ಭಾಷೆ, ಬರವಣಿಗೆ, ಸೃಜನಶೀಲತೆಗೆ ಡಿಜಿಟಲ್‌ಯುಗ ತೊಡಕಾಗಬಾರದು. ಪತ್ರಕರ್ತನಾಗುವವನಿಗೆ ತೆರೆದ ಕಣ್ಣುಗಳಿರಬೇಕು. ಸುದ್ದಿಯ ಆಳ ಅಗಲವನ್ನು ಸಂಶೋಧನೆ, ಗ್ರಹಿಕೆ, ಪ್ರಸ್ತುತಿಯ ಮುಖೇನ ಓದುಗರಿಗೆ ಉಣಬಡಿಸುವವನೇ ನಿಜವಾದ ಪತ್ರಕರ್ತ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು.
ತುಮಕೂರು : ಭಾಷೆ, ಬರವಣಿಗೆ, ಸೃಜನಶೀಲತೆಗೆ ಡಿಜಿಟಲ್‌ಯುಗ ತೊಡಕಾಗಬಾರದು. ಪತ್ರಕರ್ತನಾಗುವವನಿಗೆ ತೆರೆದ ಕಣ್ಣುಗಳಿರಬೇಕು. ಸುದ್ದಿಯ ಆಳ ಅಗಲವನ್ನು ಸಂಶೋಧನೆ, ಗ್ರಹಿಕೆ, ಪ್ರಸ್ತುತಿಯ ಮುಖೇನ ಓದುಗರಿಗೆ ಉಣಬಡಿಸುವವನೇ ನಿಜವಾದ ಪತ್ರಕರ್ತ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರಮತ್ತು ಸಮೂಹ ಸಂವಹನ ವಿಭಾಗ ಗುರುವಾರ ಆಯೋಜಿಸಿದ್ದ ನೂತನ ಮತ್ತು ಪ್ರಯೋಗಾಲಯ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ’ಡಿಜಿಟಲ್ ಕಾಲದಲ್ಲಿ ಭಾಷೆ-ಬರವಣಿಗೆಯ ಪ್ರಾಮುಖ್ಯತೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಸ್ತುತ ವಿವಿಗಳಲ್ಲಿ ಪತ್ರಿಕೋದ್ಯಮ ವಿಭಾಗಗಳು ಪ್ರತಿಭಾವಂತ ಪತ್ರಕರ್ತರನ್ನು ಹೇರುವ ಸ್ಥಿತಿಯಲ್ಲಿಲ್ಲ. ಪತ್ರಿಕೋದ್ಯಮದಲ್ಲೇ ಬದುಕು ಕಟ್ಟಿಕೊಳ್ಳುವ ಹಠ, ಛಲ ಇರುವ ಸರ್ವಾಸಕ್ತರನ್ನು ತರಗತಿಗಳು ಉತ್ತಮ ಮಟ್ಟಕ್ಕೆ ಏರಿಸಬಹುದೇ ಹೊರತು, ಪತ್ರಿಕೋದ್ಯಮದ ಹಸಿವಿಲ್ಲದವರನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವುದು ಪ್ರಯೋಜನವಿಲ್ಲ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್‌ಜಮ್ ಮಾತನಾಡಿ, ಸಮಾಜದ ಕನ್ನಡಿಯಾದ ಪತ್ರಿಕೋದ್ಯಮ ನಿಷ್ಪಕ್ಷಪಾತವಾಗಿರಬೇಕು. ಒಬ್ಬ ನಿಜವಾದ ಪತ್ರಕರ್ತನಲ್ಲಿ ನಿಖರತೆ, ಪ್ರಾಮಾಣಿಕತೆ, ಧೈರ್ಯಇರಬೇಕು. ಮಾಧ್ಯಮದ ವಿದ್ಯಾರ್ಥಿಗಳು ವೃತ್ತಿಧರ್ಮ ಮತ್ತು ನೈತಿಕತೆಯನ್ನು ಕರಗತ ಮಾಡಿಕೊಳ್ಳಬೇಕು ಎಂದರು.
ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ.ಪದ್ಮನಾಭ ಕೆ. ವಿ. ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಅತ್ಯಂತ ಸೃಜನಶೀಲರಾಗಿ ಹೊರಹೊಮ್ಮುತ್ತಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ನಾನಾ ಮಾಧ್ಯಮಗಳಲ್ಲಿ ಪತ್ರಕರ್ತರಾಗಿ ಸೇವೆಸಲ್ಲಿಸುತ್ತಿರುವುದು, ವಿದೇಶಗಳಲ್ಲಿ ಉನ್ನತ ಶಿಕ್ಷಣ ಮುಂದುವರೆಸಿರುವುದು ವಿವಿ ಮತ್ತು ವಿಭಾಗದ ಘನತೆ ಹೆಚ್ಚಿಸುವಂಥದ್ದು. ತಮ್ಮ ಕೆಲಸಗಳು ಮತ್ತು ಕ್ರಿಯಾಶೀಲತೆಯ ಮೂಲಕ ವಿಭಾಗಕ್ಕೆ ಹೆಚ್ಚಿನ ಅಗತ್ಯ ಸೌಕರ್ಯಗಳು ದೊರಕುವಂತೆ ಮಾಡುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದರು.
ಟಿಯುಟಿವಿ ವಾರ್ತಾ ಸಂಚಿಕೆ ಹಾಗೂ ಕಲ್ಪತರು ಟೈಮ್ಸ್ ಪತ್ರಿಕೆಗಳನ್ನು ಈ ಸಂದರ್ಭ ಅನಾವರಣಗೊಳಿಸಲಾಯಿತು ಹಾಗೂ ಅತಿಥಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕರಾದ ಡಾ. ಪೃಥ್ವಿರಾಜ ಟಿ., ವಿನಯ್‌ಕುಮಾರ್ ಎಸ್. ಎಸ್., ಕೋಕಿಲ ಎಂ. ಎಸ್.,ತಾಂತ್ರಿಕ ಸಹಾಯಕ ಅಭಿಷೇಕ್ ಎಂ. ವಿ. ಭಾಗವಹಿಸಿದ್ದರು.
ವಿಶ್ವವಿದ್ಯಾನಿಲಯಗಳಲ್ಲೇ ಸಂಸ್ಥೆಯಾಗಿ ತಯಾರಾಗಿ ಹೋಗುವ ಯುವಪತ್ರಕರ್ತರೇ ಸಮಾಜದ ಬದಲಾವಣೆಗಾಗಿ ಶ್ರಮಿಸುವರು. ಪತ್ರಿಕೋದ್ಯಮ ವಿಭಾಗ ಬಲಿಷ್ಠವಾಗಿದ್ದಾಗ ಸಮಾಜದ ಯಾವುದೇ ದುಷ್ಟಶಕ್ತಿಯೂ ಪ್ರಭಾವಿಸುವುದಿಲ್ಲ. ಈಗಿನ ಡಿಜಿಟಲ್‌ಯಾತ್ರೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಇಲ್ಲಿನ ಎಲ್ಲ ವಿಭಾಗಗಳು ನಮ್ಮ ಆಸ್ತಿ. ಮೂಲ ಸೌಕರ್ಯಗಳನ್ನು ಒದಗಿಸಿ, ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುವುದು ವಿವಿಯ ಜವಾಬ್ದಾರಿಯಾಗಿರುತ್ತದೆ.
ಪ್ರೊ.ಎಂ.ವೆಂಕಟೇಶ್ವರಲು ಕುಲಪತಿ, ತುಮಕೂರು ವಿವಿ