ಸಮುದಾಯಗಳಲ್ಲಿ ಒಗ್ಗಟ್ಟಿದ್ದರೆ ಅಭಿವೃದ್ಧಿ ಸಾಧ್ಯ : ನಿರ್ಮಲಾನಂದನಾಥ ಸ್ವಾಮೀಜಿ

By Kannadaprabha News  |  First Published Mar 10, 2023, 4:39 AM IST

  ಯಾವುದೇ ಸಮುದಾಯಗಳು ಒಗ್ಗಟ್ಟು ಮತ್ತು ಸಂಘಟನೆಯಿಂದ ಕೂಡಿದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ತಿಳಿಸಿದರು.


  ತಿಪಟೂರು:  ಯಾವುದೇ ಸಮುದಾಯಗಳು ಒಗ್ಗಟ್ಟು ಮತ್ತು ಸಂಘಟನೆಯಿಂದ ಕೂಡಿದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿಗೆ ಮುಂದಾದವರ ವಿರುದ್ಧ ಸ್ವಾರ್ಥಕ್ಕೆ ಗಂಟುಬಿದ್ದ ಕೆಲವರು ಕಾಲು ಎಳೆಯುವುದು, ಕೇಡುಂಟು ಮಾಡುವುದನ್ನೇ ಕಸುಬಾಗಿಸಿಕೊಂಡಿದ್ದು, ಇವೆಲ್ಲ ಸರ್ವೇಸಾಮಾನ್ಯವಾಗಿದ್ದು ಇಂತಹ ಕ್ಷುಲ್ಲಕ ವಿಷಯಗಳಿಗೆ ಅಭಿವೃದ್ಧಿಗೆ ಕಂಕಣ ಕಟ್ಟಿಕೊಂಡು ಮುಂದಾಗಿರುವವರ ಪೈಕಿ ಯಾರೊಬ್ಬರೂ ತಲೆಕೆಡಿಸಿ ಕೊಳ್ಳದೆ ಸಮುದಾಯದ ಏಳ್ಗೆ, ಅಭಿವೃದ್ಧಿಗೆ ಮುಂದಾಗಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ತಿಳಿಸಿದರು.

ನಗರದ ಒಕ್ಕಲಿಗ ಸಮಾಜದ ಸಮುದಾಯ ಭವನದ ಆವರಣದಲ್ಲಿ ಗುರುವಾರ ನೂತನವಾಗಿ ಕಟ್ಟಿರುವ ಶ್ರೀ ಇಷ್ಟಾರ್ಥ ಸಮೃದ್ಧಿ ಗಣಪತಿ ದೇವಸ್ಥಾನ ಲೋಕಾರ್ಪಣೆ, ಕುವೆಂಪು ಭವನ ಉದ್ಘಾಟನೆ ಹಾಗೂ ನಗರದ ಹಾಸನ ರಸ್ತೆಯ ಪಕ್ಕದಲ್ಲಿ ಸಮಾಜದ ಜಾಗದಲ್ಲಿ ನೂತನವಾಗಿ ನಿರ್ಮಿಸಿರುವ ಬಿಜಿಎಸ್‌ ಕನ್ವೆನ್ಷನ್‌ ಹಾಲ್‌ ಉದ್ಘಾಟನಾ ಕಾರ್ಯಕ್ರಮಗಳು ಮುಗಿದ ನಂತರ ಹಮ್ಮಿಕೊಂಡಿದ್ದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

Latest Videos

undefined

ಸಮಾಜ, ಸಮುದಾಯಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಕೇವಲ ಪ್ರಶಂಸೆಗೆ ತಲೆದೂಗದೆ ನಿಂದನೆ, ಅಪವಾದಗಳನ್ನೂ ಸಹಿಸಿಕೊಂಡು ಕೆಲಸ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಆಧುನಿಕ ಜಗತ್ತಿನಲ್ಲಿ ಬದಲಾವಣೆ ಅನಿವಾರ್ಯವಾಗಿದ್ದರೂ ಇನ್ನೊಬ್ಬರಿಗೆ ನೋವುಂಟು ಮಾಡುವ, ಅಸಹ್ಯ ಮೂಡುವಂತಹ ಬದಲಾವಣೆ ಬೇಡ ಎಂದು ಆಶೀರ್ವಚನ ನೀಡಿದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಾತನಾಡಿ, ಸಮುದಾಯ ಒಗ್ಗಟ್ಟಾದರೆ ಏನು ಮಾಡಬಹುದು ಎಂದು ಇಲ್ಲಿನ ತಾಲೂಕು ಒಕ್ಕಲಿಗರ ಸಮಾಜ ತೋರಿಸಿಕೊಟ್ಟಿದೆ. ಆದಿಚುಂಚನಗಿರಿ ಶ್ರೀಮಠ ಹತ್ತಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದೆ. ಸದಾ ಸಮಾಜಮುಖಿ ಚಿಂತನೆ ಮಾಡುವ ನಿರ್ಮಲಾನಂದನಾಥ ಶ್ರೀಗಳು ಸಮಾಜಕ್ಕಾಗಿ ತಮ್ಮ ಸೇವೆಯನ್ನೇ ಮುಡಿಪಾಗಿಟ್ಟಿದ್ದಾರೆ. ಇಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆಗಾಗಿ ಯೋಜನೆ ಹಾಕಿಕೊಂಡಿದ್ದು ನನ್ನ ಕಡೆಯಿಂದ ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ತಿಳಿಸಿದರು.

ಒಕ್ಕಲಿಗರ ಸಂಘದ ತಾ.ಅಧ್ಯಕ್ಷ ಎನ್‌.ಚಿದಾನಂದ್‌ ಮಾತನಾಡಿ, ಚುಂಚನಗಿರಿ ಮಹಾಗುರುಗಳು, ಶಾಖಾಮಠದ ಎಲ್ಲ ಶ್ರೀಗಳವರ ಆಶೀರ್ವಾದ ಹಾಗೂ ಸಮಾಜದ ಪ್ರತಿಯೊಬ್ಬ ದಾನಿ ಮತ್ತು ಬಂಧುಗಳ ಸಹಕಾರ, ಪೋ›ತ್ಸಾಹದಿಂದ ತಾಲ್ಲೂಕು ಒಕ್ಕಲಿಗರ ಸಮಾಜ ಹಾಗೂ ಸಂಘದ ಅಭಿವೃದ್ದಿಯೆಡೆಗೆ ಸಾಗುತ್ತಿದೆ ಎಂದರು.

ಸಮಾರಂಭಕ್ಕೂ ಮುನ್ನಾ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿಯವರು ಕುವೆಂಪು ಭವನ ಹಾಗೂ ಶ್ರೀ ಇಷ್ಟಾರ್ಥ ಸಮೃದ್ಧಿ ಗಣಪತಿ ದೇವಸ್ಥಾನ ಲೋಕಾರ್ಪಣೆಗೊಳಿಸಿದರು. ಸಮಾರಂಭದಲ್ಲಿ ಆದಿಚುಂಚನಗಿರಿ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕಬ್ಬಳಿ ಶ್ರೀ ಶಿವಪುತ್ರ ನಾಥ ಸ್ವಾಮೀಜಿ, ಮಾಜಿ ಶಾಸಕರುಗಳಾದ ಬಿ.ನಂಜಾಮರಿ, ಕೆ. ಷಡಕ್ಷರಿ, ಒಕ್ಕಲಿಗರ ಸಮಾಜ ಹಿರಿಯ ಮುಖಂಡ ಜಿ.ಎಲ್‌. ಮುದ್ದನಗೌಡ, ಸ್ವಾಗತ ಸಮಿತಿ ಅದ್ಯಕ್ಷ ಡಾ. ಜಿ.ಬಿ.ವಿವೇಚನ್‌, ಜೆಡಿಎಸ್‌ ಮುಖಂಡ ಕೆ.ಟಿ. ಶಾಂತಕುಮಾರ್‌, ಪ್ರಧಾನ ಕಾರ್ಯದರ್ಶಿ ಬಸವರಾಜು, ನಗರಸಭೆ ಅಧ್ಯಕ್ಷ ರಾಮಮೋಹನ್‌, ಅರಸೀಕೆರೆ ಒಕ್ಕಲಿಗರ ಸಂಘದ ಅಧ್ಯಕ್ಷ ಅನಂತಕುಮಾರ್‌, ಬಾನಂದೂರು ಮರಿಸ್ವಾಮಯ್ಯ, ಬಿ.ಸಿ ತಿಮ್ಮಮ್ಮ ಕೀರ್ತಿಶೇಷ ರಂಗಯ್ಯ, ನಿವೃತ್ತ ಪ್ರಾಧ್ಯಾಪಕ ಜಿ.ಕೆ.ಬಸವರಾಜು, ಅಣತಿ ಶೇಖರ್‌, ಬಿ.ಕೆ.ನಾಗರಾಜು, ಶಂಕರಲಿಂಗೇಗೌಡ ಮತ್ತಿತರರಿದ್ದರು.

ಕೋಟ್‌:

ಹತ್ತಾರು ಸಮುದಾಯಗಳನ್ನು ಒಂದುಗೂಡಿಸಿಕೊಂಡು ಹೋಗುವ ಸಹನೆ, ತಾಳ್ಮೆ, ಸಹಿಸುವ ಗುಣವನ್ನು ಬೆಳೆಸಿಕೊಳ್ಳುವುದು ಉತ್ತಮ ನಾಯಕನ ಲಕ್ಷಣವಾಗಿದೆ. ಕೇವಲ ಮಠದ ಅಭಿವೃದ್ಧಿಗೋ ಅಥವಾ ಸಂಘದ ಅಭಿವೃದ್ಧಿಗೋ ಮುಂದಾಗದೆ ಎಲ್ಲಾ ಸಮುದಾಯಗಳ ಅಭ್ಯದಯ ಬಯಸಬೇಕು. ಸಮುದಾಯದ ಸೇವೆಯಿಂದ ಭೌತಿಕ, ಮಾನಸಿಕ ನೆಮ್ಮದಿ ಸಿಗಲಿದೆ .

- ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ

ಫೋಟೋ 9-ಟಿಪಿಟಿ2ರಲ್ಲಿ ಕಳುಹಿಸಲಾಗಿದೆ. ಶಿರ್ಷಿಕೆ : ತಿಪಟೂರಿನ ಹಾಸನ ರಸ್ತೆಯ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಬಿಜಿಎಸ್‌ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥಸ್ವಾಮೀಜಿ ಮತ್ತಿತರರು.

click me!