೆ. ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ರೇಕಾರ್ಡ್ ರೂಮಿನಲ್ಲಿರುವ ಎಲ್ಲ ದಾಖಲೆಗಳನ್ನು ಗಣಕೀರಣ ಮಾಡಬೇಕು. ಆ ದಾಖಲೆ ಜನರು ಪಡೆದುಕೊಳ್ಳಲು ಮುಕ್ತ ಅವಕಾಶ ನೀಡಲಾಗುವುದು. ಇದರಿಂದ ಜನರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಕಂದಾಯ ಇಲಾಖೆ, ಭೂ ದಾಖಲೆಗಳ ಇಲಾಖೆ, ಉಪ ನೋಂದಣಾಧಿಕಾರಿಗಳ ಕಚೇರಿಗಳ ದಾಖಲೆಗಳನ್ನು ಗಣಕೀಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲಕುಮಾರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಲಗೌಡ ಪಾಟೀಲ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ಸೇರಿದಂತೆ ಇತರರು ಹಾಜರಿದ್ದರು.
ಶೀಘ್ರ 357 ಸರ್ವೇ ಎಡಿಎಲ್‌ಆರ್ ಹುದ್ದೆ ಭರ್ತಿ: ಸರ್ವೆ ಇಲಾಖೆಯಲ್ಲಿ 596 ಹುದ್ದೆಗಳು ಖಾಲಿ ಇದ್ದು, ಅವುಗಳಲ್ಲಿ 357 ಸರ್ವೇ ಎಡಿಎಲ್‌ಆರ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಅರ್ಜಿ ಕರೆಯಲಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಈಗಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಸರ್ವೇ ಕಾರ್ಯ ವೇಗ ಹೆಚ್ಚಿಸುವ ಉದ್ದೇಶದಿಂದ ಈಗಾಗಲೇ ಸರ್ವೇ ಇಲಾಖೆಗೆ ₹20 ಕೋಟಿ ವೆಚ್ಚ ಮಾಡಿ ಅತ್ಯಾಧುನಿಕ ಉಪಕರಣ ನೀಡುತ್ತಿದ್ದೇವೆ ಎಂದರು.
ಬ್ಲಾಕ್‌ಮೇಲ್ ಅಲ್ಲದೇ ಮತ್ತೇನು, ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು: ಬಿ.ವೈ.ವಿಜಯೇಂದ್ರ ಹೇಳಿದ್ದೇನು?
ರಾಜ್ಯದಲ್ಲಿ ಸರ್ವೇ ಕೆಲಸದ ಅರ್ಜಿಗಳು ದೊಡ್ಡ ಪ್ರಮಾಣದಲ್ಲಿ ಬಾಕಿ ಇವೆ. ಅವುಗಳನ್ನು ವಿಲೇವಾರಿ ಮಾಡುವುದಕ್ಕಾಗಿ 750 ಸವೇರ್ಧಾರರಿಗೆ ಪರವಾನಗಿ ನೀಡುತ್ತಿದ್ದೇವೆ. ಒಟ್ಟಿನಲ್ಲಿ ಸರ್ವೇ ಇಲಾಖೆ ಬಲಿಷ್ಠಗೊಳಿಸಲು ಸಿಬ್ಬಂದಿ ನೇಮಕ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದರು.