ಉಪಚುನಾವಣೆ : ಕೈ ಕೊಟ್ಟು ಹೋದ ಪುಟ್ಟಣ್ಣ ಮಣಿಸಲು ದಳ ಕಮಲ ಪಟ್ಟು

By Kannadaprabha News  |  First Published Feb 1, 2024, 12:22 PM IST

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಈವರೆಗೆ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಬಿಜೆಪಿ - ಜೆಡಿಎಸ್ ಪಕ್ಷಗಳು ದೋಸ್ತಿ ಸಾಧಿಸಿದ್ದು, ಇದೇ ಮೊದಲ ಬಾರಿ ಕಾಂಗ್ರೆಸ್ ವಿರುದ್ಧ ನೇರ ಹಣಾಹಣಿಗೆ ಮುಂದಾಗಿದೆ.


-ಎಂ.ಅಫ್ರೋಜ್ ಖಾನ್

 ರಾಮನಗರ :  ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಈವರೆಗೆ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಬಿಜೆಪಿ - ಜೆಡಿಎಸ್ ಪಕ್ಷಗಳು ದೋಸ್ತಿ ಸಾಧಿಸಿದ್ದು, ಇದೇ ಮೊದಲ ಬಾರಿ ಕಾಂಗ್ರೆಸ್ ವಿರುದ್ಧ ನೇರ ಹಣಾಹಣಿಗೆ ಮುಂದಾಗಿದೆ.

Tap to resize

Latest Videos

undefined

ರಾಜಧಾನಿ ಬೆಂಗಳೂರು ಸೇರಿದಂತೆ ಮೂರು ಜಿಲ್ಲೆಗಳನ್ನು ವ್ಯಾಪಿಸಿಕೊಂಡಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮಾತ್ರ ಸ್ಪರ್ಧೆ ಏರ್ಪಡುತ್ತಿತ್ತು. ಬಿಜೆಪಿ ಅಭ್ಯರ್ಥಿಯನ್ನೇ ಕಸಿದು ಕೊಂಡಿರುವ ಆಡಳಿತರೂಢ ಕಾಂಗ್ರೆಸ್, ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಬಲ ಪಟ್ಟುಗಳನ್ನು ಹಾಕುತ್ತಿದೆ.

ಜೆಡಿಎಸ್ ನಿಂದ 3 ಹಾಗೂ ಪಕ್ಷದಿಂದ 1 ಬಾರಿ ಗೆಲುವು ಸಾಧಿಸಿದ್ದ ಪುಟ್ಟಣ್ಣ ರಾಜೀನಾಮೆ ಸಲ್ಲಿಸಿ ಸೇರುವ ಮೂಲಕ ಎರಡೂ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರ ಕುಟುಂಬದ ಪ್ರತಿಷ್ಠೆಯನ್ನೇ ಪಣಕ್ಕಿರಿಸಿರುವ ದಳಪತಿಗಳು, ಕಮಲದ ಸಾಥ್ ಪಡೆದು ಕ್ಷೇತ್ರದಲ್ಲಿ ಪಾರಮ್ಯ ಮುಂದುವರೆಸಲು ಯತ್ನಿಸುತ್ತಿದೆ.

ದಶಕಗಳ ಕಾಲದಿಂದಲೂ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷ, ಕಳೆದ ಬಾರಿ ಹೊಸ ಮುಖ ಪ್ರವೀಣ್ ಪೀಟರ್ ಅವರನ್ನು ಕಣಕ್ಕಿಳಿಸಿತ್ತು. ಆದರೀಗ ಪ್ರಬಲವಾಗಿರುವ ಪುಟ್ಟಣ್ಣ ಅಭ್ಯರ್ಥಿಯಾಗಿರುವುದು ಕಾಂಗ್ರೆಸ್ ನಲ್ಲಿ ಹೊಸ ಭರವಸೆ ಮೂಡಿಸಿದೆ. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ ಅವರನ್ನು ಕಣಕ್ಕಿಳಿಸಿರುವ ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳು, ಪುಟ್ಟಣ್ಣ ಅವರಿಗೆ ಸೋಲಿನ ರುಚಿ ತೋರಿಸುವ ಉಮೇದಿನಲ್ಲಿವೆ.

ಕಳೆದ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಚಂದ್ರಶೇಖರ ಸ್ಪರ್ಧಿಸಿದರೆ, ಐವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದು, ರಂಗನಾಥ ಎಂಬ ಹೆಸರಿನವರೇ ಮೂವರಿದ್ದರು. ಆಗಲೂ ಪುಟ್ಟಣ್ಣ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಈ ಕ್ಷೇತ್ರ ವಿಸ್ತರಿಸಿಕೊಂಡಿದೆ. ಶೇಕಡ 80 ರಷ್ಟು ಮತದಾರರು ಬೆಂಗಳೂರು ನಗರ ಜಿಲ್ಲೆಯಲ್ಲೇ ಇದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಹೋರಾಟದ ಕಣವಾಗಿದ್ದ ಕ್ಷೇತ್ರ, ಈಗ ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿಯ ಅಖಾಡವಾಗಿ ಮಾರ್ಪಟ್ಟಿದೆ.

ನೇರ ಹಣಾಹಣಿ:

2002ಕ್ಕೂ ಮೊದಲು ಕ್ಷೇತ್ರ ಬಿಜೆಪಿ ಕೈಯಲ್ಲಿ ಇತ್ತು. 2002ರ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಮುಖಂಡ ಕೆ. ನರಹರಿ ಅವರನ್ನು ಸೋಲಿಸಿದ್ದ ಪುಟ್ಟಣ್ಣ, ಕ್ಷೇತ್ರದಲ್ಲಿ ಜೆಡಿಎಸ್ ಬೇರೂರಲು ನೆರವಾಗಿದ್ದರು. 2008 ಮತ್ತು 2014ರ ಚುನಾವಣೆಯಲ್ಲೂ ಪುಟ್ಟಣ್ಣ ಗೆಲುವಿನೊಂದಿಗೆ ಕ್ಷೇತ್ರ ಜೆಡಿಎಸ್ ಬಳಿಯೇ ಉಳಿಯಿತು.

2020ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಗೆಲುವು ಸಾಧಿಸಿದ ಪುಟ್ಟಣ್ಣ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದರು.

22 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿರುವ ಪುಟ್ಟಣ್ಣ, ಶಿಕ್ಷಕರ ಜತೆ ವೈಯಕ್ತಿಕ ಸಂಪರ್ಕ ಸಾಧಿಸಿಕೊಂಡಿದ್ದಾರೆ. ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಕುರಿತ ಹೋರಾಟದಲ್ಲೂ ಭಾಗಿಯಾಗಿದ್ದಾರೆ. ಅದರ ಜತೆಗೆ ಈಗ ಆಡಳಿತಾರೂಢ ಪಕ್ಷದ ಬೆಂಬಲವೂ ದಕ್ಕಿದೆ. ಸಂಸದ ಡಿ.ಕೆ.ಸುರೇಶ್, ಶಾಸಕರು ಸೇರಿದಂತೆ ಹಲವು ನಾಯಕರು ನೇರವಾಗಿ ಅಖಾಡಕ್ಕೆ ಇಳಿದಿದ್ದು, ಶಿಕ್ಷಕರ ಬೆಂಬಲ ಖಾತರಿಪಡಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ.

ರಂಗನಾಥ ಮೂರು ವರ್ಷದಿಂದ ಈಚೆಗೆ ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹೋರಾಟಗಳಲ್ಲಿ ಭಾಗಿಯಾದವರು. ಕಳೆದ ನಾಲ್ಕೈದು ತಿಂಗಳಿನಿಂದಲೇ ಉಪ ಚುನಾವಣೆಗೆ ಪೂರ್ವಸಿದ್ಧತೆ ನಡೆಸಿದ್ದಾರೆ. ವೈಯಕ್ತಿಕ ಬಲಕ್ಕಿಂತಲೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ , ಎಚ್.ಡಿ. ಕುಮಾರಸ್ವಾಮಿ ವರ್ಚಸ್ಸು ಅವರ ಮತ ಗಳಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಅಲ್ಲದೆ, ಬಿಜೆಪಿ ಮತ್ತು ಸಂಘ ಪರಿವಾರದ ಶಿಕ್ಷಕ ಸಂಘಟನೆಗಳ ಬಲವೂ ಈಗ ರಂಗನಾಥ ಅವರ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಜೆಡಿಎಸ್ ಮತ್ತು ಬಿಜೆಪಿ ನಾಯಕರು ಖುದ್ದಾಗಿ ಶಿಕ್ಷಕರನ್ನು ಸಂಪರ್ಕಿಸಿ ಮತ ಯಾಚಿಸುತ್ತಿದ್ದು, ರಂಗನಾಥ ಅವರನ್ನು ಗೆಲುವಿನ ದಡ ಮುಟ್ಟಿಸಿ, ಪಕ್ಷಕ್ಕೆ ಕೈಕೊಟ್ಟು ಹೋದ ಪುಟ್ಟಣ್ಣ ಅವರಿಗೆ ಪಾಠ ಕಲಿಸುವ ಹಂಬಲದಲ್ಲಿದ್ದಾರೆ.

ಪುಟ್ಟಣ್ಣ ಮತ್ತು ರಂಗನಾಥ ಇಬ್ಬರೂ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿದ್ದವರು. ಪುಟ್ಟಣ್ಣ 22 ವರ್ಷಗಳ ಕೆಲಸದ ಪಟ್ಟಿ ಹಿಡಿದು ಮತ ಯಾಚಿಸುತ್ತಿದ್ದಾರೆ. ಒಮ್ಮೆ ಅವಕಾಶ ಕೊಟ್ಟು ನೋಡಿ ಎಂದು ರಂಗನಾಥ ಶಿಕ್ಷಕರ ಮನವೊಲಿಕೆಗೆ ಇಳಿದಿದ್ದಾರೆ. ಮೂರು ಪಕ್ಷಗಳ ನಾಯಕರ ಪಾಲಿಗೂ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

3 ಪಕ್ಷಗಳಿಗೂ ಪ್ರತಿಷ್ಠೆಯ ಕಣ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಉಪಚುನಾವಣೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿದೆ. ಬಿಜೆಪಿಗೆ 17 ಶಾಸಕರು, 4 ಸಂಸದರ ಬಲವಿದೆ. ಜೆಡಿಎಸ್ 01 ಶಾಸಕರ ಬೆಂಬಲ ಹೊಂದಿದೆ. ಕಾಂಗ್ರೆಸ್ 18 ಶಾಸಕರು ಮತ್ತು ಒಬ್ಬ ಸಂಸದರನ್ನು ಹೊಂದಿದೆ.

2020 ರ ಚುನಾವಣೆ ನೋಟ

ಗೆದ್ದವರು: ಪುಟ್ಟಣ್ಣ (ಬಿಜೆಪಿ)

ಪಡೆದ ಮತ - 7,335

ಸಮೀಪದ ಪ್ರತಿಸ್ಪರ್ಧಿ :

ಎ.ಪಿ.ರಂಗನಾಥ್ (ಜೆಡಿಎಸ್)

ಪಡೆದ ಮತ: 5,107

ಅಂತರ - 2,228 ಮತ

31ಕೆಆರ್ ಎಂಎನ್‌ 3,4.ಜೆಪಿಜಿ

3.ಪುಟ್ಟಣ್ಣ

4.ಎ.ಪಿ.ರಂಗನಾಥ

click me!