ತುಮಕೂರು ಜಿಲ್ಲೆಯ ಅಭಿವೃದ್ಧಿಯೇ ನನ್ನ ಧ್ಯೇಯ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
ತುಮಕೂರು : ತುಮಕೂರು ಜಿಲ್ಲೆಯ ಅಭಿವೃದ್ಧಿಯೇ ನನ್ನ ಧ್ಯೇಯ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
ಅವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಎಂ.ಜಿ.ರಸ್ತೆಯಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಬಾಳನಕಟ್ಟೆಯ ಹತ್ತಿರವಿರುವ ಬಾಬು ಜಗಜೀವನರಾಮ್ ಕಟ್ಟಡ ನಿವೇಶನಕ್ಕೆ ಸಂಬಂಧಿಸಿದಂತೆ ಸ್ಥಳ ಪರಿವೀಕ್ಷಣೆಗಾಗಿ ಖುದ್ದು ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ತಿಳಿದುಕೊಂಡರು.
undefined
ಡಾ. ಬಾಬು ಜಗಜೀವನ್ರಾಮ್ ಕಟ್ಟಡ ನಿವೇಶನಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.
ಕಳೆದ ಹತ್ತಾರು ವರ್ಷಗಳಿಂದ ಇಲ್ಲಿ ಕಸ ಹಾಕುತ್ತಾ ಬಂದಿದ್ದು, ಇದೊಂದು ಡಂಪಿಂಗ್ ಯಾರ್ಡ್ ರೀತಿ ಮಾರ್ಪಾಡಾಗಿದೆ. ಇದು ಸ್ಮಾರ್ಚ್ಸಿಟಿಯೋ, ಗಬ್ಬು ಸಿಟಿಯೋ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು. ಅಲ್ಲದೇ ಇನ್ನು ಮುಂದೆ ಇಲ್ಲಿಯಾರೂ ಸಹ ಕಸವನ್ನು ಸುರಿಯಬಾರದು ಕಸ ಸುರಿಯುವವರಿಗೆ ದಂಡವಿಧಿಸುವುದಲ್ಲದೇ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಲಹೆ ನೀಡಿದರು.
ತಮಗೆ ಇಲ್ಲಿನ ಕಸ ವಿಲೇವಾರಿ ಮಾಡಲು ಅನುದಾನ ಬೇಕಿದ್ದಲ್ಲಿ ಅದಕ್ಕೆ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದರು. ಇನ್ನು, ಅಂಬೇಡ್ಕರ್ ಭವನ ಕಟ್ಟಡಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಿರುವ ಈ ಕಟ್ಟಡಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳು ಇಲ್ಲದಿರುವ ಕಾರಣ ಮತ್ತು ಕೆಲವೊಂದು ತುರ್ತು ದುರಸ್ತಿ ಕಾಮಗಾರಿಗಳು ಕೈಗೊಳ್ಳುವ ಸಂಬಂಧವು ಸಹ ತುಮಕೂರು ಮಹಾನಗರ ಪಾಲಿಕೆ ಹಾಗೂ ಇನ್ನಿತರ ಇಲಾಖೆಗಳಲ್ಲಿ ಅಗತ್ಯವಿರುವ ಅನುದಾನವನ್ನು ಕ್ರೂಢೀಕರಿಸಿ ಕ್ರಿಯಾಯೋಜನೆ ತಯಾರಿಸಿ ಕೂಡಲೇ ಡಾ.ಬಿ.ಆರ್.ಅಂಬೇಡ್ಕರ್ ಭವನದ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಮಾಡಿಕೊಡಲು ಶೀಘ್ರ ಕ್ರಮಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಮುಂದುವರೆದು ಸುಮಾರು 10-12 ವರ್ಷಗಳಿಂದ ನನೆಗುದ್ದಿಗೆ ಬಿದ್ದಿರುವ ಡಾ.ಬಾಬು ಜಗಜೀವನರಾಮ್ ಭವನಕ್ಕೆ ಮೀಸಲು ಜಾಗದ ತಕರಾರು ಇರುವುದರಿಂದ ಸದರಿ ಕಟ್ಟಡದ ಕಾಮಗಾರಿಗಳನ್ನು ಪ್ರಾರಂಭಿಸಲು ಸಾಧ್ಯವಾಗದೇ ನನೆಗುದಿಗೆ ಬಿದ್ದಿರುತ್ತದೆ. ಅದನ್ನೂ ಸಹ ಆದಷ್ಟುಶೀಘ್ರವಾಗಿ ಕ್ರಮವಹಿಸಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಬೇಕೆಂದು ತಿಳಿಸಿದರು.
ಇನ್ನು, ಈ ಎರಡೂ ವಿಷಯ ಮತ್ತು ಕಾಮಗಾರಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುವುದಲ್ಲದೇ ರಜೆ ದಿನಗಳಲ್ಲಿಯೂ ಸಹ ಅಧಿಕಾರಿಗಳನ್ನು ಕರೆಸಿ, ಸ್ಥಳಕ್ಕೆ ಭೇಟಿ ನೀಡಿ ಅಲಿನ ಸಮಸ್ಯೆ ಆಲಿಸಿ ಪರಿಹರಿಸುವ ಮತ್ತು ಶೀಘ್ರದಲ್ಲಿ ಎರಡು ಕಾಮಗಾರಿಗಳಿಗೆ ಇರುವ ಅಡೆತಡೆಗಳನ್ನು ಪರಿಹರಿಸಿ ಎಲ್ಲಾ ವರ್ಗದ ಜನರು ಮತ್ತುದಲಿತ ಜನಾಂಗದವರ ಅನುಕೂಲಕ್ಕಾಗಿ ಈ ಕಾಮಗಾರಿಗಳ ಕುರಿತು ಕೊಂಚ ಜಾಗೃತಿ ವಹಿಸಿ ಕೆಲಸ ಮಾಡ ಬೇಕಾಗಿದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳ ವೀಕ್ಷಣೆ ಸಂದರ್ಭದಲ್ಲಿ ನೆರೆದಿದ್ದ ಹಲವಾರು ಸಾರ್ವಜನಿಕರು ಮತ್ತು ಕೆಲ ದಲಿತ ಮುಖಂಡರು ಹರ್ಷ ವ್ಯಕ್ತಪಡಿಸಿದರಲ್ಲದೇ ಜಿಲ್ಲಾಧಿಕಾರಿಗಳ ಈ ನಡೆಗೆ ಮೆಚ್ಚುಗೆಯನ್ನು ತೋರಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಧಾ ಕೃಷ್ಣಪ್ಪರವರು ಸಹ ಈ ಎರಡೂ ಸ್ಥಳಗಳ ಪರಿವೀಕ್ಷಣೆ ಸಮಯದಲ್ಲಿ ಹಾಜರಿದ್ದು, ಇಂತಹ ಜಿಲ್ಲಾಧಿಕಾರಿಗಳು ನಮಗೆ ಸಿಕ್ಕಿರುವುದು ಸುದೈವವೇ ಸರಿ, ನಮ್ಮಗಳಿಗೆ ಕೆಲಸ ಮಾಡಲು ಮತ್ತಷ್ಟುಹುಮ್ಮಸ್ಸು ತಂದಿದ್ದು, ಈ ಕಾಮಗಾರಿಗಳಲ್ಲದೇ ಜನರ ಒಳಿತಾಗಿ ಜನಪರ ಕೆಲಸ ಕಾರ್ಯಗಳನ್ನು ಮಾಡಲು ನಮಗೆ ಸಹಕಾರಿಯಾಗಿದ್ದಾರೆಂದರು.