Hubballi: ಪಾಲಿಕೆಗೆ ಕೇಳಿಸುತ್ತಿಲ್ಲ ಗಣೇಶನ ಅರ್ತನಾದ! ಹೊಸೂರು ಬಾವಿಯಲ್ಲಿ ಮೂರ್ತಿಗಳು

Published : Oct 29, 2026, 08:03 AM IST
Hubballi  hosuru Bhavi

ಸಾರಾಂಶ

ಹುಬ್ಬಳ್ಳಿಯ ಹೊಸೂರು ಬಾವಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯಾಗಿ ತಿಂಗಳು ಕಳೆದರೂ ಮಹಾನಗರ ಪಾಲಿಕೆ ತ್ಯಾಜ್ಯ ತೆರವುಗೊಳಿಸಿಲ್ಲ. ಇದರಿಂದಾಗಿ ಮೂರ್ತಿಗಳ ಅವಶೇಷಗಳು ಕೊಳೆತು ದುರ್ನಾತ ಬೀರುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದ್ದು, ತಕ್ಷಣವೇ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಭಕ್ತಿಯಿಂದ ಪೂಜಿಸಿ, ಅದ್ಧೂರಿ ಮೆರವಣಿಗೆಯಲ್ಲಿ ಬೀಳ್ಕೊಟ್ಟ ಗಣೇಶಮೂರ್ತಿಗಳು ಹೊಸೂರು ಬಾವಿಯಲ್ಲಿ ಅನಾಥವಾಗಿ ಬಿದ್ದಿವೆ. ಮುರಿದ ಕೈಕಾಲು, ಬೇರ್ಪಟ್ಟ ಸೊಂಡಿಲು, ಕಿರೀಟ, ಕೊಳೆತ ಹೂವು, ಬಟ್ಟೆ ಹಾಗೂ ಕಟ್ಟಿಗೆಯ ಅವಶೇಷಗಳು ನೀರಿನಲ್ಲೇ ಉಳಿದು ದುರ್ನಾತ ಬೀರುತ್ತಿವೆ.

ಗಣೇಶಮೂರ್ತಿಗಳ ವಿಸರ್ಜನೆ ಮುಗಿದು ತಿಂಗಳಾದರೂ ಇವುಗಳನ್ನು ತೆರವುಗೊಳಿಸುವ ಗೋಜಿಗೆ ಮಹಾನಗರ ಪಾಲಿಕೆ ಹೋಗಿಲ್ಲ. ಪರಿಣಾಮ, ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಜತೆಗೆ ಸುತ್ತಮುತ್ತಲಿನ ನಿವಾಸಿಗಳು ಕೊಳಕು ವಾಸನೆಯ ನಡುವೆ ಬದುಕುವಂತಾಗಿದೆ.

ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಆದರೆ, ಉತ್ಸವದ ಸಂಭ್ರಮ ಮುಗಿದ ಬಳಿಕ ಮೂರ್ತಿಗಳ ಅವಶೇಷಗಳನ್ನು ಗೌರವಯುತವಾಗಿ ತೆರವುಗೊಳಿಸಿ, ವಿಸರ್ಜನಾ ಸ್ಥಳವನ್ನು ಸ್ವಚ್ಛವಾಗಿಡುವ ಮೂಲಭೂತ ಹೊಣೆಗಾರಿಕೆಯೇ ನನೆಗುದಿಗೆ ಬಿದ್ದಿದೆ.

ದುರ್ನಾತದ ನಡುವೆ ಬದುಕು

ಒಂದೂವರೆ ತಿಂಗಳ ಹಿಂದೆ ವಿಸರ್ಜಿಸಲಾದ 15ರಿಂದ 25 ಅಡಿ ಎತ್ತರದ ಬೃಹತ್ ಗಣೇಶಮೂರ್ತಿಗಳ ಅವಶೇಷಗಳು ಇನ್ನೂ ಬಾವಿಯಲ್ಲೇ ಇವೆ. ಅಲಂಕಾರಕ್ಕೆ ಬಳಸಿದ ಬಟ್ಟೆ, ಕಟ್ಟಿಗೆ, ಹೂವಿನ ಮಾಲೆ ಹಾಗೂ ಇತರ ತ್ಯಾಜ್ಯ ಕೊಳೆತು ವಾತಾವರಣ ಕಲುಷಿತಗೊಳಿಸಿವೆ. ಸುತ್ತಮುತ್ತಲಿನ ಮನೆ-ಅಂಗಡಿಗಳ ನಿವಾಸಿಗಳು ದುರ್ನಾತದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿದರೂ ಪಾಲಿಕೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂಬುದು ಸ್ಥಳೀಯರ ಆಕ್ರೋಶ.

ಸ್ವಚ್ಛತೆಗೆ ನಿರ್ಲಕ್ಷ್ಯ

ಹುಬ್ಬಳ್ಳಿಯಲ್ಲಿ 950ಕ್ಕೂ ಹೆಚ್ಚು ಸಾರ್ವಜನಿಕ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. 5, 7, 9 ಹಾಗೂ 11 ದಿನಗಳ ಪೂಜೆಯ ಬಳಿಕ ಉಣಕಲ್ ಕೆರೆ ಪಕ್ಕದ ಕೃತಕ ಬಾವಿ, ಹೊಸೂರು ಬಾವಿ ಮತ್ತು ಇಂದಿರಾ ಗಾಜಿನ ಮನೆ ಸಮೀಪದ ಬಾವಿಗಳಲ್ಲಿ ವಿಸರ್ಜಿಸಲಾಗುತ್ತದೆ.

ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸುವ ಮಹಾನಗರ ಪಾಲಿಕೆ, ಬಳಿಕ ಮೂರ್ತಿಗಳ ಅವಶೇಷಗಳನ್ನು ತೆರವುಗೊಳಿಸಿ ಸ್ಥಳವನ್ನು ಸ್ವಚ್ಛವಾಗಿಡಬೇಕು. ಆದರೆ, ಉತ್ಸವದ ಸಂದರ್ಭದಲ್ಲಿ ಸಕ್ರಿಯವಾಗಿರುವ ವ್ಯವಸ್ಥೆ, ವಿಸರ್ಜನೆಯ ನಂತರ ನಿಷ್ಕ್ರಿಯವಾದಂತಿದೆ. ಭಕ್ತಿಯಿಂದ ಆರಾಧಿಸಿದ ಮೂರ್ತಿಗಳ ಅವಶೇಷಗಳು ಹೀಗೆ ಮುರಿದು, ಕೊಳೆತು ಬಿದ್ದಿರುವುದು ಭಕ್ತರ ಮನಸ್ಸಿಗೂ ನೋವುಂಟುಮಾಡಿದೆ.

ಸಂಘಟನೆಗಳೂ ಗಮನಿಸುತ್ತಿಲ್ಲ

ಗಣೇಶೋತ್ಸವದ ಯಶಸ್ಸಿಗಾಗಿ ಶ್ರಮಿಸುವ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ, ವಿವಿಧ ಗಣೇಶ ಮಂಡಳಿಗಳು ಹಾಗೂ ಹಿಂದೂಪರ ಮತ್ತು ಪರಿಸರ ಪರ ಸಂಘಟನೆಗಳು ವಿಸರ್ಜನೆಯ ನಂತರದ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ಧಾರ್ಮಿಕ ಆಚರಣೆಯ ಗೌರವ ಕಾಪಾಡುವ ಜತೆಗೆ ಸಾರ್ವಜನಿಕ ಆರೋಗ್ಯದ ಹಿತವನ್ನೂ ರಕ್ಷಿಸಬೇಕಿದೆ.

ಗಣೇಶೋತ್ಸವದ ವೇಳೆ ಲಕ್ಷಾಂತರ ಭಕ್ತರ ಭಾವನೆಗಳಿಗೆ ಸ್ಪಂದಿಸುವ ವ್ಯವಸ್ಥೆ, ಹಬ್ಬ ಮುಗಿದ ಬಳಿಕವೂ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ಹೊಸೂರು ಬಾವಿಯಲ್ಲಿನ ಅವಶೇಷಗಳನ್ನು ತಕ್ಷಣ ತೆರವುಗೊಳಿಸಿ, ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯ.

ತ್ಯಾಜ್ಯ ತೆರವುಗೊಳಿಸಿ

ಹೊಸೂರು ಬಾವಿಯಲ್ಲಿ ವಿಸರ್ಜಿಸಲಾದ ಗಣೇಶಮೂರ್ತಿಗಳ ಅವಶೇಷ ಸೇರಿದಂತೆ ತ್ಯಾಜ್ಯವನ್ನು ತೆರವುಗೊಳಿಸುವುದು ಪಾಲಿಕೆಯ ಜವಾಬ್ದಾರಿ. ಒಂದು ತಿಂಗಳು ಕಳೆದರೂ ಸ್ವಚ್ಛತಾ ಕಾರ್ಯ ಕೈಗೊಳ್ಳದಿರುವುದು ತೀವ್ರ ನೋವುಂಟು ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮಕೈಗೊಂಡು ಬಾವಿಯಲ್ಲಿರುವ ತ್ಯಾಜ್ಯವನ್ನು ಹೊರತೆಗೆಯಬೇಕು ಎಂದು ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ "ಕನ್ನಡಪ್ರಭ"ಕ್ಕೆ ತಿಳಿಸಿದರು.

ಗಣೇಶಮೂರ್ತಿಗಳನ್ನು ವಿಸರ್ಜಿಸಿ ತಿಂಗಳು ಕಳೆದರೂ ಅವಶೇಷಗಳನ್ನು ತೆರವುಗೊಳಿಸಿಲ್ಲ. ಅವು ಕೊಳೆತು ವಿಪರೀತ ದುರ್ನಾತ ಬೀರುತ್ತಿವೆ. ಬಾವಿಯ ಸುತ್ತಮುತ್ತ ಸಂಚರಿಸಲೂ ಕಷ್ಟವಾಗಿದ್ದು, ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ಶಿವಶಂಕರ ಹುಬ್ಬಳ್ಳಿ, ಸ್ಥಳೀಯ ನಿವಾಸಿ

PREV
Read more Articles on
click me!

Recommended Stories

ಸಚಿವ ಯತೀಂದ್ರ ಸಿದ್ದರಾಮಯ್ಯ ಜಂಬದ ಕೋಳಿಯಂತೆ ಮಾತನಾಡಬಾರದು: ಹೆಚ್. ವಿಶ್ವನಾಥ್
ಮೈಸೂರು ದಸರಾ: ಮಹಾಂತ ಜೋಳಿಗೆ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ! ಎರಡನೇ ಸ್ಥಾನ ಯಾವ ಜಿಲ್ಲೆಗೆ?