
ಧಾರವಾಡ: ನವಲಗುಂದ ತಾಲೂಕಿನ ಕರ್ಲವಾಡದಲ್ಲಿ 16 ವರ್ಷಗಳಿಂದ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಎರಡು ಗುಂಪುಗಳ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಬುಧವಾರ ಸುಖಾಂತ್ಯ ಕಂಡಿದೆ. ಇದರಿಂದ ಮೇ 2ರಂದು ಜರುಗುವ ಜಾತ್ರೆಗೆ ಅಧಿಕೃತ ಚಾಲನೆ ದೊರತಿದೆ.
ಗ್ರಾಮದಲ್ಲಿ 2009ರಲ್ಲಿ ನಿರ್ಮಿಸಲಾಗಿದ್ದ ಮಲ್ಲಮ್ಮ ಹಾಗೂ ಮಲ್ಲಯ್ಯ ದೇವಸ್ಥಾನ ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅಂದಿನಿಂದ ಎರಡು ದೇವಸ್ಥಾನಗಳು ಸರ್ಕಾರದ ಅಧೀನದಲ್ಲಿದ್ದು ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತು. ಪ್ರಸ್ತುತ ಗ್ರಾಮದಲ್ಲಿ ಗ್ರಾಮದೇವತೆ ದೇವಸ್ಥಾನ ಉದ್ಘಾಟನೆಗೆ ಸಂಬಂಧಿಸಿದಂತೆ ಒಂದು ಗುಂಪು ತಕರಾರು ತೆಗೆದಿತ್ತು.
ಈ ಹಿನ್ನೆಲೆ ಬುಧವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎರಡು ಗುಂಪುಗಳ ಮಧ್ಯ ಸಂಧಾನ ಸಭೆ ನಡೆಸಿದ ಅಧಿಕಾರಿಗಳು ಅವರ ಬೇಡಿಕೆ ಪರಿಶೀಲಿಸಿ ಇತ್ಯರ್ಥಪಡಿಸಿದರು. ಗ್ರಾಮದಲ್ಲಿ ಶಾಂತಿ ನೆಲೆಸುವ ಉದ್ದೇಶದಿಂದ ಏ. 21ರಂದು ಮಲ್ಲಮ್ಮನ ಹಾಗೂ ಮಲ್ಲಯ್ಯನ ದೇವಸ್ಥಾನದ ಬಾಗಿಲು ತೆರೆಯುವುದು ಹಾಗೂ ಏ. 28ರಿಂದ ಮೇ 2ರ ವರೆಗೆ ಜರುಗಲಿರುವ ಗ್ರಾಮದೇವತೆಗಳ ಜಾತ್ರಾ ಮಹೋತ್ಸವವನ್ನು ಎರಡೂ ಗುಂಪುಗಳು ಒಟ್ಟಾಗಿ ನಡೆಸಲು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಯಿತು.
ಇದನ್ನೂ ಓದಿ: ದೂದಿಹಳ್ಳಿ ಗ್ರಾಮದ ಕೆರೆಯ ಹೂಳು ತೆಗೆಯುವಾಗ ಸಿಕ್ತು 3 ಅಡಿ ಎತ್ತರದ ನಂದಿ ಮೂರ್ತಿ
ತಹಸೀಲ್ದಾರ್ ಸುಧೀರ ಸಾಹುಕಾರ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್‍ಐ ಜನಾರ್ಧನ ಭಟ್ರಳ್ಳಿ, ತಾಪಂ ಇಒ ರವೀಂದ್ರಗೌಡ ಪಾಟೀಲ, ಗ್ರಾಮದ ಹಿರಿಯರಾದ ದೇವರಾಜಸ್ವಾಮಿ ಹಿರೇಮಠ, ಅರುಣಕುಮಾರ ಮೆಣಸಿನಕಾಯಿ, ಪ್ರವೀಣ ಕುಂದಗೋಳ, ಈರಣ್ಣ ತೆಗ್ಗಿನಮನಿ, ನಿಂಗನಗೌಡ ಪಾಟೀಲ, ಮುತ್ತು ಕಲಾದಗಿಮಠ, ಅಡಿವೆಪ್ಪ ಕುಂದಗೋಳ, ಸತೀಶ ಹಂಚಿನಾಳ, ಶೇಖರಯ್ಯ ಹಿರೇಮಠ, ಆರ್.ವಿ. ಚವ್ಹಣ್ಣವರ, ವೆಂಕರಡ್ಡಿ ಮೇಲಗೇರಿ, ಮಂಜುನಾಥ ಚುಳಕಿ, ಮಂಜುನಾಥ ರಾಮನಗೌಡ, ಕೆ.ಜಿ. ಕೊಣ್ಣೂರ, ಬಸವರಾಜ ಮಾಡೊಳ್ಳಿ, ಕೃಷ್ಣರಡ್ಡಿ ಈರಡ್ಡಿ, ಶಿವಾನಂದ ಹಂಜಿ, ಬಸವರಡ್ಡಿ ಮುಗನೂರ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ತುಮಕೂರು: ಸತ್ಯಮಂಗಲದಲ್ಲಿ ಬಯಲಾದ 700 ವರ್ಷಗಳ ಹಿಂದಿನ ರಹಸ್ಯ! ಅಪರೂಪದ ವಿಶೇಷ ವೀರಗಲ್ಲು ಶಾಸನ ಪತ್ತೆ