ಕೊರೋನಾ ಜಾಗೃತಿಗಾಗಿ ಲಾಕ್‌ಡೌನ್ ಆರಂಭವಾದ ದಿನದಿಂದಲೂ ಹನ್ನೊಂದು ತಿಂಗಳ ನನ್ನ ಪುಟ್ಟಮಗುವಿನೊಂದಿಗೆ ಸರಿಯಾಗಿ ಸಮಯ ಕಳೆದಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಹೋದಾಗ ಅಂಬೆಗಾಲಿಟ್ಟು ನಗುತ್ತಾ ನನ್ನ ಬಳಿ ಬರುವ ಅವನನ್ನು ಎತ್ತಿಕೊಂಡು ಮುದ್ದಾಡಿಸಲು ಸಾಧ್ಯವಾಗದ ಸಂದಿಗ್ಧ ಪರಿಸ್ಥಿತಿ ನನ್ನದು. ಈ ನಡುವೆ ಕರ್ತವ್ಯ ಮುಗಿಸಿ ಮನೆಗೆ ಹೋಗುವುದಕ್ಕೆ ನಿಜವಾಗಿಯೂ ಭಯ ಇದೆ ಎನ್ನುತ್ತಾರೆ ಕೊರೋನಾ ವಾರಿಯರ್ ಪಿಎಸ್‌ಐ ಹರೀಶ್ ಆರ್. ನಾಯ್ಕ್.
ಮಂಗಳೂರು(ಏ.15): ಕೊರೋನಾ ಜಾಗೃತಿಗಾಗಿ ಲಾಕ್‌ಡೌನ್ ಆರಂಭವಾದ ದಿನದಿಂದಲೂ ಹನ್ನೊಂದು ತಿಂಗಳ ನನ್ನ ಪುಟ್ಟಮಗುವಿನೊಂದಿಗೆ ಸರಿಯಾಗಿ ಸಮಯ ಕಳೆದಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಹೋದಾಗ ಅಂಬೆಗಾಲಿಟ್ಟು ನಗುತ್ತಾ ನನ್ನ ಬಳಿ ಬರುವ ಅವನನ್ನು ಎತ್ತಿಕೊಂಡು ಮುದ್ದಾಡಿಸಲು ಸಾಧ್ಯವಾಗದ ಸಂದಿಗ್ಧ ಪರಿಸ್ಥಿತಿ ನನ್ನದು. ಈ ನಡುವೆ ಕರ್ತವ್ಯ ಮುಗಿಸಿ ಮನೆಗೆ ಹೋಗುವುದಕ್ಕೆ ನಿಜವಾಗಿಯೂ ಭಯ ಇದೆ. ಹೀಗೆ ತಮ್ಮ ಕರ್ತವ್ಯದ ನಡುವೆ ಎದುರಾದ ಸವಾಲುಗಳನ್ನು ಕನ್ನಡಪ್ರಭದೊಂದಿಗೆ ಕುಂದಾಪುರ ನಗರ ಠಾಣಾ ಪಿಎಸ್‌ಐ ಹರೀಶ್ ಆರ್. ನಾಯ್ಕ್ ವಿವರಿಸಿದ್ದಾರೆ.
ಚೆಕ್‌ಪೋಸ್ಟ್, ವಾಹನ ತಪಾಸಣೆ, ವಲಸೆ ಕಾರ್ಮಿಕರ ಪುನರ್ವಸತಿ ಕೇಂದ್ರ, ಬಂದೋಬಸ್‌್ತ, ರಾತ್ರಿ ಪಾಳಿ ಅಂತೆಲ್ಲಾ ಸದಾ ಸೇವೆಯಲ್ಲಿ ತೊಡಗಿರುತ್ತಾರೆ ಪೊಲೀಸ್ ಅಧಿಕಾರಿಗಳು ಸಿಬ್ಬ ಂದಿಗಳು. ಕುಂದಾಪುರ ಪಿಎಸ್‌ಐ ಹರೀಶ್ ನಾಯ್‌್ಕ ಅವರಿಗೆ ಹನ್ನೊಂದು ತಿಂಗಳ ಪುಟ್ಟಮಗನಿದ್ದಾನೆ. ತಮ್ಮ ಪತ್ನಿ ಹಾಗೂ ತಾಯಿಯೊಂದಿಗೆ ಪೊಲೀಸ್ ಕ್ವಾಟ್ರರ್ಸ್‌ನಲ್ಲಿ ವಾಸಿಸುತ್ತಿರುವ ಅವರು ಕರ್ತವ್ಯ ಮುಗಿಸಿ ಮನೆಗೆ ಹೋಗಲು ಹೆದರುತ್ತಿದ್ದಾರೆ. ಕಳೆದ ಒಂದು ತಿಂಗಳಿಗೂ ಅಧಿಕ ಒಂದು ರಜೆಯನ್ನೂ ಹಾಕದೆ ದಿನವೆಲ್ಲಾ ಹೋಂ ಕ್ವಾರಂಟೈನ್, ಆಸ್ಪತ್ರೆ ಅಂತೆಲ್ಲಾ ಸುತ್ತಾಡುತ್ತಿದ್ದಾರೆ. ಇದರಿಂದಾಗಿ ತಮ್ಮ ಪುಟ್ಟಮಗನಿಂದ ಅಂತರ ಕಾಯ್ದುಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
10 ತಿಂಗಳ ಕೊರೋನಾ ಸೋಂಕಿತ ಮಗು ರಕ್ಷಿಸಿದ ವಾರಿಯರ್ಸ್ ಹೇಳಿದ್ದಿಷ್ಟು..!
ಮಗು ಚಿಕ್ಕದಾಗಿರುವುದರಿಂದ ಸೋಂಕು ತಗಲುವ ಭೀತಿ ಇದೆ. ಮನೆಯ ಹೊಸ್ತಿಲು ದಾಟುತ್ತಿದ್ದಂತೆ ಅಂಬೆಗಾಲಿಟ್ಟು ನಗುಮೊಗದಿಂದ ಬರುವ ಮಗುವನ್ನು ಪತ್ನಿ ಎತ್ತಿಕೊಂಡು ರೂಮ್ ಪ್ರವೇಶಿಸಿದ ಬಳಿಕ ಮಗನ ಕಣ್ತಪ್ಪಿಸಿ ಸಮವಸ್ತ್ರ ಕಳಚಿ, ಸ್ಯಾನಿಟೈಸರ್‌ನಿಂದ ಕೈತೊಳೆದು ಸ್ನಾನ ಮಾಡಿ ಶುಚಿಯಾಗುತ್ತೇನೆ. ಕೆಲವು ತುರ್ತು ಸಂದರ್ಭಗಳಲ್ಲಿ ತಡರಾತ್ರಿ ಕರ್ತವ್ಯಕ್ಕೆ ಹೋಗಿ ಬಂದ ಬಳಿಕವೂ ಸೋಂಕು ತಗಲುವ ಭೀತಿಯಿಂದ ಹೊರ ಸೋಫಾದ ಮೇಲೆಯೇ ಇಡೀ ರಾತ್ರಿ ಮಲಗುತ್ತೇನೆ ಎನ್ನುತ್ತಾರೆ ಪಿಎಸ್‌ಐ ಹರೀಶ್.
ಹಗಲು-ರಾತ್ರಿ ಕರ್ತವ್ಯ
ವಿವಿಧ ರಾಜ್ಯ, ಜಿಲ್ಲೆಗಳಿಂದ ಬಂದಿರುವವರು ನೇರವಾಗಿ ಕ್ವಾರಂಟೈನ್‌ಗೆ ಒಳಪಡುವುದಿಲ್ಲ. ಆಶಾ ಕಾರ್ಯಕರ್ತರ ಮೂಲಕ ಮಾಹಿತಿ ಕಲೆ ಹಾಕುವ ಆರೋಗ್ಯ ಇಲಾಖೆ ಅವರನ್ನು ಕ್ವಾರೆಂಟೈನ್‌ಗೆ ಒಳಪಡಿಸಲು ಪೊಲೀಸರ ಸಹಾಯ ಕೇಳುತ್ತಾರೆ. ಹೀಗೆ ಕೆಲವರು ಕ್ವಾರೆಂಟೈನ್‌ಗೆ ಒಳಪಡಲು ಒಪ್ಪದಿದ್ದಾಗ ಪೊಲೀಸರು ಅನಿವಾರ್ಯವಾಗಿ ಕೈಹಿಡಿದಾದರೂ ಕರೆದುಕೊಂಡು ಬರಲೇಬೇಕಾಗುತ್ತದೆ. ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ, ವಲಸೆ ಕಾರ್ಮಿಕ ಪುನರ್ವಸತಿ ಕೇಂದ್ರ ಹೀಗೆ ಎಲ್ಲಾ ಕಡೆಗಳಲ್ಲೂ ಪೊಲೀಸರು ತಮ್ಮ ಕರ್ತವ್ಯಗಳನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಸರ್ಕಾರಿ ಅಧಿಕಾರಿಗಳು ದಿನವಡೀ ಸೇವೆಯಲ್ಲಿದ್ದರೆ, ಪೊಲೀಸರು ಹಗಲು-ರಾತ್ರಿಯೆನ್ನದೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಕರ್ತವ್ಯದಲ್ಲಿತ್ತಾರೆ. ಈ ನಡುವೆ ಅವರ ಮನೆಯವರ ಜೊತೆ ಕಾಲ ಕಳೆಯಲಾಗದೆ, ಮನೆಯವರಿಂದ ದೂರ ಉಳಿಯುವ ಪೊಲೀಸರ ವೈಯಕ್ತಿಕ ಬದುಕು ಕಣ್ಣೀರು ತರುತ್ತದೆ.
ನಿಜವಾಗಿಯೂ ಆ ದಿನ ಮನೆಗೆ ಹೋಗಲು ಮನಸಾಗಿಲ್ಲ!
ಲಾಕ್‌ಡೌನ್ ಆರಂಭದ ದಿನದಲ್ಲಿ ಲಾಡ್ಜ್‌ವೊಂದಕ್ಕೆ ಚೀನಾ ಮೂಲದ ವ್ಯಕ್ತಿ ಬಂದಿರುವ ಮಾಹಿತಿ ಬಂತು. ಕೂಡಲೇ ಕುಂದಾಪುರ ತಹಸೀಲ್ದಾರ್ ಜೊತೆ ಸ್ಥಳಕ್ಕೆ ತೆರಳಿದೆ. ಸಾಕಷ್ಟುಭಯವಿತ್ತು. ಆದರೂ ಕರ್ತವ್ಯನಿಷ್ಠೆಯಿಂದ ತೆರಳಿದೆ. ಆತನೊಂದಿಗೆ ಸಾಕಷ್ಟುಅಂತರ ಕಾಯ್ದುಕೊಂಡು ವಿಚಾರಿಸಿ ವೈದ್ಯಕೀಯ ಪರೀಕ್ಷೆ ನಡೆಸುವವರೆಗೂ ಅವನೊಂದಿಗೆ ಇದ್ದೆ. ನನಗೆ ಆ ದಿನ ಮನೆಗೆ ಹೋಗಲು ಮನಸಾಗಿಲ್ಲ. ಮಗು ಮಲಗಿದ ವಿಚಾರವನ್ನು ಫೋನ್‌ನಲ್ಲಿ ಖಾತರಿಪಡಿಸಿಕೊಂಡು ಭಯದಿಂದಲೇ ಮನೆಗೆ ಹೋದೆ ಎಂದು ಹರೀಶ್ ಆರ್ ನಾಯ್ಕ್ ಕೊರೋನಾ ಭಯದ ಕುರಿತು ವಿವರಿಸಿದ್ದಾರೆ.
ಲಾಕ್‌ಡೌನ್: ಬೆವರು ಸುರಿಸಿ ಬೆಳೆದ ಬೆಳೆ ಕದ್ದು ಮಾರುವ ಸ್ಥಿತಿ, ನಿಲ್ಲದ ಅನ್ನದಾತನ ಸಂಕಷ್ಟ..!
ಮಗ ಹುಟ್ಟಿದ ದಿನದಿಂದಲೂ ಆತನೊಂದಿಗೆ ಹೆಚ್ಚು ಕಾಲ ಕಳೆದಿಲ್ಲ. ಮಗನೊಂದಿಗೆ ಹೆಚ್ಚಿನ ಸಮಯ ಕಳೆಯಬೇಕೆಂದು ಮಗು ಹಾಗೂ ಪತ್ನಿಯನ್ನು ಊರಿನಿಂದ ಎರಡು ತಿಂಗಳ ಹಿಂದೆ ಕರೆದುಕೊಂಡು ಬಂದಿದ್ದೇನೆ. ಆದರೆ, ಮಗು ನನ್ನ ಬಳಿಯಿದ್ದರೂ ಆತನನ್ನು ಮುದ್ದಾಡಲು ಸಾಧ್ಯವಾಗುತ್ತಿಲ್ಲ. ಅವನು ಹತ್ತಿರ ಬಂದಾಗಲೆಲ್ಲಾ ಒಲ್ಲದ ಮನಸ್ಸಿನಿಂದಲೇ ಪತ್ನಿಯನ್ನು ಕರೆದು ಅವನನ್ನು ಕರೆದುಕೊಂಡು ಹೋಗುವಂತೆ ಹೇಳುತ್ತೇನೆ. ದೂರದಲ್ಲೇ ನಿಂತು ಅವನು ಆಟವಾಡುವುದನ್ನು ನೋಡಿ ಕರ್ತವ್ಯಕ್ಕೆ ತೆರಳುತ್ತೇನೆ ಎಂದು ಪಿಎಸ್‌ಐ ಹರೀಶ್ ಆರ್. ನಾಯ್ಕ್ ಹೇಳಿದ್ದಾರೆ.
-ಶ್ರೀಕಾಂತ ಹೆಮ್ಮಾಡಿ ಕುಂದಾಪುರ