ಕಳೆದ ಮೂರು ವಾರಗಳಿಂದಲೂ ಕಾಡಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗೆ ಹುಲಿ ಜಾಡು ಸೆರೆಯಾಗದೇ ಇರುವುದರಿಂದ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಅಂಕಸಂದ್ರದ ಅರಣ್ಯ ಪ್ರದೇಶದಲ್ಲಿ ವ್ಯಾಘ್ರ ಇರುವುದು ಅನುಮಾನ ಎಂಬ ಶಂಕೆ ಬಲವಾಗುತ್ತಿದೆ
ಉಗಮ ಶ್ರೀನಿವಾಸ್
ತುಮಕೂರು : ಕಳೆದ ಮೂರು ವಾರಗಳಿಂದಲೂ ಕಾಡಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗೆ ಹುಲಿ ಜಾಡು ಸೆರೆಯಾಗದೇ ಇರುವುದರಿಂದ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಅಂಕಸಂದ್ರದ ಅರಣ್ಯ ಪ್ರದೇಶದಲ್ಲಿ ವ್ಯಾಘ್ರ ಇರುವುದು ಅನುಮಾನ ಎಂಬ ಶಂಕೆ ಬಲವಾಗುತ್ತಿದೆ. ಫೆಬ್ರವರಿ 15ರಂದು ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಅಂಕಸಂದ್ರ ಅರಣ್ಯ ಪ್ರದೇಶದಲ್ಲಿ ರಸ್ತೆಗೆ ನಿರ್ಮಿಸಲಾಗಿದ್ದ ಸೇತುವೆಯಡಿ ಹುಲಿಯ ಮೃತದೇಹ ಪತ್ತೆಯಾಗಿತ್ತು. ಇಡೀ ರಾಜ್ಯವನ್ನೇ ಈ ಸುದ್ದಿ ಗಮನಸೆಳೆದಿತ್ತು.
ತುಮಕೂರು ಜಿಲ್ಲೆಯಲ್ಲಿ ಯನ್ನು ನೋಡಿರುವುದಾಗಿ ಕಳೆದ 75 ವರ್ಷಗಳಿಂದಲೂ ಸುದ್ದಿ ಹರಿದಾಡಿತ್ತು. ಹುಲಿ ಹೆಜ್ಜೆಗುರುತನ್ನು ಕೂಡ ಪತ್ತೆ ಹಚ್ಚಲಾಗಿತ್ತು. ಆದರೆ ಹುಲಿ ಮಾತ್ರ ಪತ್ತೆಯಾಗಿರಲಿಲ್ಲ. ಆದರೆ ಏಕಾಏಕಿ ಕಳೆದ ತಿಂಗಳು 15 ರಂದು ಹುಲಿ ದೇಹ ಪತ್ತೆಯಾಗಿ ಆಶ್ಚರ್ಯ ಹುಟ್ಟಿಸಿತ್ತು. ಹುಲಿ ಶವ ಪತ್ತೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಂಕಸಂದ್ರ ಅರಣ್ಯದ ಸುತ್ತಮುತ್ತ 12 ಸಿಸಿ ಕ್ಯಾಮರಾ ಅಳವಡಿಸಿತ್ತು. ಆದರೆ ಮೂರು ವಾರ ಕಳೆದರೂ ಬೇರೆ ಬೇರೆ ಸೆರೆಯಾಗಿದೆಯೇ ವಿನಃ ಹುಲಿ ಇರುವುದು ಪತ್ತೆಯಾಗಿಲ್ಲ. ಗಂಡು ಹುಲಿಯ ಮೃತ ದೇಹ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಹುಲಿ ಸಂಸಾರ ಇರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಅಲ್ಲದೇ ಈ ಹಿಂದೆಯೂ ಕೂಡ ಹುಲಿ ಹೆಜ್ಜೆ ಗುರುತು ಬಗ್ಗೆ ಮಾತುಕತೆ ಹಿನ್ನೆಲೆಯಲ್ಲಿ ಕ್ಯಾಮರಾ ಅಳವಡಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಈವರೆಗೂ ಹುಲಿ ಪತ್ತೆಯಾಗದೇ ಇರುವುದರಿಂದ ಅಂಕಸಂದ್ರದಲ್ಲಿ ಶವವಾಗಿ ಪತ್ತೆಯಾಗಿದ್ದ ಹುಲಿ ಎಲ್ಲಿಂದಲೋ ಬಂದು ಸಾವನ್ನಪ್ಪಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಆದರೆ ಇಲಾಖೆ ಮಾತ್ರ ಸಿಸಿ ಕ್ಯಾಮರಾ ತೆಗೆದಿಲ್ಲ. ಇನ್ನೂ ಸ್ವಲ್ಪ ದಿನ ವಾಚ್ ಮಾಡಲು ತೀರ್ಮಾನಿಸಿದೆ. ಸಿಸಿ ಕ್ಯಾಮರಾ ಅಳವಡಿಸಿದ 15 ದಿವಸಗಳ ಕಾಲ ಅತ್ತ ಕಡೆ ಇಲಾಖೆ ಸಿಬ್ಬಂದಿಯಾಗಲಿ, ಜನರಾಗಲಿ ಓಡಾಡದಂತೆ ಕಟ್ಟಪ್ಪಣೆ ಹೊರಡಿಸಲಾಗಿತ್ತು. ಆದರೆ ಕ್ಯಾಮರಾದಲ್ಲಿ ಹುಲಿ ಬಿಟ್ಟು ಬೇರೆ ಎಲ್ಲಾ ಪ್ರಾಣಿಗಳು ಪತ್ತೆಯಾಗಿವೆ. ಹೀಗಾಗಿ ಹುಲಿಗಳು ಇರಬಹುದೆಂಬ ಕುತೂಹಲಕ್ಕೆ ಬ್ರೇಕ್ ಬಿದ್ದಂತಾಗಿದೆ.
ತುಮಕೂರು ಜಿಲ್ಲೆ ಹುಲಿಯ ಆವಾಸ ಸ್ಥಾನಕ್ಕೆ ತಕ್ಕುದಲ್ಲ ಎಂಬ ಸಂಶಯ ವ್ಯಕ್ತವಾಗಿದ್ದರೂ ಸಹ ಹುಲಿ ದೇಹ ಪತ್ತೆಯಾಗಿದ್ದು ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಪರಿಸರವಾದಿಗಳು, ವನ್ಯಜೀವಿ ತಜ್ಞರಿಗೂ ಕೂಡ ಇದೊಂದು ಕೌತುಕದ ವಿಷಯವಾಗಿ ಕಂಡಿತ್ತು. ಆದರೆ ಸಿಸಿ ಕ್ಯಾಮರಾದಲ್ಲಿ ಹುಲಿ ಗುರುತು ಪತ್ತೆಯಾಗದೇ ಇರುವುದರಿಂದ ಕೊಂಚ ನಿರಾಶ ಮೂಡಿಸಿದೆ.
ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲ:
ಹುಲಿ ದೇಹ ಪತ್ತೆಯಾಗಿ 3 ವಾರ ಕಳೆದರೂ ಕೂಡ ಇನ್ನೂ ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲ. ಅರಣ್ಯ ಇಲಾಖೆಯವರು ಕೂಡ ವರದಿ ಬರುವಿಕೆಗಾಗಿ ಕಾಯುತ್ತಿದ್ದಾರೆ. ವರದಿ ಬಂದ ಬಳಿಕ ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗುತ್ತದೆ, ಮಾತ್ರವಲ್ಲ ಹುಲಿ ಇರುವಿಕೆ ಬಗ್ಗೆ ಹೊಸ ಮಾಹಿತಿ ಲಭ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ ಇದೆ.
1. ಹುಲಿ ಹೊರತುಪಡಿಸಿ ಬೇರೆಲ್ಲಾ ಪ್ರಾಣಿಗಳು ಸಿಸಿ ಕ್ಯಾಮರಾಕ್ಕೆ ಸೆರೆ
2. ಬೇರೆ ಎಲ್ಲಿಂದಲೋ ಬಂದು ಜೀವ ಬಿಟ್ಟಿತಾ ವ್ಯಾಘ್ರ
3. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹೊಸ ಮಾಹಿತಿ ಲಭ್ಯ ಸಾಧ್ಯತೆ
4. ಮತ್ತಷ್ಟುಕ್ಯಾಮರಾವನ್ನು ಅರಣ್ಯದಲ್ಲಿ ಅಳವಡಿಸಲು ಚಿಂತನೆ
ಗುಬ್ಬಿ ತಾಲೂಕು ಅಂಕಸಂದ್ರ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಹುಲಿ ಇರುವಿಕೆ ಪತ್ತೆಯಾಗಿಲ್ಲ. ಅಲ್ಲದೇ ಹುಲಿಯ ಮರಣೋತ್ತರ ಪರೀಕ್ಷೆ ಕೂಡ ಇನ್ನೂ ಬಂದಿಲ್ಲ.
ಅನುಪಮ, ಡಿಸಿಎಫ್