ಯಲ್ಲಮ್ಮ ಸನ್ನಿಧಿಯಲ್ಲಿ ನಿನ್ನಾಲ್ಕು ಉಧೋ..ಉಧೋ: ಮುಗಿಲು ಮುಟ್ಟಿದ ಭಕ್ತರ ಸಂಭ್ರಮ

By Kannadaprabha NewsFirst Published Feb 10, 2020, 12:05 PM IST
Highlights

ಭಾರತ ಹುಣ್ಣಿಮೆ ಜಾತ್ರೆ ನಿಮಿತ್ತ ಯಲ್ಲಮ್ಮ ಸನ್ನಿಧಿಗೆ ಲಕ್ಷೋಪ ಲಕ್ಷ ಭಕ್ತರ ದಂಡು| ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಯಲ್ಲಮ್ಮ ದೇವಸ್ಥಾನ| ಎಣ್ಣೆ ಹೊಂಡದಲ್ಲಿ ಸ್ನಾನ ಮಾಡಿ ಪವಿತ್ರರಾದ ಭಕ್ತರು|  ಎಣ್ಣೆ ಹೊಂಡದ ಪವಿತ್ರ ನೀರಿನಿಂದ ಸ್ನಾನ ಮಾಡಿ ಶ್ರೀದೇವಿಯ ದರ್ಶನ ಪಡೆದ ಭಕ್ತರು|

ಸುರೇಶ ಭೀ. ಬಾಳೋಜಿ 

ಸವದತ್ತಿ(ಫೆ.10): ಏಳು ಕೊಳ್ಳದ ಸಂಗಮ ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಭಾರತ ಹುಣ್ಣಿಮೆ ನಿಮಿತ್ತ ಸೇರಿದ್ದ ಲಕ್ಷೋಪ ಲಕ್ಷ ಭಕ್ತರು ಶ್ರೀದೇವಿ ದರ್ಶನ ಪಡೆದು ಕೃತಾರ್ಥರಾದರು. ಭಕ್ತಿಯ ಪರಾಕಾಷ್ಠೆಯ ಮಡಿಲಲ್ಲಿ ಉಧೋ...! ಉಧೋ...! ಉದ್ಘಾರ ಮೊಳಗಿ, ಶ್ರೀ ಕ್ಷೇತ್ರದಲ್ಲಿ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

ಕನ್ನಡ ನಾಡಿನ ಉತ್ತರ ಭಾಗದಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರವೆನಿಸಿಕೊಂಡಿರುವ ಕ್ಷೇತ್ರದ ಏಳು ಕೊಳ್ಳದ ಯಲ್ಲಮ್ಮನೆಂದೇ ಖ್ಯಾತಿಯಾದ ರೇಣುಕಾಮಾತೆಗೆ ಭಾರತ ಹುಣ್ಣಿಮೆಯಂದು ಅಪಾರ ಪ್ರಮಾಣದಲ್ಲಿ ಭಕ್ತ ಸಂಕುಲ ಸೇರಿತ್ತು. ತರಳು ಬಾಳು ಹುಣ್ಣಿಮೆ ಅಂಗವಾಗಿ ಸೇರಿದ ಭಕ್ತರ ಸಂಖ್ಯೆಗೆ ಮಿತಿಯೇ ಇಲ್ಲದಾಗಿತ್ತು. ಭಕ್ತರಿಂದ ದೇವಸ್ಥಾನದ ಆವರಣವೆಲ್ಲಾ ಭಂಡಾರಮಯವಾಗಿ ಎಲ್ಲೆಡೆ ಹಳದಿವರ್ಣದಿಂದ ಎದ್ದು ಕಾಣುತ್ತಿತ್ತು.

ಭಾರತ ಹುಣ್ಣಿಮೆ: ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ ಭಕ್ತ ಸಮೂಹ

ಭಕ್ತರು ಕುಂಕುಮ, ಭಂಡಾರವನ್ನು ದೇವಿಗೆ ಸಮರ್ಪಿಸುತ್ತ ಒಬ್ಬರಿಗೊಬ್ಬರು ಭಂಡಾರವನ್ನು ಎರಚಿ ದೇವಿಯ ದರ್ಶನ ಭಾಗ್ಯ ಪಡೆದರು. ದೇವಿಗೆ ಕಾಯಿ ಒಡೆಸಿ, ಕರ್ಪೂರ ಹಚ್ಚಿ ದೇವಿಯ ದರ್ಶನದಿಂದ ಕೃತಾರ್ಥರಾದರು.

ಎಣ್ಣೆ ಹೊಂಡದಲ್ಲಿ ಜನಜಂಗುಳಿ:

ಪವಿತ್ರ ಹಾಗೂ ಪರಿಶುದ್ಧವಾದ ಎಣ್ಣೆ ಹೊಂಡದ ನೀರಿನಲ್ಲಿ ಸ್ನಾನ ಮಾಡಿ ಪವಿತ್ರವಾಗಲು ಭಕ್ತರು ಹಾತೊರೆಯುತ್ತಿದ್ದರು. ಭಕ್ತರು ಎಣ್ಣೆ ಹೊಂಡದ ಪವಿತ್ರ ನೀರಿನಿಂದ ಸ್ನಾನ ಮಾಡಿ ಶ್ರೀದೇವಿಯ ದರ್ಶನದ ಕಡೆಗೆ ನಡೆಯುತ್ತಿದ್ದರು.

ಪಡ್ಡಲಗಿ ಸಮರ್ಪಣೆ:

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸಿದ ಭಕ್ತರು ದೇವಸ್ಥಾನದ ಆವರಣದಲ್ಲಿ ಬಿಡಾರ ಹೂಡಿದ್ದಾರೆ. ತಾವು ಊರಿಂದ ತಂದಂತ ಪದಾರ್ಥಗಳಿಂದ ಅಡುಗೆ ಮಾಡಿ ಶ್ರೀದೇವಿಗೆ ನೈವೇದ್ಯ ಅರ್ಪಿಸಿದರು. ದೇವಸ್ಥಾನದ ಗುಡ್ಡದ ವಿಶಾಲ ಪ್ರದೇಶದಲ್ಲಿ ಒಲೆ ಹೂಡಿ ಕಡಬು, ಹೋಳಿಗೆ, ಕಿಚಡಿ, ಅನ್ನ ಮಾಡಿ ಪಡ್ಡಲಗಿಯನ್ನು ತುಂಬಿ ದೇವಿಯ ಕೃಪೆಗೆ ಪಾತ್ರರಾದರು.

ಭಕ್ತರಲ್ಲಿ ಉಧೋ.. ಉದೋ.. ಯಲ್ಲಮ್ಮ ನಿನ್ನಾಲ್ಕ ಉಧೋ..! ಉಧೋ..!, ಪರುಶರಾಮ ನಿನ್ನಾಲ್ಕ ಉಧೋ..! ಉಧೋ..! , ಜಮದಗ್ನಿ ನಿನ್ನಾಲ್ಕ ಉಧೋ..! ಉಧೋ..! ಎಂಬ ಭಕ್ತರ ಕೂಗೂ ಶ್ರೀ ಕ್ಷೇತ್ರ ಪಾವಳಿಯಲ್ಲಿ ಗುಣಗುಟ್ಟುತ್ತಿತ್ತು.

ಭರ್ಜರಿ ವ್ಯಾಪಾರ:

ಶ್ರೀಕ್ಷೇತ್ರದ ಪ್ರಮುಖ ಆಕರ್ಷಣೆ ಹಾಗೂ ಪ್ರಸಾದ ಕುಂಕುಮ ಬಂಡಾರವಾಗಿದ್ದು, ಕುಂಕುಮ, ಬಂಡಾರದ ಜೊತೆಗೆ ಬಳೆಗಳ ವ್ಯಾಪಾರ ಬಲು ಜೋರಾಗಿತ್ತು. ಬಾಳೆ ಹಣ್ಣು, ಕಾಯಿ, ಕರ್ಪೂರ ಹಾಗೂ ಬೆಂಡು ಬೆತ್ತಾಸು ಮತ್ತು ಮಿಠಾಯಿಗಳ ಭರ್ಜರಿ ವ್ಯಾಪಾರದೊಂದಿಗೆ ಜಾತ್ರೆಯಲ್ಲಿನ ಆಟಿಗೆ ಸಾಮಾನುಗಳ ಬೇಡಿಕೆಗಳು ಹೆಚ್ಚಿದ್ದವು.

click me!