
ಚಿಕ್ಕಮಗಳೂರು (ನ.07) ಪ್ರಸಿದ್ಧ ದೇವಿರಮ್ಮ ಜಾತ್ರೆ ಆರಂಭಗೊಂಡಿದೆ. ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ನೀಡುವ ಚಿಕ್ಕಮಗಳೂರಿನ ದೇವಿರಮ್ಮ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಿದ್ದಾರೆ. ಕಡಿದಾದ ಬೆಟ್ಟ ಹತ್ತಿ ದೇವಿರಮ್ಮ ದರ್ಶನ ಮಾಡಲು ಸ್ಥಳೀಯ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿದೆ. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಜೆ 4 ಗಂಟೆವರೆಗೆ ಮಾತ್ರ ದೇವಿರಮ್ಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ (ನ.08) ದೇವಿರಮ್ಮ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ.
ದೀಪಾವಳಿ ಹಬ್ಬದ ಸಂಭ್ರಮ ಒಂದೆಡೆಯಾದರೆ ನಾಳೆ ಭಾನುವಾರ. ಹೀಗಾಗಿ ದೇವಿರಮ್ಮ ದರ್ಶನ ಪಡೆಯಲು ನಾಳೆ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನಾಳೆ ಬೆಳಗ್ಗೆ 7 ಗಂಟೆಯಿಂದ 3 ಗಂಟೆಯವರೆಗೆ ಬೆಟ್ಟ ಹತ್ತಲು ಅವಕಾಶ ನೀಡಲಾಗಿದೆ. ದೇವಿರಮ್ಮ ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಮಲ್ಲೇನಹಳ್ಳಿ ,ಮಾಣಿಕ್ಯಾಧಾರ, ಅರಿಶಿಣಗುಪ್ಪೆ ಮಾರ್ಗವಾಗಿ ಭಕ್ತರು ದೇವಿರಮ್ಮ ದರ್ಶನಕ್ಕೆ ಬೆಟ್ಟ ಹತ್ತುತ್ತಿದ್ದಾರೆ. ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ಭಕ್ತರಿನಿಂದ ಬೆಟ್ಟದ ತಾಯಿ ದರ್ಶನ ಮಾಡಿದ್ದಾರೆ. ನಾಳೆ ಭಕ್ತರ ಸಂಖ್ಯೆ ಏರಿಕೆಯಾಗಲಿದೆ. ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಬಿಂಡಿಗ ದೇವಿರಮ್ಮ ದೇವಾಲಯ ಅತ್ಯಂತ ಪುರಾಣ ಪ್ರಸಿದ್ಧ ದೇವಸ್ಥಾನವಾಗಿದೆ. ಬಿಂಡಿಗ ದೇವಿರಮ್ಮ ದೇವಸ್ಥಾನದ ಬಾಗಿಲು ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ.
ಕಡಿದಾದ ಬೆಟ್ಟ ಹತ್ತಿ ದೇವಿರಮ್ಮ ದರ್ಶನ ಪಡೆಯಬೇಕಿರುವ ಕಾರಣ ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ. 15 ವರ್ಷಕ್ಕಿಂತ ಕೆಳಗಿನವರಿಗೆ ಬೆಟ್ಟ ಹತ್ತಲು ಅವಕಾಶವಿಲ್ಲ. 15 ವರ್ಷಕ್ಕಿಂತ ಮೇಲ್ಪಟ್ಟು ಹಾಗೂ 60 ವರ್ಷಕ್ಕಿಂತ ಒಳಗಿನವರಿಗೆ ಮಾತ್ರ ಬೆಟ್ಟ ಹತ್ತಲು ಅವಕಾಶ ನೀಡಲಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3800 ಅಡಿ ಎತ್ತರದಲ್ಲಿರುವ ಈ ಬೆಟ್ಟ ಕಾಲುದಾರಿಯಲ್ಲಿ ಹತ್ತಬೇಕು. ಕಡಿದಾದ ದಾರಿಯಲ್ಲಿ ಅಪಾಯದ ಸಾಧ್ಯತೆಗಳು ಹೆಚ್ಚು. ಜೊತೆಗೆ ಆರೋಗ್ಯದ ದೃಷ್ಟಿಯಿಂದ ಈ ನಿಯಮ ರೂಪಿಸಲಾಗಿದೆ.
ಭಕ್ತರ ಸುರಕ್ಷತೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಪೊಲೀಸ್ ಸೇರಿದಂತೆ ಭದ್ರತಾ ಪಡೆಗಳು ಸ್ಥಳದಲ್ಲಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಬೆಟ್ಟ ಹತ್ತಿ ದೇವಿರಮ್ಮ ದರ್ಶನ ಪಡೆಯುತ್ತಾರೆ.