
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಕ್ಕಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್‌ಐಟಿ ಸಲ್ಲಿಕೆ ಮಾಡಿರುವ ವರದಿ ಮೇಲಿನ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪನ್ನು ಜ.3ಕ್ಕೆ ಮುಂದೂಡಿದೆ.
ಎಸ್‌ಐಟಿ ನ.20ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಚಿನ್ನಯ್ಯ ಸಹಿತ 6 ಮಂದಿಯನ್ನು ಆರೋಪಿಗಳನ್ನಾಗಿ ಉಲ್ಲೇಖಿಸಿತ್ತು. ತನಿಖೆಯ ವಿವರವನ್ನು ದಾಖಲಿಸಿ ಮುಂದಿನ ತನಿಖೆಗೆ ಮಾರ್ಗದರ್ಶನ ನೀಡುವಂತೆ ಎಸ್‌ಐಟಿ ಪರ ಸಹಾಯಕ ಸರ್ಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಅವರು ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಸೆಕ್ಷನ್ ನಡಿ ಸುಳ್ಳು ಸಾಕ್ಷಿಯ ಅಪರಾಧಕ್ಕಾಗಿ ಕಾನೂನು ಕ್ರಮಕ್ಕೆ ವಿನಂತಿಸಿ ಆರೋಪಿಗಳ ವಿರುದ್ಧ 3,923 ಪುಟಗಳ ವರದಿಯನ್ನು ಸಲ್ಲಿಸಿದ್ದರು. ಕೆಲವೊಂದು ಮಹತ್ವದ ಅಂಶಗಳನ್ನು ನ್ಯಾಯಾಲಯದ ಮುಂದಿಟ್ಟು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿಸಿದ್ದರು. ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು, ತೀರ್ಪನ್ನು ಜನವರಿ 3ಕ್ಕೆ ಮುಂದೂಡಿದರು.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಜಾತಿ ಬಗ್ಗೆ ದ್ವೇಷ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿದೆ. ಬೆಳ್ತಂಗಡಿ ಪೊಲೀಸರು ಈ ಸಂಬಂಧ ಬೆಳ್ತಂಗಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ತಿಮರೋಡಿಯವರು ವಿಚಾರಣೆಗೆ ಪದೇ ಪದೆ ಗೈರಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ.
ತಿಮರೋಡಿ ಅವರನ್ನು ಗಡಿಪಾರು ಮಾಡಿ ಪುತ್ತೂರು ಸಹಾಯಕ ಕಮಿಷನರ್ ಅವರು ಈಗಾಗಲೇ ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಅವರು ಬೆಳ್ತಂಗಡಿ ಪೊಲೀಸರಿಗೆ ಸಿಗದಂತೆ ತಲೆ ಮರೆಸಿಕೊಂಡಿದ್ದಾರೆ.
ಹಾವೇರಿ: ಕೊಬ್ಬರಿ ಹೋರಿಯೊಂದು ಬಾರ್‌ಗೆ ನುಗ್ಗಿದ ಹಿನ್ನೆಲೆಯಲ್ಲಿ ಅಲ್ಲಿ ಮದ್ಯವನ್ನು ಹೀರುತ್ತಾ ಕುಳಿತಿದ್ದವರು ಕಕ್ಕಾಬಿಕ್ಕಿಯಾಗಿ ಓಡಿದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕು ಚಿಕ್ಕೇರೂರಿನಲ್ಲಿ ನಡೆದಿದೆ. ಸೋಮವಾರ ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆ ನಡೆದಿತ್ತು. ಅಲ್ಲಿ ಓಡಿದ್ದ ಹೋರಿಯೊಂದು ಡಿ.ಜೆ.ಪ್ಯಾಲೇಸ್ ರೆಸ್ಟೋರೆಂಟ್ ಮತ್ತು ಲಾಡ್ಜ್‌ಗೆ ನುಗ್ಗಿತು. ಈ ವೇಳೆ, ಅಲ್ಲಿ ಮದ್ಯ ಕುಡಿಯುತ್ತಿರುವವರು ಗಾಬರಿಗೊಂಡು ಹೊರಗೆ ಓಡಿದರು. ಬಳಿಕ, ಕೇಕೆ ಹಾಕಿ ಹೋರಿಯನ್ನು ಓಡಿಸಿದರು. ಬಾರ್‌ಗೆ ನುಗ್ಗಿದ ಹೋರಿಯ ವಿಡಿಯೋ ವೈರಲ್ ಆಗಿದೆ.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿ ಭವನ ನಿರ್ಮಾಣಕ್ಕೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಗಡಿ ಭವನ ನಿರ್ಮಾಣಕ್ಕೆ ಅವಕಾಶ ನೀಡದಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಂಇಎಸ್ ನಾಯಕರು ಮಹಾರಾಷ್ಟ್ರ ಸರ್ಕಾರ ಬಳಸಿಕೊಂಡು ಗಡಿಜಿಲ್ಲೆ ಬೆಳಗಾವಿಯಲ್ಲಿ ನಾಡದ್ರೋಹಿ ಚಟುವಟಿಕೆ ಮೂಲಕ ಪುಂಡಾಟಿಕೆ ಪ್ರದರ್ಶಿಸುತ್ತಾ ಬಂದಿದ್ದಾರೆ. ಬೆಳಗಾವಿಯಲ್ಲಿ ಕೆಲ ವರ್ಷಗಳ ಹಿಂದೆ ಹುತಾತ್ಮ ಭವನ ನಿರ್ಮಿಸಲು ಮುಂದಾಗಿದ್ದ ಎಂಇಎಸ್ ಈಗ ಮಹಾರಾಷ್ಟ್ರ ಗಡಿ ಭವನ ನಿರ್ಮಿಸುವ ಕುತಂತ್ರ ಮಾಡುತ್ತಿರುವುದು ಸರಿಯಲ್ಲ. ಇಲ್ಲಿ ಗಡಿ ಭವನ ನಿರ್ಮಿಸಿ ಭಾಷಾ