Mysuru : ಚುನಾವಣೆ ಹೊಸ್ತಿಲಲ್ಲಿ ‘ಧ್ರುವ’ತಾರೆ ನಿರ್ಗಮನ

By Kannadaprabha News  |  First Published Mar 12, 2023, 5:41 AM IST

ಶನಿವಾರ ಇಹಲೋಕ ತ್ಯಜಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಚಾಮರಾಜನಗರ ಮಾಜಿ ಸಂಸದ ಆರ್‌. ಧ್ರುವನಾರಾಯಣ (62)  ಸರಳ, ಸಜ್ಜನಿಕೆ, ಕ್ರಿಯಾಶೀಲ ವ್ಯಕ್ತಿತ್ವದ ಬದ್ಧತೆಯ ರಾಜಕಾರಣಿಯಾಗಿದ್ದರು. ಪಕ್ಷಾತೀತವಾಗಿ ಎಲ್ಲರೊಡನೆ ಬೆರೆಯುತ್ತಾ ಅಜಾತಶತ್ರು ಎನಿಸಿಕೊಂಡಿದ್ದರು.


 ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ಶನಿವಾರ ಇಹಲೋಕ ತ್ಯಜಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಚಾಮರಾಜನಗರ ಮಾಜಿ ಸಂಸದ ಆರ್‌. ಧ್ರುವನಾರಾಯಣ (62)  ಸರಳ, ಸಜ್ಜನಿಕೆ, ಕ್ರಿಯಾಶೀಲ ವ್ಯಕ್ತಿತ್ವದ ಬದ್ಧತೆಯ ರಾಜಕಾರಣಿಯಾಗಿದ್ದರು. ಪಕ್ಷಾತೀತವಾಗಿ ಎಲ್ಲರೊಡನೆ ಬೆರೆಯುತ್ತಾ ಅಜಾತಶತ್ರು ಎನಿಸಿಕೊಂಡಿದ್ದರು.

Latest Videos

undefined

ಚಾಮರಾಜನಗರ ತಾಲೂಕು ಹೆಗ್ಗವಾಡಿಯವರಾದ ಧ್ರುವನಾರಾಯಣ ಎಂ.ಎಸ್ಸಿ (ಕೃಷಿ) ಪದವೀಧರರು. ಕಾಂಗ್ರೆಸ್‌ ಪಕ್ಷದ ಮೂಲಕ ರಾಜಕೀಯ ಪ್ರವೇಶ. ಎನ್‌ಎಸ್‌ಯುಐ, ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯ. ಕಾವೇರಿ ಗ್ರಾಮೀಣ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಧ್ರುವನಾರಾಯಣ ಅವರು ಮೈಸೂರು ಸೀಮೆಯ ವೀರಶೈವ ಜನಾಂಗದ ಪ್ರಭಾವಿ ನಾಯಕರಾಗಿದ್ದ ದಿವಂಗತ ಎಂ. ರಾಜಶೇಖರಮೂರ್ತಿ ಅವರ ಕಟ್ಟಾಬೆಂಬಲಿಗರಾಗಿದ್ದರು. 1996 ಹಾಗೂ 1998 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಯತ್ನಿಸಿದ್ದರು. ನಂತರ ರಾಜಶೇಖರಮೂರ್ತಿ ಅವರೊಂದಿಗೆ ಬಿಜೆಪಿಗೆ ಹೋಗಿದ್ದರು.

1999ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಯು ಹಾಗೂ ಬಿಜೆಪಿ ನಡುವೆ ಸ್ಥಾನ ಹೊಂದಾಣಿಕೆಯಾಗಿತ್ತು. ಆಗ ಬಿಜೆಪಿಯಲ್ಲಿದ್ದ ರಾಜಶೇಖರಮೂರ್ತಿ ಅವರು ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಯು ಟಿಕೆಟ್‌ ಕೊಡಿಸಿದ್ದರು. ಆದರೆ ಗೊಂದಲದಿಂದಾಗಿ ಕೆಲವು ಕಡೆ ಬಿಜೆಪಿ- ಜೆಡಿಯು ಅಭ್ಯರ್ಥಿಗಳು ಪರಸ್ಪರ ಎದುರಾಳಿಗಳಾಗಿದ್ದರು. ಇಂತಹ ಕ್ಷೇತ್ರಗಳಲ್ಲಿ ಸಂತೇಮರಹಳ್ಳಿ ಕೂಡ ಒಂದಾಗಿತ್ತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಕಣದಲ್ಲಿದ್ದರೂ ಕೂಡ ಜೆಡಿಯುನ ಎ.ಆರ್‌. ಕೃಷ್ಣಮೂರ್ತಿ ಹಾಗೂ ಬಿಜೆಪಿಯ ಆರ್‌. ಧ್ರುವನಾರಾಯಣ್‌ ಅವರ ನಡುವೆಯೇ ಗೆಲುವಿಗಾಗಿ ಪೈಪೋಟಿ ನಡೆಯಿತು. ಅಂತಿಮವಾಗಿ ಕೃಷ್ಣಮೂರ್ತಿ ಗೆದ್ದಿದ್ದರು. ಧ್ರುವನಾರಾಯಣ್‌ ಸೋತಿದ್ದರು.

ಸಂಸದರಾಗುವ ಕನಸು 2009 ರಲ್ಲಿ ನನಸು

2009ರ ಲೋಕಸಭಾ ಚುನಾವಣೆ ಎದುರಾದಾಗ ಬಿಜೆಪಿ ಎ.ಆರ್‌. ಕೃಷ್ಣಮೂರ್ತಿ ಅವರಿಗೆ ಟಿಕೆಟ್‌ ನೀಡಿತು. 2004 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಮೇಲೆ ಗೆದ್ದಿದ್ದ ಕಾಗಲವಾಡಿ ಶಿವಣ್ಣ ಅವರು ನಂತರ ಕಾಂಗ್ರೆಸ್‌ ಬೆಂಬಲಿಸಿ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಕೃಪೆಯಿಂದ ಟಿಕೆಟ್‌ ಗಟ್ಟಿಮಾಡಿಕೊಂಡಿದ್ದರು. ಶಿವಣ್ಣ ಅವರಿಗೆ ಟಿಕೆಟ್‌ ನೀಡುವುದಕ್ಕೆ ಆಗ ವರುಣ ಶಾಸಕರಾಗಿದ್ದ ಸಿದ್ದರಾಮಯ್ಯ, ನಂಜನಗೂಡು ಶಾಸಕರಾಗಿದ್ದ ವಿ. ಶ್ರೀನಿವಾಸಪ್ರಸಾದ್‌ ಸೇರಿದಂತೆ ಕ್ಷೇತ್ರದ 8 ಮಂದಿ ಶಾಸಕರ ವಿರೋಧ ವ್ಯಕ್ತವಾಯಿತು. ಶಿವಣ್ಣಗೆ ಟಿಕೆಟ್‌ ನೀಡಿದರೆ ಗೆಲ್ಲುವುದಿಲ್ಲ. ಧ್ರುವನಾರಾಯಣ್‌ಗೆ ಟಿಕೆಟ್‌ ನೀಡಿ ಎಂಬುದು ಎಲ್ಲರ ಆಗ್ರಹಪೂರ್ವಕ ಮನವಿಯಾಗಿತ್ತು. ಕೊನೆಗೂ ಹೈಕಮಾಂಡ್‌ ಶಾಸಕರ ಒತ್ತಡಕ್ಕೆ ಮಣಿದು ಧ್ರುವನರಾಯಣ್‌ ಅವರಿಗೆ ಟಿಕೆಟ್‌ ನೀಡಿತು.

ಸತತ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಎ.ಆರ್‌. ಕೃಷ್ಣಮೂರ್ತಿ ಅವರ ಬಗ್ಗೆ ಇದ್ದ ಅನುಕಂಪ, ಅವರ ತಂದೆ ಬಿ. ರಾಚಯ್ಯ ಅವರ ನಾಮಬಲ ಮತ್ತು ಆಗ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಸರ್ಕಾರದ ಸಂಪನ್ಮೂಲ, ವಿಧಾನಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪದಚ್ಯುತಿ ಕುರಿತು ನಡೆಸಿದ್ದ ಅಪಪ್ರಚಾರದ ನಡುವೆ ತಾವು ಸೋಲಬಹುದು ಎಂಬ ಭೀತಿ ಧ್ರುವನಾರಾಯಣ್‌ ಅವರಿಗಿತ್ತು. ಗೆದ್ದರೆ ಸಂಸದ, ಸೋತರೆ ಶಾಸಕ ಎಂಬಂತೆ ಕಣಕ್ಕಿಳಿದು ಹೋರಾಟ ಮಾಡಿದರು. ಕ್ಷೇತ್ರ ವ್ಯಾಪ್ತಿಯ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಕೈಹಿಡಿದಿದ್ದರಿಂದ 4001 ಮತಗಳ ಅಂತರದಿಂದ ಧ್ರುವನಾರಾಯಣ್‌ ಗೆದ್ದರು. ಈ ಮೂಲಕ ಎ.ಆರ್‌. ಕೃಷ್ಣಮೂರ್ತಿ ಅವರ ವಿರುದ್ಧ ಹ್ಯಾಟ್ರಿಕ್‌ ಗೆಲವು ದಾಖಲಿಸಿ, ಸಂಸದನಾಗುವ ದಶಕಗಳ ಕನಸು ನನಸು ಮಾಡಿಕೊಂಡರು.

2014ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಧ್ರುವನಾರಾಯಣ್‌ ಹಾಗೂ ಕೃಷ್ಣಮೂರ್ತಿ ಅವರ ನಡುವೆಯೇ ಹೋರಾಟ ನಡೆಯಿತು. 1,41,182 ಮತಗಳ ಭಾರಿ ಅಂತರದಿಂದ ಜಯ ದಾಖಲಿಸಿದರು. ಎರಡು ಅವಧಿಯಲ್ಲಿಯೂ ಅತ್ಯುತ್ತಮವಾಗಿ ಕೆಲಸ ಮಾಡಿ, ಉತ್ತಮ ಸಂಸದ ಎಂಬ ಹೆಗ್ಗಳಿಕೆ ಪಡೆದರು. ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯರಾಗಿದ್ದರು. 2017 ರಲ್ಲಿ ನಡೆದ ನಂಜನಗೂಡು ವಿಧಾನಸಭಾ ಉಪ ಚುನಾವಣೆಯಲ್ಲಿ ವಿ. ಶ್ರೀನಿವಾಸಪ್ರಸಾದ್‌ ಅವರ ವಿರುದ್ಧ ಕಳಲೆ ಕೇಶವಮೂರ್ತಿ ಅವರ ಗೆಲುವಿನಲ್ಲಿ ಧ್ರುವನಾರಾಯಣ್‌ ಅವರ ಪಾತ್ರ ಪ್ರಮುಖವಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಎಚ್‌.ಡಿ. ಕೋಟೆಯಲ್ಲಿ ಅನಿಲ್‌ ಚಿಕ್ಕಮಾದು, ವರುಣದಲ್ಲಿ ಡಾ.ಎಸ್‌. ಯತೀಂದ್ರ, ಚಾಮರಾಜನಗರದಲ್ಲಿ ಸಿ. ಪುಟ್ಟರಂಗಶೆಟ್ಟಿ, ಹನೂರಿನಲ್ಲಿ ಆರ್‌. ನರೇಂದ್ರ ಅವರ ಗೆಲುವಿಗೂ ಶ್ರಮಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಬಿಜೆಪಿಯಿಂದ ಕೊನೆ ಕ್ಷಣದಲ್ಲಿ ವಿ. ಶ್ರೀನಿವಾಸಪ್ರಸಾದ್‌ ಕಣಕ್ಕಿಳಿದರು. ಧ್ರುವನಾರಾಯಣ ಗೆದ್ದು, ಶ್ರೀನಿವಾಸಪ್ರಸಾದ್‌ ಸೋತರು ಎಂಬ ವಾತಾವರಣ ಇತ್ತು. ಆದರೆ ಕೊನೆಯ 20 ಸಾವಿರ ಮತಗಳ ಎಣಿಕೆಯಲ್ಲಿ ಶ್ರೀನಿವಾಸಪ್ರಸಾದ್‌ 1817 ಮತಗಳಿಂದ ಗೆದ್ದರು. ಧ್ರುವನಾರಾಯಣ್‌ ಸೋತರು.

ಹೀಗೆ ಎರಡು ಬಾರಿ ಶಾಸಕ, ಎರಡು ಬಾರಿ ಸಂಸದರಾಗಿದ್ದ ಧ್ರುವನಾರಾಯಣ್‌ ಸೋತ ನಂತರವೂ ಕ್ಷೇತ್ರದ ಸಂಪರ್ಕದಲ್ಲಿದ್ದರು. ಕೊರೋನಾ ಸಂಕಷ್ಟಸಮಯದಲ್ಲಿ ಕೆಪಿಸಿಸಿ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು

ಕೆಪಿಸಿಸಿ ಅಧ್ಯಕ್ಷರಾಗಿ ಒಕ್ಕಲಿಗ ಜನಾಂಗದ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷರಾಗಿ ವೀರಶೈವರಾದ ಈಶ್ವರ ಖಂಡ್ರೆ, ಮುಸ್ಲಿಮರಾದ ಸಲೀಂ ಅಹಮದ್‌, ನಾಯಕ ಜನಾಂಗದ ಸತೀಶ್‌ ಜಾರಕಿಹೊಳಿ ಇದ್ದರು. ನಂತರ ರೆಡ್ಡಿ ಜನಾಂಗದ ರಾಮಲಿಂಗಾರೆಡ್ಡಿ ಹಾಗೂ ದಲಿತ ಜನಾಂಗದ ಆರ್‌. ಧ್ರುವನಾರಾಯಣ ಅವರನ್ನು ನೇಮಿಸಿದ್ದರು.

ಇದಾದ ನಂತರ ಧ್ರುವನಾರಾಯಣ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಸಂಚರಿಸಿ ಕೆಲಸ ಮಾಡಿದರು. ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

- ಬಾಕ್ಸ್‌1--

-- ಒಂದು ಮತದ ಅಂತರದಿಂದ ಗೆದ್ದು ದಾಖಲೆ--

ವಿ. ಶ್ರೀನಿವಾಸಪ್ರಸಾದ್‌ ಅವರು ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿ, ನಂತರ ಕಾಂಗ್ರೆಸ್‌ಗೆ ಮರಳಿ, ಮತ್ತೆ ಲೋಕಶಕ್ತಿಗೆ ಹೋದಾಗ ಧ್ರುವನಾರಾಯಣ್‌ ಕಾಂಗ್ರೆಸ್‌ಗೆ ಮರಳಿದರು. 2004ರ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಲ್ಲಿ ಎ.ಆರ್‌. ಕೃಷ್ಣಮೂರ್ತಿ ಜೆಡಿಎಸ್‌ ಅಭ್ಯರ್ಥಿಯಾದರೆ, ಧ್ರುವನಾರಾಯಣ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಇವರಿಬ್ಬರ ನಡುವಿನ ಎರಡನೇ ಮುಖಾಮುಖಿ ಒನ್‌ ಡೇ ಅಥವಾ ಟೆಂಟ್ವಿ20 ಕ್ರಿಕೆಟ್‌ ಮ್ಯಾಚ್‌ನಷ್ಟೇ ರೋಚಕವಾಗಿತ್ತು. ಏಕೆಂದರೆ ಧ್ರುವನಾರಾಯಣ ಗೆದ್ದಿದ್ದು ಕೇವಲ 1 ಮತದ ಅಂತರದಿಂದ ಇದು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯ ಗೆಲವು.

--- ಬಾಕ್ಸ2--

2008ರ ವಿಧಾನಸಭಾ ಚುನಾವಣೆ ವೇಳೆಗೆ ಸಂತೇಮರಹಳ್ಳಿ ಕ್ಷೇತ್ರ ರದ್ದಾಯಿತು. ಆದರೆ ಸಂತೇಮರಹಳ್ಳಿ ಹೋಬಳಿ ಇಡಿಯಾಗಿ ಕೊಳ್ಳೇಗಾಲ ಕ್ಷೇತ್ರಕ್ಕೆ ಸೇರಿದದರಿಂದ ಹಾಲಿ ಶಾಸಕ ಎಂಬ ಮಾನದಂಡದ ಆಧಾರದ ಮೇಲೆ ಧ್ರುವನಾರಾಯಣ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ತಿತು. ಮಾಜಿ ಶಾಸಕರಾದ ಜಿ.ಎನ್‌. ನಂಜುಂಡಸ್ವಾಮಿ, ಎಸ್‌. ಜಯಣ್ಣ ಅವರಿಗೆ ಟಿಕೆಟ್‌ ನಿರಾಕರಿಸಲಾಯಿತು. ಎ.ಆರ್‌. ಕೃಷ್ಣಮೂರ್ತಿ ಕೂಡ ಇದೇ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿದ್ದರು. ಮೂರನೇ ಮುಖಾಮುಖಿಯಲ್ಲಿ ಕೂಡ ಧ್ರುವನಾರಾಯಣ್‌ ಗೆದ್ದರು. ಕೃಷ್ಣಮೂರ್ತಿ ಸೋತರು. ನಂತರ ಕೃಷ್ಣಮೂರ್ತಿ ಬಿಜೆಪಿ ಸೇರಿದರು.

--ಬಾಕ್ಸ3-

ನಂಜನಗೂಡಿನಿಂದ ಸ್ಪರ್ಧೆಗೆ ಸಜ್ಜಾಗಿದ್ದರು

ವಿ. ಶ್ರೀನಿವಾಸಪ್ರಸಾದ್‌, ಎಚ್‌. ವಿಶ್ವನಾಥ್‌, ಸಿದ್ದರಾಮಯ್ಯನಂತರ ಮೈಸೂರು ಭಾಗದ ಭರವಸೆಯ ರಾಜಕಾರಣಿಯಾಗಿದ್ದ ಧ್ರುವನಾರಾಯಣ ಅವರು ಈ ಬಾರಿ ನಂಜನಗೂಡಿನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಇರುವವರೆಗೆ ಯುಪಿಎ ಅಧಿಕಾರ ಕಷ್ಟ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಮಂತ್ರಿಯಾಗಬೇಕು ಎಂದು ಬಯಸಿದ್ದರು. ನಂಜನಗೂಡಿನಿಂದ ಅವರೊಂದಿಗೆ ಕಾಂಗ್ರೆಸ್‌ ಟಿಕೆಟ್‌ಗೆ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಹೆಸರು ಇತ್ತು. ಆದರೆ ಪಕ್ಕದ ಟಿ. ನರಸೀಪುರದಲ್ಲಿ ಮಹದೇವಪ್ಪ ಅವರ ಪುತ್ರ ಪುತ್ರ ಸುನಿಲ್‌ ಬೋಸ್‌ಗೆ ಟಿಕೆಟ್‌ ನೀಡಿದಲ್ಲಿ ನಂಜನಗೂಡಿನಲ್ಲಿ ಧ್ರುವನಾರಾಯಣ ಅವರಿಗೆ ಟಿಕೆಟ್‌ ನೀಡುವುದು ಖಚಿತವಾಗಿತ್ತು. ಅವರ ಆಸೆ ಕೈಗೂಡುವ ಮುನ್ನವೇ ಮರಳಿ ಬಾರದ ಊರಿಗೆ ಪಯಣಿಸಿದ್ದಾರೆ. ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಅವರ ನಿರ್ಗಮನ ಕಾಂಗ್ರೆಸ್‌ಗೆ ದೊಡ್ಡ ಹೊಡೆತ. ಏಕೆಂದರೆ ಮಾಜಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ನಿಧನಾನಂತರ ಚಾಮರಾಜನಗರ ಜಿಲ್ಲೆಯಲ್ಲಿ ಧ್ರುವನಾರಾಯಣ ಪ್ರಭಾವಶಾಲಿ ನಾಯಕರಾಗಿದ್ದರು. ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರಾಗಿದ್ದರು.

click me!