
ಧಾರವಾಡ: ಇಲ್ಲಿಯ ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಹುನ್ನಾರಕ್ಕೆ ತಡೆ ಬಿದ್ದಿದೆ. ಪ್ರಸಾರ ಭಾರತಿ ಸಕ್ಷಮ ಪ್ರಾಧಿಕಾರದ ಈ ಆದೇಶಕ್ಕೆ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಾಂತರದ ಆದೇಶವನ್ನು ಪ್ರಸಾರ ಭಾರತಿ ಹಿಂಪಡೆದಿದೆ. ಉತ್ತರ ಕರ್ನಾಟಕದ ಜನತೆಯಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಪರ್ಕಿಸಿ ವಿಭಾಗವನ್ನು ಧಾರವಾಡದಲ್ಲಿಯೇ ಮುಂದುವರಿಸಲು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಸಾರ ಭಾರತಿಯು ಏ.17ರಂದು ಮಾಡಿದ್ದ ಸ್ಥಳಾಂತರದ ಆದೇಶವನ್ನು ಹಿಂಪಡೆದಿದೆ. ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಜೋಶಿ ಧನ್ಯವಾದ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ 15 ಜಿಲ್ಲೆಗಳ ವ್ಯಾಪ್ತಿಯಲ್ಲಿ ಧಾರವಾಡ ಆಕಾಶವಾಣಿ ಪ್ರಸಾರ ಹೊಂದಿದೆ.
ಈ ಹಿಂದೆ 2020 ಹಾಗೂ 2023ರಲ್ಲೂ ಇದೇ ರೀತಿಯ ಆದೇಶ ಬಂದಾಗ ಸ್ಥಳೀಯರ ವಿರೋಧದಿಂದ ಸ್ಥಳಾಂತರದ ನಿರ್ಧಾರ ಕೈ ಬಿಡಲಾಗಿತ್ತು. ಈಗ ಮತ್ತೆ ಸ್ಥಳಾಂತರದ ಆದೇಶ ಬಂದಿದ್ದು, ಪ್ರಸಾರ ಭಾರತಿಯು ಈ ನಿರ್ಧಾರ ಕೈ ಬಿಡದೇ ಇದ್ದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದ್ದರು.
ಈ ವಿಭಾಗದ ಮಹತ್ವ ಏನು?:
ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದ 15 ಜಿಲ್ಲೆಗಳ ಮಹತ್ವದ ಸುದ್ದಿ ಪ್ರಸಾರ ಕೇಂದ್ರವಿದು. ಈ ವಿಭಾಗದಿಂದ ಪ್ರಸಾರ ಆಗುವ ಬೆಳಗಿನ 7.05ರ ಪ್ರದೇಶ ಸಮಾಚಾರವನ್ನು 5.5 ಕೋಟಿ ಜನರು ಕೇಳುತ್ತಾರೆ ಎಂಬುದನ್ನು ಶ್ರೋತೃ ಸಂಶೋಧನಾ ವಿಭಾಗ ಮಾಡಿದ ಸಮೀಕ್ಷೆಯಲ್ಲಿಯೇ ಬಹಿರಂಗವಾಗಿದೆ