
ಬಳ್ಳಾರಿ (ಜ.29): ಬಳ್ಳಾರಿ ಬ್ಯಾನರ್ ಗಲಾಟೆ ಹಿನ್ನೆಲೆಯಲ್ಲಿ ವರ್ಗಾವಣೆಯಾಗಿದ್ದ ಡಿವೈಎಸ್ಪಿ ನಂದಾರೆಡ್ಡಿ ರಾಜಕೀಯ ಪ್ರಭಾವ ಬಳಸಿ ಮತ್ತೆ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಅಧಿಕಾರ ಸ್ವೀಕರಿಸಲು ಬಂದಿದ್ದ ಐಪಿಎಸ್ ಅಧಿಕಾರಿ ರಾಜ್ಯ ಸರ್ಕಾರದ ಮೌಖಿಕ ಆದೇಶದ ಬೆನ್ನಲ್ಲಿಯೇ ಬರಿಗೈಲಿ ವಾಪಸ್ ಆಗಿದ್ದಾರೆ ಎಂಬುದು ಕಂಡುಬರುತ್ತಿದೆ.
ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ' ಎನ್ನುವ ಗಾದೆ ಮಾತು ಬಳ್ಳಾರಿಯ ಪೊಲೀಸ್ ಇಲಾಖೆಯಲ್ಲಿನ ಪ್ರಸ್ತುತ ವಿದ್ಯಮಾನಗಳಿಗೆ ಅಕ್ಷರಶಃ ಕನ್ನಡಿ ಹಿಡಿದಂತಿದೆ. ಬಳ್ಳಾರಿ ನಗರದಲ್ಲಿ ನಡೆದಿದ್ದ ಬ್ಯಾನರ್ ಗಲಾಟೆ ಪ್ರಕರಣದ ಬಿಸಿ ಇನ್ನೂ ಆರದಂತಿದ್ದು, ಅದರ ಹಿನ್ನೆಲೆಯಲ್ಲಿ ನಡೆದ ಡಿವೈಎಸ್ಪಿ ವರ್ಗಾವಣೆ ಪ್ರಕ್ರಿಯೆ ಇದೀಗ ಭಾರೀ ಹೈಡ್ರಾಮಾಕ್ಕೆ ಕಾರಣವಾಗಿದೆ.
ಸುಮಾರು 25 ದಿನಗಳ ಹಿಂದೆ ಬಳ್ಳಾರಿ ನಗರದಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ದೊಡ್ಡ ಮಟ್ಟದ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪದ ಮೇಲೆ ಅಂದಿನ ಡಿವೈಎಸ್ಪಿ ನಂದಾರೆಡ್ಡಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಆಯಕಟ್ಟಿನ ಈ ಜಾಗಕ್ಕೆ ತಿಪಟೂರು ಉಪವಿಭಾಗದಲ್ಲಿ ಪ್ರೋಬೇಷನರಿ ಡಿವೈಎಸ್ಪಿ ಆಗಿದ್ದ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿತ್ತು.
ಸರ್ಕಾರದ ಆದೇಶದಂತೆ ನೂತನ ಡಿವೈಎಸ್ಪಿಯಾಗಿ ಅಧಿಕಾರ ವಹಿಸಿಕೊಳ್ಳಲು ಯಶ್ ಕುಮಾರ್ ಶರ್ಮಾ ಅವರು ಬಳ್ಳಾರಿಗೆ ಆಗಮಿಸಿದ್ದರು. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಲಲಿತವಾಗಿ ನಡೆಯಬೇಕಿದ್ದ ಜಾಗದಲ್ಲಿ ತೆರೆಮರೆಯ ರಾಜಕೀಯ ಕಸರತ್ತು ಜೋರಾಗಿತ್ತು. ಇಡೀ ದಿನ ಯಶ್ ಕುಮಾರ್ ಶರ್ಮಾ ಅವರು ಕಚೇರಿಯಲ್ಲಿ ಕಾದು ಕುಳಿತರೂ, ಅಧಿಕಾರ ಹಸ್ತಾಂತರ ಮಾಡಲು ಹಳೆಯ ಅಧಿಕಾರಿ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಅಚ್ಚರಿಯ ಸಂಗತಿಯೆಂದರೆ, ಸ್ವತಃ ಐಪಿಎಸ್ ಅಧಿಕಾರಿಯೊಬ್ಬರು ನೇಮಕಗೊಂಡು ಬಂದಿದ್ದರೂ, ಅವರಿಗೆ ಅಧಿಕಾರ ನೀಡದಷ್ಟು 'ಪ್ರಭಾವ' ಕೆಲಸ ಮಾಡಿದೆ ಎಂಬ ಮಾತುಗಳು ಪೊಲೀಸ್ ವಲಯದಲ್ಲಿ ಕೇಳಿಬರುತ್ತಿವೆ. ಬಲ್ಲ ಮೂಲಗಳ ಪ್ರಕಾರ, ಹಳೆಯ ಡಿವೈಎಸ್ಪಿ ನಂದಾರೆಡ್ಡಿ ಅವರೇ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಯಶ್ ಕುಮಾರ್ ಅವರಿಗೆ ಅಧಿಕಾರ ಸ್ವೀಕರಿಸದಂತೆ ಸರ್ಕಾರದ ಮಟ್ಟದಿಂದಲೇ ಮೌಖಿಕ ಆದೇಶ ಬಂದ ಹಿನ್ನೆಲೆಯಲ್ಲಿ, ಅವರು ಅಧಿಕಾರ ಸ್ವೀಕರಿಸದೇ ವಾಪಸ್ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ಯಾನರ್ ಗಲಾಟೆ ನಿಯಂತ್ರಿಸಲು ವಿಫಲರಾದ ಅಧಿಕಾರಿ, ಈಗ ರಾಜಕೀಯ ನಾಯಕರ ಕೃಪಾಕಟಾಕ್ಷದಿಂದ ವರ್ಗಾವಣೆಯಾದ ಜಾಗದಲ್ಲೇ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಚರ್ಚೆ ಬಳ್ಳಾರಿಯಾದ್ಯಂತ ಜೋರಾಗಿದೆ. ಐಪಿಎಸ್ ಅಧಿಕಾರಿಯೊಬ್ಬರು ಅಧಿಕಾರ ಸ್ವೀಕರಿಸಲಾಗದೆ ವಾಪಸ್ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು, ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ. 'ವರ್ಗಾವಣೆ ಆದೇಶ ಕೇವಲ ಕಾಗದದ ಮೇಲಷ್ಟೇ, ಉಳಿದಿದ್ದೆಲ್ಲವೂ ರಾಜಕೀಯ ಪವರ್ ಪ್ಲೇ' ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ. ಒಟ್ಟಿನಲ್ಲಿ, ಬಳ್ಳಾರಿ ಪೊಲೀಸ್ ಇಲಾಖೆಯಲ್ಲಿನ ಈ ಬೆಳವಣಿಗೆ ಆಡಳಿತ ವ್ಯವಸ್ಥೆಯ ಇತಿಮಿತಿಗಳನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ.