ಐಸಿಯುನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ| ಆರೋಗ್ಯ ಇಲಾಖೆ ಪ್ರಕಾರ ರಾಜ್ಯದಲ್ಲಿ 841 ಮಂದಿ ಐಸಿಯುನಲ್ಲಿ| ಬಿಬಿಎಂಪಿ ಪ್ರಕಾರ ಬೆಂಗಳೂರಲ್ಲೇ 957 ಜನ ಐಸಿಯುನಲ್ಲಿ| ಯಾರದು ತಪ್ಪು, ಯಾರದು ಸರಿ ಎಂಬುದೇ ಪ್ರಶ್ನೆ|
ಬೆಂಗಳೂರು(ಅ.08): ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಿದ್ದು ಸಕ್ರಿಯ ಸೋಂಕಿತರ ಜೊತೆಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಂಕಿ-ಅಂಶಗಳಿಗೆ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ.
ಆರೋಗ್ಯ ಇಲಾಖೆಯು ಬುಧವಾರದ ವೇಳೆಗೆ ಬೆಂಗಳೂರಿನಲ್ಲಿ 303 ಸೇರಿ ಇಡೀ ರಾಜ್ಯದಲ್ಲಿ 841 ಮಂದಿ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಿದೆ. ಬಿಬಿಎಂಪಿ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಬರೋಬ್ಬರಿ 957 ಮಂದಿ ಸೋಂಕಿತರು ಐಸಿಯು ಹಾಗೂ ವೆಂಟಿಲೇಟರ್ ಸಹಿತ ಐಸಿಯು ಘಟಕಗಳಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದೆ.
undefined
ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಯ ಅಂಕಿ-ಅಂಶಗಳಲ್ಲಿ ಕಳೆದ ಹಲವು ವಾರಗಳಿಂದ ಇದೇ ರೀತಿಯ ವ್ಯತ್ಯಾಸ ಕಂಡು ಬರುತ್ತಿದೆ. ಮೂಲಗಳ ಪ್ರಕಾರ ಆರೋಗ್ಯ ಇಲಾಖೆಯು ತನ್ನ ಐಸಿಯು ರೋಗಿಗಳ ವಿವರಗಳನ್ನು ಸೂಕ್ತವಾಗಿ ಬಹಿರಂಗಪಡಿಸುತ್ತಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.
ಆಘಾತಕಾರಿ ಸುದ್ದಿ: ಕೊರೋನಾ ಅವಧಿಯಲ್ಲಿ ಭೀಕರ ‘ಮರಣ ಮೃದಂಗ’..!
ಬಿಬಿಎಂಪಿ ಪ್ರಕಾರ 198 ಐಸಿಯು ಬೆಡ್ ಖಾಲಿ:
ಬಿಬಿಎಂಪಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1,155 ಐಸಿಯು ಹಾಗೂ ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು ಲಭ್ಯವಿವೆ. ಈ ಪೈಕಿ 957 ಹಾಸಿಗೆ ಭರ್ತಿಯಾಗಿದ್ದು 198 ಹಾಸಿಗೆ ಮಾತ್ರ ಖಾಲಿ ಇದೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ 41 ಐಸಿಯು ಹಾಗೂ 37 ವೆಂಟಿಲೇಟರ್ ಸಹಿತ ಐಸಿಯು ಇದ್ದರೆ ಈ ಪೈಕಿ 33 ಐಸಿಯು ಹಾಸಿಗೆ ಹಾಗೂ 31 ವೆಂಟಿಲೇಟರ್ ಸಹಿತ ಹಾಸಿಗೆ ಭರ್ತಿಯಾಗಿವೆ. ಉಳಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 90 ಐಸಿಯು ಹಾಗೂ 109 ಐಸಿಯು (ವೆಂಟಿಲೇಟರ್ ಸಹಿತ) ಬೆಡ್ ಇವೆ. ಈ ಪೈಕಿ 70 ಐಸಿಯು ಹಾಗೂ 109 ವೆಂಟಿಲೇಟರ್ ಸಹಿತ ಐಸಿಯು ಬೆಡ್ ಭರ್ತಿಯಾಗಿವೆ. ಖಾಸಗಿ ಆಸ್ಪತ್ರೆಗಳಲ್ಲಿ 371 ಐಸಿಯು ಹಾಗೂ 247 ವೆಂಟಿಲೇಟರ್ ಸಹಿತ ಐಸಿಯು ಬೆಡ್‌ಗಳು ಲಭ್ಯವಿವೆ. ಇವುಗಳ ಪೈಕಿ 276 ಐಸಿಯು ಹಾಗೂ 185 ವೆಂಟಿಲೇಟರ್ ಸಹಿತ ಐಸಿಯು ಬೆಡ್‌ಗಳು ಭರ್ತಿಯಾಗಿವೆ. ಕ್ರಮವಾಗಿ 95 ಮತ್ತು 62 ಬೆಡ್‌ಗಳು ಮಾತ್ರ ಖಾಲಿ ಇವೆ.
ಇನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 147 ಐಸಿಯು ಹಾಗೂ 113 ವೆಂಟಿಲೇಟರ್ ಸಹಿತ ಐಸಿಯು ಬೆಡ್‌ಗಳನ್ನು ಮೀಸಲಿಡಲಾಗಿದೆ. ಈ ಪೈಕಿ 141 ಐಸಿಯು ಹಾಗೂ 112 ಐಸಿಯು ವಿತ್ ವೆಂಟಿಲೇಟರ್ ಹಾಸಿಗೆ ಭರ್ತಿಯಾಗಿವೆ.
ಆರೋಗ್ಯ ಇಲಾಖೆ ಲೆಕ್ಕವೇ ಬೇರೆ:
ಇನ್ನು ಆರೋಗ್ಯ ಇಲಾಖೆ ಅಂಕಿ-ಅಂಶ ಗಮನಿಸಿದರೆ ರಾಜ್ಯಾದ್ಯಂತ ಎಷ್ಟುಐಸಿಯು ಹಾಗೂ ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು ಕೊರೋನಾ ಸೋಂಕಿತರಿಗೆ ಮೀಸಲಿವೆ ಎಂಬ ಮಾಹಿತಿಯೇ ಇಲ್ಲ. ಆದರೆ, ರಾಜ್ಯಾದ್ಯಂತ 841 ಮಂದಿ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 303 ಮಂದಿ ಮಾತ್ರ ಐಸಿಯುನಲ್ಲಿದ್ದಾರೆ. ಬೆಂಗಳೂರು ಹೊರತುಪಡಿಸದರೆ ಧಾರವಾಡದಲ್ಲಿ 93, ಬಾಗಲಕೋಟೆಯಲ್ಲಿ 27 ಮಂದಿ ಐಸಿಯುದಲ್ಲಿರುವುದೇ ಅಧಿಕ ಎಂದು ಹೇಳಿದೆ.
ಯಾರು ಸರಿ? ಯಾರು ತಪ್ಪು?
ಸಕ್ರಿಯ ಸೋಂಕಿತರಲ್ಲಿ ಶೇ.2 ರಷ್ಟುಮಂದಿಗೆ ಐಸಿಯು ಅಗತ್ಯವಿರುತ್ತದೆ. ಪ್ರಸ್ತುತ ಬುಧವಾರದ ವೇಳೆಗೆ ರಾಜ್ಯದಲ್ಲಿ 1,16,153 ಮಂದಿ ಸಕ್ರಿಯ ಸೋಂಕಿತರಿದ್ದು, ಬೆಂಗಳೂರು ನಗರದಲ್ಲಿ 58,624 ಮಂದಿ ಇದ್ದಾರೆ. ಶೇ.2 ರಷ್ಟುಮಂದಿಗೆ ಐಸಿಯು ಅಗತ್ಯವಿದೆ ಎಂದಾದರೂ ಬಿಬಿಎಂಪಿ ನೀಡುತ್ತಿರುವ 957 ಲೆಕ್ಕ ಸರಿ ಇದೆ. ಆದರೆ, ಆರೋಗ್ಯ ಇಲಾಖೆ ಬೆಂಗಳೂರಿನಲ್ಲಿ 303 ಮಂದಿ ಸೇರಿ ರಾಜ್ಯದಲ್ಲಿ 841 ಮಂದಿ ಮಾತ್ರ ಐಸಿಯುದಲ್ಲಿದ್ದಾರೆ ಎನ್ನುತ್ತಿದೆ. ಹೀಗಾಗಿ ಯಾರು ಸರಿ ಹಾಗೂ ಯಾರು ತಪ್ಪು ಎಂದು ನಿರ್ಧರಿಸಲಾಗುತ್ತಿಲ್ಲ ಎಂದು ತಜ್ಞರ ಸಮಿತಿ ಸದಸ್ಯರೂ ಆದ ಖಾಸಗಿ ವೈದ್ಯರೊಬ್ಬರು ಹೇಳಿದ್ದಾರೆ.