ಗಾಂಧೀಜಿ ಕಂಡ ಗ್ರಾಮಸ್ವರಾಜ್ ಪರಿಕಲ್ಪನೆಗೆ ಪೂರಕವಾಗಿ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳನ್ನು ಆರ್ಥಿಕವಾಗಿ ಸುಭದ್ರತೆಗೊಳಿಸಿ, ತಾಲೂಕಿನಲ್ಲಿ ನೂರಾರು ದೇವಸ್ಥಾನಗಳ ಅಭಿವೃದ್ಧಿಗೆ ಧನ ಸಹಾಯ ಮಾಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಚಿಂತನೆ ಶ್ಲಾಘನೀಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಡಿ.ದಿನೇಶ್ ತಿಳಿಸಿದರು.
ಶಿರಾ : ಗಾಂಧೀಜಿ ಕಂಡ ಗ್ರಾಮಸ್ವರಾಜ್ ಪರಿಕಲ್ಪನೆಗೆ ಪೂರಕವಾಗಿ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳನ್ನು ಆರ್ಥಿಕವಾಗಿ ಸುಭದ್ರತೆಗೊಳಿಸಿ, ತಾಲೂಕಿನಲ್ಲಿ ನೂರಾರು ದೇವಸ್ಥಾನಗಳ ಅಭಿವೃದ್ಧಿಗೆ ಧನ ಸಹಾಯ ಮಾಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಚಿಂತನೆ ಶ್ಲಾಘನೀಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಡಿ.ದಿನೇಶ್ ತಿಳಿಸಿದರು.
ತಾಲೂಕಿನ ತೊಗರಗುಂಟೆ ಗ್ರಾಮದ ಶ್ರೀ ಅಮ್ಮಾಜಮ್ಮ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಲಕ್ಷ್ಮೇನರಸಿಂಹ ಸ್ವಾಮಿ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಅಭಿವೃದ್ಧಿಪಡಿಸಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 3 ಲಕ್ಷ ರುಪಾಯಿಗಳ ಧನ ಸಹಾಯ ಚೆಕ್ ವಿತರಣೆ ಮಾಡಿ ಮಾತನಾಡಿದರು.
ಶಿರಾ ತಾಲೂಕಿನಲ್ಲಿ 3500 ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡುವ ಮೂಲಕ, 30 ಸಾವಿರ ಕುಟುಂಬಗಳಿಗೆ ಬದುಕು ಕಟ್ಟಿಕೊಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಶಸ್ವಿಯಾಗಿದೆ. ಅಲ್ಲದೆ ಸಾವಿರಾರು ನಿರ್ಗತಿಕರಿಗೆ ಪ್ರತಿ ತಿಂಗಳು ಮಾಸಾಶನ ನೀಡಿ ಬಡತನವನ್ನು ನಿರ್ಮೂಲನೆ ಮಾಡುವ ಶ್ರೀ ಕ್ಷೇತ್ರದ ಸಂಕಲ್ಪ ಜನ ಮೆಚ್ಚುವಂತಹದ್ದು ಎಂದರು.
ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಸಬಲತೆಗೆ ಹೆಚ್ಚು ಒತ್ತು ನೀಡಿ, ಸಣ್ಣ ಸಣ್ಣ ವ್ಯಾಪಾರ ವಹಿವಾಟುಗಳಿಗೆ ಸಾಲ ನೀಡುವ ಮೂಲಕ ಬಡ ಕುಟುಂಬಗಳ ಆರ್ಥಿಕ ಚೇತರಿಕೆಗೆ ಕಾರಣವಾಗುತ್ತಿರುವ ವೀರೇಂದ್ರ ಹೆಗಡೆಯವರ ಪರಿಕಲ್ಪನೆ ಯಾವ ಸರ್ಕಾರವು ಮಾಡಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಮಚಂದ್ರ ಗುಪ್ತ, ಶ್ರೀ ಅಮ್ಮಾಜಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹನುಮಂತರಾಯಪ್ಪ, ಕಾರ್ಯದರ್ಶಿ ಟಿ.ಎಚ್.ದೊಡ್ಡಯ್ಯ, ತಾಲೂಕು ಯೋಜನಾ ನಿರ್ದೇಶಕ ಸದಾಶಿವ ಗೌಡ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಟಿ.ಡಿ. ನರಸಿಂಹಮೂರ್ತಿ, ಮುಖಂಡ ಟಿ.ಎಸ್. ರವಿಚಂದ್ರ, ಮಲ್ಲೇಶ್, ಮಂಜುನಾಥ್, ಮೇಲ್ವಿಚಾರಕ ಅಜಿತ್ ಕುಮಾರ್, ಪಂಕಜ ಸೇರಿದಂತೆ ಹಲವರು ಹಾಜರಿದ್ದರು.