ಜೆಡಿಎಸ್‌ನಿಂದ ಅಲ್ಪಸಂಖ್ಯಾತರ ಅಭಿವೃದ್ಧಿ: ರಾಜಾಧ್ಯಕ್ಷ

By Kannadaprabha News  |  First Published Mar 20, 2023, 5:29 AM IST

ತಾಲೂಕಿನಲ್ಲಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅಭಿವೃದ್ಧಿ ಮಾಡಿದ್ದರೆ ಕುಕ್ಕರ್‌ ಹಂಚುವ ಪ್ರಮಯವೇ ಬರುತ್ತಿರಲಿಲ್ಲ. ಜೆಡಿಎಸ್‌ನಲ್ಲಿ ಎಲ್ಲವನ್ನು ಅನುಭವಿಸಿ ಈಗ ಕಾಂಗ್ರೆಸ್ಸಿಗೆ ಜಿಗಿದಿರುವುದು ವಿಪರ್ಯಾಸ. ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದರು.


ಗುಬ್ಬಿ: ತಾಲೂಕಿನಲ್ಲಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅಭಿವೃದ್ಧಿ ಮಾಡಿದ್ದರೆ ಕುಕ್ಕರ್‌ ಹಂಚುವ ಪ್ರಮಯವೇ ಬರುತ್ತಿರಲಿಲ್ಲ. ಜೆಡಿಎಸ್‌ನಲ್ಲಿ ಎಲ್ಲವನ್ನು ಅನುಭವಿಸಿ ಈಗ ಕಾಂಗ್ರೆಸ್ಸಿಗೆ ಜಿಗಿದಿರುವುದು ವಿಪರ್ಯಾಸ. ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದರು.

ಭಾನುವಾರ ತಾಲೂಕಿನ ಕುನ್ನಾಲದಲ್ಲಿ ಏರ್ಪಡಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು ಪಕ್ಷದಿಂದ ಮಾತ್ರ ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧ್ಯವಾಗುವುದು. ಮುಸ್ಲಿಮರ ಆಹಾರ ಪದ್ಧತಿಯ ಮೇಲೆ ನಿಯಂತ್ರಣ ತರುವ ಉದ್ದೇಶದಿಂದಲೇ ಬಿಜೆಪಿ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಹಾಲುಕೊಡದ, ಉಳುಮೆಗೆ ಬಾರದ ರಾಸುಗಳನ್ನು ಸಾಕುವುದು ರೈತರಿಗೆ ಹೊರೆಯಾಗಲಿದ್ದು ಸರ್ಕಾರವೇ ಅದನ್ನು ಕೊಂಡುಕೊಳ್ಳುವ ರೀತಿ ಕಾನೂನನ್ನು ಏಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದರು.

Tap to resize

Latest Videos

ಜೆಡಿಎಸ್‌ ಮುಖಂಡ ಬಿ.ಎಸ್‌.ನಾಗರಾಜು ಮಾತನಾಡಿ, ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಜೆಡಿಎಸ್‌ ಪಕ್ಷವು ಆಸಕ್ತಿ ವಹಿಸಿದ್ದು, ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ ಸರ್ಕಾರಿ ಶಾಲೆಗಳನ್ನು ಪರಿವರ್ತಿಸಿ ರಾಜ್ಯದ ಎಲ್ಲಾ ಬಡವರಿಗೂ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಲಾಗುವುದು. ತಾಲೂಕಿನಲ್ಲಿ ಒಂದು ಅವಕಾಶ ನೀಡಿದರೆ ಅಪೂರ್ಣಗೊಂಡಿರುವ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿ ತಾಲೂಕಿನ ಜನರ ಋುಣ ತೀರಿಸುವೆ ಎಂದು ತಿಳಿಸಿದರು.

ಮಹಿಳಾ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್‌ ಮಾತನಾಡಿ, ಮುಸ್ಲಿಮರ ಸಂಪ್ರದಾಯ ಉಡುಗೆಯಾಗಿರುವ ಹಿಜಾಬ್‌ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನೇ ಬೆಂಬಲಿಸಿದೆ. ಆದರೆ ಜೆಡಿಎಸ್‌ ಮುಸ್ಲಿಮರ ಪರವಾಗಿ ನಿಂತಿದ್ದು ಹೋರಾಟ ನಡೆಸುತ್ತಿದೆ. ಕುಕ್ಕರ್‌ ಹಾಗೂ ಸೀರೆಗಾಗಿ ಮತ ಚಲಾಯಿಸಬೇಡಿ. ಅಭಿವೃದ್ಧಿಯ ದೃಷ್ಟಿಯಿಂದ ಜೆಡಿಎಸ್‌ ಪಕ್ಷಕ್ಕೆ ಮತ ನೀಡುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಚಿಕ್ಕವೀರಯ್ಯ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಸಿದ್ದಗಂಗಮ್ಮ, ಮಾಜಿ ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್‌, ಮುಖಂಡರಾದ ಅಲಿಂಸಾಬ್‌, ಸಲೀಂ ಪಾಷಾ, ಇಲಾಯತ್‌ ಹುಸೇನ್‌, ಅಕ್ರಮ್‌, ಬೆಹಜಾನ್‌, ಸುರೇಶ್‌ ಗೌಡ, ಶಿವಲಿಂಗೇಗೌಡ, ವಿಜಯ್‌ಕುಮಾರ್‌, ತೊಪಿಕ್‌ ಅಹಮದ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.

ಐದು ವರ್ಷ ಅಧಿಕಾರ ನೀಡಿ: ನಾಗರಾಜು

ನನಗೆ 20 ವರ್ಷ ಆಡಳಿತ ನೀಡಬೇಡಿ, ಕೇವಲ ಐದು ವರ್ಷ ಆಡಳಿತ ನೀಡಿ. ನಾನು ಕುಕ್ಕರ್‌, ಮಿಕ್ಸಿ ಹಿಡಿದುಕೊಂಡು ನಿಮ್ಮ ಮನೆ ಬಾಗಿಲಿಗೆ ಬರುವುದಿಲ್ಲ. ನಿಮ್ಮ ಗ್ರಾಮದ ನಿಮ್ಮ ಬದುಕಿನ ಅಭಿವೃದ್ಧಿ ಯೋಜನೆಗಳನ್ನು ಹಿಡಿದುಕೊಂಡು ನಿಮ್ಮ ಮನೆ ಬಾಗಿಲಿಗೆ ಬರುತ್ತೇನೆ. ತಾವೆಲ್ಲ ಮುಸ್ಲಿಂ ಸಮುದಾಯದವರು ಕಷ್ಟಬಿದ್ದು ತಮ್ಮ ವೃತ್ತಿ ಬದುಕನ್ನು ಮಾಡುತ್ತಿರುವಂತಹ ಜನತೆ. ನಿಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಉದ್ಯೋಗ ಪಡೆಯಬೇಕು ಮತ್ತು ಸಮಾಜದಲ್ಲಿ ನೀವೆಲ್ಲ ಉನ್ನತ ಮಟ್ಟಕ್ಕೆ ಸಾಗಬೇಕು ಅಂದರೆ ಜೆಡಿಎಸ್‌ ಪಕ್ಷದಿಂದ ಮಾತ್ರ ಸಾಧ್ಯ ಎಂಬುದನ್ನು ತಾವು ಅರಿಯಬೇಕಾಗಿದೆ ಎಂದು ಬಿ.ಎಸ್‌.ನಾಗರಾಜು ತಿಳಿಸಿದರು.

click me!