ನಂಜನಗೂಡಿಂದ ಸ್ಪರ್ಧಿಸುವ ಆಸೆ ಹೊಂದಿದ್ದ ಧ್ರುವ ನಾರಾಯಣ್

By Kannadaprabha News  |  First Published Mar 12, 2023, 5:25 AM IST

ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತವನ್ನು ಹೊಂದಿದ್ದರು. ಆದ್ದರಿಂದಲೇ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು.


 ಎಚ್‌.ಡಿ. ರಂಗಸ್ವಾಮಿ

  ನಂಜನಗೂಡು :  ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತವನ್ನು ಹೊಂದಿದ್ದರು. ಆದ್ದರಿಂದಲೇ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು.

Latest Videos

undefined

ದುಃಖದ ಕಟ್ಟೆಒಡೆದ ಕಾರ್ಯಕರ್ತರ ಆಕ್ರಂದನ: ಧ್ರುವನಾರಾಯಣ್‌ ಅವರ ಹಠಾತ್‌ ಮರಣದಿಂದ ಕ್ಷೇತ್ರದಲ್ಲಿ ಕೈ ಕಾರ್ಯಕರ್ತರು ಒಂದು ರೀತಿಯ ಆಘಾತಕ್ಕೆ ಒಳಗಾಗಿದ್ದಾರೆ. ಕ್ಷೇತ್ರಾದ್ಯಂತ ಅವರ ಅಭಿಮಾನಿಗಳು, ಸಾರ್ವಜನಿಕರು ದಿಗ್ಭ್ರಂತರಾಗಿ, ದಿಕ್ಕೇ ತೋಚದೆ ಕಂಬನಿ ಮಿಡಿದ್ದಾರೆ. ಕಾರ್ಯಕರ್ತರ ದುಃಖದ ಕಟ್ಟೆಹೊಡೆದು ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಕಳೆದ ಮೂರು ದಿನದಿಂದ ಕ್ಷೇತ್ರದಲ್ಲಿ ಸುತ್ತಾಟ

ಮಾ. 8ರ ಬುಧವಾರ ಬೆಳಗ್ಗೆ 9ಕ್ಕೆ ಶ್ರೀಕಂಠೇಶ್ವರನದಲ್ಲಿ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದರು. ಬೆಳಗ್ಗೆ 10ಕ್ಕೆ ಪಟ್ಟಣದ ಮಹದೇಶ್ವರ ಯಾತ್ರಿ ಭವನ್‌ (ಹಳೇ ಜೆಎಸ್‌ಎಸ್‌ ಕಾಲೇಜಿನಲ್ಲಿ) ಬೆಳಗಿನ ಉಪಹಾರ ಸೇವಿಸಿದ್ದರು. ನಂತರ ಬೆಳಗ್ಗೆ 11ಕ್ಕೆ ಕೌಲಂದೆ, ಗಟ್ಟವಾಡಿ, ಗಟ್ಟವಾಡಿಪುರ, ಹರಗನಪುರ, ನೇರಳೆ, ಹಂಪಾಪುರ, ಹಳೇಪುರದಲ್ಲಿ, ಮಾ. 9ರ ಗುರುವಾರ ತಾಲೂಕಿನ ಬೆಳಲೆ, ಶಿರಮಳ್ಳಿ, ಹುಸ್ಕೂರು, ವಳಗೆರೆ, ಹಗಿನವಾಳು, ಅಂಬಳೆ, ಹಲ್ಲರೆ, ಮಲ್ಕುಂಡಿ, ಯಡಹಳ್ಳಿ ಗ್ರಾಮಗಳಲ್ಲಿ ಹಾಗೂ ಮಾ. 10ರ ಶುಕ್ರವಾರ ಕಣೆನೂರು, ಜೆಪಿಹುಂಡಿ, ಮಾದನಹಳ್ಳಿ, ಮೊತ್ತ, ಹುಚ್ಚಗಣಿ, ಇಬ್ಜಾಲ, ಕಾಟೂರು, ಅಲ್ಲಯ್ಯನಪುರ, ಬಸಾಪುರ, ಚಂದ್ರವಾಡಿ ಗ್ರಾಮಗಳಲ್ಲಿ ರಾತ್ರಿ 9.30ರವರೆಗೂ ಪ್ರಚಾರ ಸಭೆ ನಡೆಸಿ ಮೈಸೂರಿನ ವಿಜಯನಗರ ನಿವಾಸಕ್ಕೆ ವಾಪಸ್ಸಾಗಿದ್ದರು.

ಸ್ವಾತಂತ್ರ್ಯ ನಡಿಗೆ, ಪ್ರಜಾಧ್ವನಿ ಯಶಸ್ವಿಗೊಳಿಸಿದ್ದ ಸಂಘಟನೆ ಚತುರ, ಕಾಂಗ್ರೆಸ್‌ನ ಬಹುಮುಖ್ಯ ಕಾರ್ಯಕ್ರಮಗಳಾದ 75ನೇ ವರ್ಷದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು ತಾಲೂಕಿನ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಿಂದ ಆರಂಭಿಸಿ ಕ್ಷೇತ್ರದಲ್ಲಿ ಸುಮಾರು 159 ಕಿಮೀ ಪಾದಯಾತ್ರೆ ನಡೆಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ನಂತರವೂ ಕೂಡ ಬಿಟ್ಟು ಹೋದ ಗ್ರಾಮಗಳಿಗೆ ವಾಹನದ ಮೂಲಕ ತೆರಳಿದ್ದರು.

ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಸುಮಾರು 15 ಸಾವಿರಕ್ಕಿಂತಲೂ ಹೆಚ್ಚಿನ ಜನರನ್ನು ಸೇರಿಸಿ ಯಶಸ್ವಿಗೊಳಿಸಿದ್ದರು. ಲೋಕಸಭೆ ಚುನಾವಣೆ ಸೋಲಿನ ನಂತರ ಮನೆಯಲ್ಲಿ ಕೂರದೆ ಮಾರನೇ ದಿನವೇ ನಂಜನಗೂಡು ನಗರಸಭೆಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಮೂಲಕ ಸಂಘಟನೆಗೆ ಒತ್ತು ನೀಡಿದ್ದರು. ಸದಾ ಕಾಲವೂ ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿದ್ದುಕೊಂಡು ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದರು.

2017ರ ಉಪ ಚುನಾವಣೆಯಲ್ಲಿ ಕಳಲೆ ಕೇಶವಮೂರ್ತಿ ಗೆಲುವಿಗೆ ಶ್ರಮಿಸಿದ್ದರು. 2018ರ ಸಾರ್ವಜನಿಕ ಚುನಾವಣೆಯಲ್ಲಿ ಎಚ್‌.ಡಿ. ಕೋಟೆ ಕ್ಷೇತ್ರದಿಂದ ಅನಿಲ್‌ ಚಿಕ್ಕಮಾದು ಅವರನ್ನು ಗೆಲ್ಲಿಸಿದ್ದರು. ಜೊತೆಗೆ ವರುಣ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಗೆಲುವಿಗೂ ಶ್ರಮಿಸಿದ್ದ ಜನನಾಯಕ ಆರ್‌. ಧ್ರುವನಾರಾಯಣ್‌ ರವರು.

ನಂಜನಗೂಡು ಕ್ಷೇತ್ರದಿಂದ ಧ್ರುವನಾರಾಯಣ್‌ ಅವರನ್ನು ಆಯ್ಕೆ ಮಾಡಬೇಕೆಂಬುದು ಕಾರ್ಯಕರ್ತರ ಅಭಿಲಾಷೆಯಾಗಿತ್ತು.

ಕ್ಷೇತ್ರದಲ್ಲಿ ಧ್ರುವನಾರಾಯಣ್‌ ಮತ್ತು ಎಚ್‌.ಸಿ. ಮಹದೇವಪ್ಪ ನಡುವೆ ಟಿಕೆಟ್‌ಗಾಗಿ ಪೈಪೋಟಿ ಎದುರಾದಾಗ ಧ್ರುವನಾರಾಯಣ್‌ ಪರವಾಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಜಿಪಂ ಮಾಜಿ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಸದಸ್ಯರು, ಮುಂಚೂಣಿ ಘಟಕದ ಅಧ್ಯಕ್ಷರು, ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಇ್ದದರು. ಅಲ್ಲದೆ ಅವರನ್ನು ಈ ಬಾರಿ ಗೆಲ್ಲಿಸಿ ಮಂತ್ರಿಯಾಗಿ, ಉಪಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಅಭಿಲಾಷೆಯಿಂದ ಉತ್ಸುಕರಾಗಿದ್ದರು. ಆದರೆ ವಿಧಿಯ ಆಟದಿಂದ ಕಾರ್ಯಕರ್ತರಲ್ಲಿ ನಿರಾಸೆ ಉಂಟಾಗಿದೆ.

ನಂಜನಗೂಡು ಕ್ಷೇತ್ರದಿಂದ ಧ್ರುವನಾರಾಯಣ್‌ ಪುತ್ರ ಕಾಂಗ್ರೆಸ್‌ ಅಭ್ಯರ್ಥಿ?

ಆರ್‌. ಧ್ರುವನಾರಾಯಣ್‌ ಅವರ ಪುತ್ರ ದರ್ಶನ್‌ಧ್ರುವ ಅವರಿಗೆ ನಂಜನಗೂಡು ಕ್ಷೇತ್ರದ ಟಿಕೆಟ್‌ ನೀಡಿ ಅವರನ್ನು ಅಭೂತಪೂರ್ವವಾಗಿ ಗೆಲ್ಲಿಸಿಕೊಡುವ ಮೂಲಕ ಧ್ರುವನಾರಾಯಣ್‌ ಅವರ ಕನಸನ್ನು ಈಡೇರಿತ್ತೇವೆ ಎಂಬುದು ಕಾರ್ಯಕರ್ತರು ಹೇಳುತ್ತಿದ್ದಾರೆ.

 ಸಂಸದರಾಗಿ ನಂಜನಗೂಡಿಗೆ ಕೊಡುಗೆ

ಒಂದು ಮತದಿಂದ ಸಂತೆಮರಳ್ಳಿ ವಿಧಾನಸಭಾ ಕ್ಷೇತ್ರದಿಂದ ಗೆದ್ದ ನಂತರ ಕೌಲಂದೆ ಭಾಗದಲ್ಲಿ ಕುಡಿಯುವ ನೀರಿಗೆ ತಾತ್ವರ ಉಂಟಾಗಿದ್ದನ್ನು ನಿವಾರಿಸುವ ಸಲುವಾಗಿ ಮೊತ್ತ ಮೊದಲಬಾರಿಗೆ 56 ಹಳ್ಳಿಗಳಿಗೆ ನದಿ ಮೂಲದಿಂದ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಿದವರು. ಜೊತೆಗೆ ಸಂಸದರಾಗಿ ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ, ಇಎಸ್‌ಐ ಆಸ್ಪತ್ರೆ ನಿರ್ಮಾಣ, ಹುಲ್ಲಹಳ್ಳಿ ರಸ್ತೆ ಅಭಿವೃದ್ದಿ, ನಂಜನಗೂಡು-ಮೈಸೂರು ಚತುಷ್ಪತ ರಸ್ತೆ ಅಭಿವೃದ್ದಿ, ನಂಜನಗೂಡು- ಚಾಮರಾಜನಗರ ರಾಜ್ಯ ಹೆದ್ದಾರಿ ಅಭಿವೃದ್ದಿ, ಹುಲ್ಲಹಳ್ಳಿ ಮತ್ತು 124 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನದಿ ಮೂಲದಿಂದ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದು. ಹೀಗೆ ಸದಾ ಕಾಲವೂ ಎಲ್ಲ ಗ್ರಾಮಗಳಿಗೂ ಸಹ ಸಮುದಾಯ ಭವನ ನಿರ್ಮಾಣಕ್ಕೆ ಒತ್ತು ನೀಡುವ ಮೂಲಕ ಅಭಿವೃದ್ದಿಗೆ ಮುಂದಾಗಿದ್ದರು.

2013ರ ಚುನಾವಣೆಯಲ್ಲಿ ಪ್ರಸಾದ್‌ ಗೆಲ್ಲಿಸಿದ್ದ ಜನನಾಯಕ

2013ರ ಚುನಾವಣೆಯಲ್ಲಿ ವಿ. ಶ್ರೀನಿವಾಸ ಪ್ರಸಾದ್‌ ಅವರಿಗೆ ಆರೋಗ್ಯ ಕೈಕೊಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕ್ಷೇತ್ರದಿಂದ ಪ್ರಸಾದ್‌ ತಮ್ಮ ರಾಮಸ್ವಾಮಿ ಸ್ಪರ್ಧಿಸುತ್ತಾರೆಂಬ ಕೂಗು ಕೇಳಿಬಂದಿತ್ತು. ಆದರೆ ಧ್ರುವನಾರಾಯಣ್‌ ಅವರು ಪ್ರಸಾದ್‌ ಅವರೇ ಅಭ್ಯರ್ಥಿಯಾಗುತ್ತಾರೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ಹೇಳಿಕೆ ನೀಡಿ ನೀವು ನಾಮಪತ್ರ ಸಲ್ಲಿಸಿ 2 ಗ್ರಾಮಗಳಿಗೆ ಮಾತ್ರ ಬನ್ನಿ ಎಂದು ಪ್ರಸಾದ್‌ ಅವರ ಮನವೊಲಿಸಿ. ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿ ಕ್ಷೇತ್ರದಾದ್ಯಂತ ತಾನೇ ಅಭ್ಯರ್ಥಿ ಎಂಬಂತೆ ಪ್ರಚಾರ ನಡೆಸಿ ಪ್ರಸಾದ್‌ ಗೆಲುವಿಗೆ ಕಾರಣರಾಗಿದ್ದರು. ಪ್ರಸಾದ್‌ ಅವರೂ ಕೂಡ ಧ್ರುವನಾರಾಯಣ್‌ ಕಾರ್ಯವೈಖರಿಗೆ ಮೆಚ್ಚಿ ನನ್ನ ನಂತರದ ದಲಿತ ನಾಯಕ ಆರ್‌. ಧ್ರುವನಾರಾಯಣ್‌ ಎಂದು ಹೇಳಿಕೆ ನೀಡಿದ್ದರು.

click me!