Mysuru : ನ್ಯಾಯಾಲಯಗಳಿಗೆ ಹೋಗಿ ಬರಲು ಬಸ್‌ ಬಿಡಿ ಪ್ಲೀಸ್‌!

Published : Mar 24, 2023, 06:09 AM IST
Mysuru :  ನ್ಯಾಯಾಲಯಗಳಿಗೆ ಹೋಗಿ ಬರಲು ಬಸ್‌ ಬಿಡಿ ಪ್ಲೀಸ್‌!

ಸಾರಾಂಶ

  ನಗರದ ಚಾಮರಾಜಪುರಂ ಬಳಿ ಇರುವ ನ್ಯಾಯಾಲಯಗಳ ಆವರಣದಲ್ಲಿ ಒಟ್ಟು 21 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಜಯನಗರ ಮಳಲವಾಡಿಯಲ್ಲಿ ನೂತನ ನ್ಯಾಯಾಲಯಗಳ ಸಂಕೀರ್ಣದಲ್ಲಿ 20 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣಗಳನ್ನು ಬಿಟ್ಟರೆ ಅತಿ ಹೆಚ್ಚು ಜನರು ಬಂದು ಹೋಗುವುದು ನ್ಯಾಯಾಲಯಗಳಿಗೆ

 ಮೈಸೂರು :  ನಗರದ ಚಾಮರಾಜಪುರಂ ಬಳಿ ಇರುವ ನ್ಯಾಯಾಲಯಗಳ ಆವರಣದಲ್ಲಿ ಒಟ್ಟು 21 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಜಯನಗರ ಮಳಲವಾಡಿಯಲ್ಲಿ ನೂತನ ನ್ಯಾಯಾಲಯಗಳ ಸಂಕೀರ್ಣದಲ್ಲಿ 20 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣಗಳನ್ನು ಬಿಟ್ಟರೆ ಅತಿ ಹೆಚ್ಚು ಜನರು ಬಂದು ಹೋಗುವುದು ನ್ಯಾಯಾಲಯಗಳಿಗೆ.

ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣದಿಂದ ಮೈಸೂರಿನ ನ್ಯಾಯಾಲಯಗಳ ಮೂಲಕ ಹಾದು ಹೋಗಲು ವಿಶಾಲವಾದ ರಸ್ತೆಯೂ ಇದೆ. ಆದರೆ, ನ್ಯಾಯಾಲಯಗಳೆಂದರೆ ಕೆಎಸ್‌ಆರ್‌ಟಿಸಿಗೆ ಮೊದಲಿನಿಂದಲೂ ಅಸಡ್ಡೆ. ಅದಕ್ಕಾಗಿಯೇ ಸಿಟಿ ಬಸ್ಸುಗಳು ನ್ಯಾಯಾಲಯದೆಡೆಗೆ ಮುಖ ಮಾಡಲಾರವು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಲೆ ಹಾಕಿಯೂ ಮಲಗಲಾರರು.

ಮೈಸೂರು ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಂದ ಪ್ರತಿ ನಿತ್ಯ ಸಹಸ್ರರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನ್ಯಾಯಾಲಯಕ್ಕೆ ಹಾಜರಾಗಲು ಬರುತ್ತಾರೆ. ಆದರೆ ಅಂತಹವರಿಗೆ ಯಾವುದೇ ಬಸ್‌ ಸೌಲಭ್ಯ ಇಲ್ಲ. ಹೀಗಾಗಿ, ವಿವಿಧ ಊರುಗಳಿಂದ ನ್ಯಾಯಾಲಯಕ್ಕೆ ಬರುವ ಹಾಗೂ ನ್ಯಾಯಾಲಯದಿಂದ ಹೋಗುವ ಕಕ್ಷಿಗಾರರು, ಸಾಕ್ಷಿದಾರರು, ಸಾರ್ವಜನಿಕರು, ನ್ಯಾಯಾಲಯದ ಸಿಬ್ಬಂದಿ, ಪೊಲೀಸರು ಹಾಗೂ ವಕೀಲರು ಬೇರೆ ಮಾರ್ಗವಿಲ್ಲದೆ ಆಟೋಗಳನ್ನೇ ಅವಲಂಬಿಸುವಂತಾಗಿದೆ.

ಪ್ರತಿನಿತ್ಯ ಬಸ್‌ ನಿಲ್ದಾಣದಿಂದ ಹಾಗೂ ರೈಲು ನಿಲ್ದಾಣಗಳಿಂದ ವಿವೇಕಾನಂದನಗರ, ರಾಮಕೃಷ್ಣ ನಗರದ ಕಡೆಗೆ ಸಂಚರಿಸುವ ಬಸ್ಸುಗಳಲ್ಲಿ ಕೆಲವನ್ನು ಚಾಮರಾಜಪುರಂ ಬಳಿ ಇರುವ ನ್ಯಾಯಾಲಯದ ಮೂಲಕ ಮಳಲವಾಡಿಯ ನೂತನ ನ್ಯಾಯಾಲಯವನ್ನು ಹಾದುಹೋಗುವಂತೆ ಕ್ರಮ ಕೈಗೊಳ್ಳಬಹುದು. ಮಳಲವಾಡಿಯ ನೂತನ ನ್ಯಾಯಾಲಯದ ಎದುರು ಬಸ್‌ ಸಂಚರಿಸಲು ಸಾಧ್ಯವಾಗದಿದ್ದರೆ ಆದಿಚುಂಚನಗಿರಿ ರಸ್ತೆಯಲ್ಲಿರುವ ದೋಸಾ ಪಾಯಿಂಟ್‌ ಬಳಿ ಬಸ್‌ ನಿಲುಗಡೆಗೆ ಅವಕಾಶ ಕಲ್ಪಿಸಬಹುದು.

ಚಾಮರಾಜಪುರಂ ಬಳಿ ಇರುವ ನ್ಯಾಯಾಲಯದ ಎದುರು ಹಾಗೂ ಮಳಲವಾಡಿಯ ನ್ಯಾಯಾಲಯದ ಬಳಿ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಿ ಅವುಗಳಿಗೆ ನ್ಯಾಯಾಲಯದ ತಂಗುದಾಣ ಎಂದು ಹೆಸರಿಡಬಹುದು. ಹಾಗೆಯೇ ನ್ಯಾಯಾಲಯದ ಕಡೆಗೆ ಹೋಗುವ ಬಸ್‌ ಬರುವ ಸ್ಥಳವನ್ನು ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣದ ಬಳಿ ಫಲಕ ಅಳವಡಿಸುವ ಮೂಲಕ ಸಾರ್ವಜನಿಕರ ಗಮನಕ್ಕೆ ಬರುವಂತೆ ಮಾಡಬೇಕು.

 ಬೆಳಗ್ಗೆ 10 ರಿಂದ 10.30ರ ಅವಧಿಯಲ್ಲಿ ಮೈಸೂರು ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ಈ ಎರಡೂ ನ್ಯಾಯಾಲಯಗಳ ಬಳಿಗೆ ಬರುವಂತೆ ಹಾಗೂ ಸಂಜೆ 5 ರಿಂದ 6 ಗಂಟೆಯ ಅವಧಿಯಲ್ಲಿ ನ್ಯಾಯಾಲಯದಿಂದ ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣದ ಕಡೆಗೆ ಬಸ್ಸುಗಳ ಸೌಲಭ್ಯ ಒದಗಿಸಿದರೆ ನ್ಯಾಯ ಕೋರಿ ಬರುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಅಲ್ಲದೆ, ನ್ಯಾಯಾಲಯಗಳಿಗೆ ಬರುವ ಸಾಕ್ಷಿದಾರರಿಗೆ, ಕಕ್ಷಿಗಾರರಿಗೆ, ಸಿಬ್ಬಂದಿ, ಪೊಲೀಸರಿಗೆ ಹಾಗೂ ವಕೀಲರಿಗೂ ಅನುಕೂಲವಾಗುತ್ತದೆ. ಈ ವಿಚಾರವಾಗಿ ಸಾರಿಗೆ ಇಲಾಖೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ. ಸಾರಿಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ನ್ಯಾಯಾಲಯವೇ ಚಾಟಿ ಬೀಸಿ ಎಚ್ಚರಿಸಬೇಕಿದೆ.

- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು

PREV
Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್