ನರೇಗಾ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ

By Kannadaprabha News  |  First Published Dec 24, 2022, 6:23 AM IST

ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಲ್ಲೊಂದಾದ ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆ ಎಂದು ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ ತಿಳಿಸಿದರು.


ಮೈಸೂರು (ಡಿ.24) :ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಲ್ಲೊಂದಾದ ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆ ಎಂದು ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ ತಿಳಿಸಿದರು.

ರಾಷ್ಟ್ರೀಯ ರೈತ ದಿವಸ್‌ ಆದ ಶುಕ್ರವಾರ ತಾಲೂಕಿನ ಬಿಳಿಕೆರೆ ಹೋಬಳಿಯ ಹುಸೇನಪುರ ಗ್ರಾಪಂ ವ್ಯಾಪ್ತಿಯ ತೆಂಕಲ ಕೊಪ್ಪಲು ಗುರುಮಠ ಕೆರೆ ಅಮೃತ ಸರೋವರದ ಅಂಗಳದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಲ ಸಂಜೀವಿನಿ-  (Farmers ) ಸಂವಾದ ನಮ್ಮ ನಡಿಗೆ ಅನ್ನದಾತರ ಕಡೆಗೆ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Latest Videos

undefined

ಮಹಾತ್ಮಗಾಂಧಿ ಯೋಜನೆಯಿಂದಾಗಿ ನಗರ (City)  ಪ್ರದೇಶಕ್ಕಿಂತ ಹೆಚ್ಚಿನದಾಗಿ ಗ್ರಾಮೀಣ ಪ್ರದೇಶವು ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕುತ್ತಿದೆ. ಒಂದು ವೇಳೆ ಈ ಯೋಜನೆ ಇಲ್ಲವಾಗಿದ್ದಲ್ಲಿ ಗ್ರಾಮಗಳ ಅಭಿವೃದ್ಧಿಗೆ ಅನುದಾನದ ಕೊರತೆ ಉಂಟಾಗುತ್ತಿತ್ತು ಎಂದರು.

ಹಾಗಾಗಿ ಈ ಯೋಜನೆಯಲ್ಲಿ ಗ್ರಾಮದ ಅಭಿವೃದ್ಧಿಗೆ ಅವಶ್ಯಕವಿರುವ ಕೆರೆ ಕಟ್ಟೆ, ಮುಜರಾಯಿ ಇಲಾಖೆಗೆ ಸೇರಲ್ಪಟ್ಟದೇವಸ್ಥಾನಗಳನ್ನು ಒಂದು ಬಾರಿ ಸ್ವಚ್ಛಗೊಳಿಸುವುದು, ಸಮಗ್ರ ಶಾಲಾ ಅಭಿವೃದ್ಧಿ ಕಲ್ಪನೆಯಲ್ಲಿ ಅಡುಗೆ ಕೋಣೆ, ಆಟದ ಮೈದಾನ, ಮಳೆ ನೀರು ಕೊಯ್ಲು, ಶೌಚಾಲಯ, ಕಾಂಪೌಂಡ್‌, ಪೌಷ್ಟಿಕ ಕೈ ತೋಟದಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದ್ದು, ಗ್ರಾಮೀಣ ಭಾಗದ ಜನರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲಗಳನ್ನು ಸಂರಕ್ಷಿಸುವ ಉದ್ದೇಶದಿಂದ ಜಲ ಸಂಜೀವಿನಿ ಯೋಜನೆ ಜಾರಿಯಾಗಿದ್ದು, ಗ್ರಾಮಗಳಲ್ಲಿ ಗೋಮಾಳ ಅಭಿವೃದ್ಧಿ, ವಿಪತ್ತು ನಿರ್ವಹಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಅನುಕೂಲವಾಗಲಿದೆ. ಅಲ್ಲದೇ ಕೆರೆಗಳಿಗೆ ಚರಂಡಿ ನೀರು ತಡೆ ಹಿಡಿಯುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ಬಚ್ಚಲುಗುಂಡಿಗಳ ನಿರ್ಮಾಣ ಹೆಚ್ಚಾಗಬೇಕು. ತೋಟಗಾರಿಕೆ ಬೆಳೆಗಳಲ್ಲಿ ಅದರಲ್ಲೂ ಭೌಗೋಳಿಕತೆ ಸೂಚಿಸುವ ಮೈಸೂರು ಮಲ್ಲಿಗೆ ಬೆಳೆ ಬೆಳೆಯಲು ರೈತರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಜಲ ಸಂಜೀವಿನಿ ಪ್ರಮುಖ ಅಂಶವಾದ ಜಿಐಎಸ್‌ ಆಧಾರಿತ ಕಾಮಗಾರಿ ಯೋಜನೆಯಡಿ ಕನಿಷ್ಠ ಶೇ. 65ರಷ್ಟುವೆಚ್ಚವನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಆಧಾರಿತ ಕಾಮಗಾರಿಯನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿ, ಕ್ರಿಯಾ ಯೋಜನೆ ತಯಾರಿಸಿ ಅನುಷ್ಟಾನಗೊಳಿಸುವಂತೆ ಸ್ಥಳದಲ್ಲಿದ್ದ ಪಿಡಿಒ ಹಾಗೂ ಎಂಜಿನಿಯರ್‌ಗೆ ಸೂಚಿಸಿದರು.

ಇದಕ್ಕೂ ಮುನ್ನ ಕೊಮ್ಮೇಗೌಡ ಕೊಪ್ಪಲು ಗ್ರಾಮದ ದೇವರಾಜೇಗೌಡ ಅವರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಮೃತ ಸರೋವರದಿಂದ ಗ್ರಾಮದಲ್ಲಿ ಅಭಿವೃದ್ಧಿಯಾಗಿರುವ ಕೆರೆಯಿಂದಾಗುತ್ತಿರುವ ಅನುಕೂಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಇತ್ತೀಚಿನ ಮಳೆಯಿಂದಾಗಿರುವ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.

ಜೊತೆಗೆ ಗ್ರಾಮದ ಸದಸ್ಯರಾದ ಅವಿನಾಶ್‌, ಕರಿನಾಯಕ, ನಿಂಗಮಣಿ ಸೇರಿದಂತೆ ಇನ್ನಿತರರು ಗ್ರಾಮದ ಅಭಿವೃದ್ಧಿಗೆ ಅವಶ್ಯಕವಿರುವ ಕುಡಿಯುವ ನೀರಿನ ಸೌಕರ್ಯ, ಚರಂಡಿ, ರಸ್ತೆ ಹಾಗೂ ಇನ್ನಿತರೆ ಸೌಲಭ್ಯದ ಬಗ್ಗೆ ಚರ್ಚಿಸಿದರು.

ಇದಕ್ಕೂ ಮುನ್ನ ತೋಟಗಾರಿಕೆ, ರೇಷ್ಮೆ, ಕೃಷಿ, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳು ಹಾಗೂ ಅದರಿಂದಾಗುವ ಆರ್ಥಿಕ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಸಾಂಕೇತಿಕವಾಗಿ ಪೌಷ್ಟಿಕ ಕೈ ತೋಟದಡಿ ತೆಂಗು, ಕರಿಬೇವು ಹಾಗೂ ಇತರೆ ಸಸಿಗಳನ್ನು ವಿತರಿಸಿದರು.

ಈ ವೇಳೆ ಉಪ ಕಾರ್ಯದರ್ಶಿ ಕೃಷ್ಣ ಎಂ.ರಾಜು, ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ. ಮನು, ನರೇಗಾ ಸಹಾಯಕ ನಿರ್ದೇಶಕ ಎಚ್‌.ಡಿ. ಲೋಕೇಶ್‌, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ, ರೇಷ್ಮೆ ಇಲಾಖೆ ಅಧಿಕಾರಿ ರಮೇಶ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್‌, ಸಾಮಾಜಿಕ ಅರಣ್ಯ ಇಲಾಖಾಧಿಕಾರಿ ರುದ್ರೇಶ್‌, ಹುಸೇನಪುರ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ನಾಗರಾಜು ಮೊದಲಾದವರು ಇದ್ದರು.

click me!