ಕಬ್ಬು ಬಾಕಿ ಹಣ ಕೊಡಿಸುವಂತೆ ಮತ್ತು ಕಬ್ಬಿಗೆ ಹೆಚ್ಚುವರಿ ದರ ನಿಗದಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರು ನಿವಾಸದ ಬಳಿ ಗುರುವಾರ ಪ್ರತಿಭಟಿಸಲು ಯತ್ನಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರನ್ನು ಪೊಲೀಸರು ಬಂಧಿಸಿದರು.
ಮೈಸೂರು: ಕಬ್ಬು ಬಾಕಿ ಹಣ ಕೊಡಿಸುವಂತೆ ಮತ್ತು ಕಬ್ಬಿಗೆ ಹೆಚ್ಚುವರಿ ದರ ನಿಗದಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರು ನಿವಾಸದ ಬಳಿ ಗುರುವಾರ ಪ್ರತಿಭಟಿಸಲು ಯತ್ನಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರನ್ನು ಪೊಲೀಸರು ಬಂಧಿಸಿದರು.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಟಿ.ಕೆ. ಬಡಾವಣೆಯಲ್ಲಿರುವ ಅವರ ನಿವಾಸದ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಿದ್ದರಾಮಯ್ಯ ಅವರ ನಿವಾಸದ ಬಳಿ ತೆರಳಲು ಮುಂದಾದ ನೂರಾರು ರೈತರನ್ನು ಪೊಲೀಸರು ತಡೆದರು.
ಈ ವೇಳೆ ಆಕ್ರೋಶಗೊಂಡ ರಸ್ತೆ ಮಧ್ಯೆಯೇ ಕುಳಿತು ಪ್ರತಿಭಟಿಸಲು ಮುಂದಾದರು. ಇದರಿಂದ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ನಾವು ಜಿಲ್ಲಾಡಳಿತ, ಪೊಲೀಸ್ ಆಯುಕ್ತರಿಗೆ ಒಂದು ವಾರ ಮೊದಲೇ ಧರಣಿ ನಡೆಸುವ ಮನವಿ ಸಲ್ಲಿಸಿದ್ದೇವು. ಆದರೂ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಯಾವ ಕಾರಣಕ್ಕೆ ನೀಡಿಲ್ಲ ಎಂದು ಸ್ಪಷ್ಟವಾಗಿ ಲಿಖಿತವಾಗಿ ತಿಳಿಸಬೇಕು. ಇಲ್ಲದಿದ್ದರೆ ನಾವು ಇಲ್ಲೇ ಇರುತ್ತೇವೆ. ನ್ಯಾಯಾಧೀಶರ ಮುಂದೆ ಕರೆದುಕೊಂಡು ಹೋಗಿ, ಜೈಲಿಗೆ ಕಳುಹಿಸಿ ಎಂದು ಪಟ್ಟು ಹಿಡಿದರು. ಆದರೆ, ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು. ಬಳಿಕ ಸಿಎಆರ್ ಮೈದಾನದಲ್ಲಿ ಬಿಡುಗಡೆ ಮಾಡಿದರು.
ರೈತರ ಮೂಗಿಗೆ ತುಪ್ಪ
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಜನಪ್ರತಿನಿಧಿಗಳು ದನ ಕಾಯುವ ಆಡಳಿತ ನಡೆಸುತ್ತಿದ್ದು, ರೈತರ ಮೂಗಿಗೆ ತುಪ್ಪ ಸವರುವ ನಾಟಕ ಮಾಡುತ್ತಿದ್ದಾರೆ. ತಮ್ಮ ಕ್ಷೇತ್ರದ ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ನ್ಯಾಯ ಕೂಡಿಸಲು ಸಾಧ್ಯವಾಗದ ಮುಖ್ಯಮಂತ್ರಿ ರಾಜ್ಯದ ಕಬ್ಬು ಬೆಳೆಗಾರರಿಗೆ ಹೇಗೆ ನ್ಯಾಯ ಕೊಡಿಸುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯದ ಬಹುತೇಕ ಕಾರ್ಖಾನೆಗಳು ಈಗಾಗಲೇ ಹೆಚ್ಚುವರಿ ದರ ಘೋಷಣೆ ಮಾಡಿ ರೈತರಿಗೆ ನೀಡುತ್ತಿವೆ. ಅದಕ್ಕಾಗಿ ಧರಣಿ ನಡೆಸಲು ಪ್ರಯತ್ನಿಸಿದರೆ ಪೊಲೀಸ್ ಬಲದ ಮೂಲಕ ಹತ್ತಿಕುವ ಕಾರ್ಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕಳೆದ ಸಾಲಿನಲ್ಲಿ ನಿಗದಿ ಮಾಡಿದ್ದ ಕಬ್ಬಿನ ಹೆಚ್ಚುವರಿ ದರ ಟನ್‌ರೂ. ಕೊಡಿಸಬೇಕು. ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಇಳುವರಿ ಕಡಿಮೆಯಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಟನ್3580 ರೂ. ಖರ್ಚಾಗುತ್ತಿದೆ. ಹೀಗಾಗಿ ದರ ಪರಿಷ್ಕರಿಸಿ ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕಬ್ಬಿನ ಇಳುವರಿ ಕಡಿಮೆಯಾಗಿ ಬೇರೆ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿಸುತ್ತಿವೆ. ಎಫ್.ಆರ್.ಪಿಗಿಂತ 300 ರೂ. ಹೆಚ್ಚುವರಿ ದರ ನಿಗದಿ ಮಾಡಿವೆ. ಆದರೆ, ಬಣ್ಣಾರಿ ಸಕ್ಕರೆ ಕಾರ್ಖಾನೆ ಮಾತ್ರ ಹೆಚ್ಚು ದರ ನಿಗದಿ ಮಾಡದೆ ರೈತರ ಶೋಷಿಸುತ್ತಿದೆ ಎಂದು ಅವರು ದೂರಿದರು.
ಹೀಗಾಗಿ, ಮುಖ್ಯಮಂತ್ರಿಯವರು ತಮ್ಮ ಕ್ಷೇತ್ರದಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಸರ್ಕಾರದ ಆದೇಶ ಧಿಕ್ಕರಿಸಿರುವ ಕಾರಣ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಖದ್ದಮೆ ದಾಖಲಿಸಿ, ರೈತರ ಹಣ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರ ಕೂಡಲೇ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ 10 ಗಂಟೆಗಳ ವಿದ್ಯುತ್ ನೀಡಿ ರೈತರ ಆತ್ಮಹತ್ಯೆ ತಪ್ಪಿಸಬೇಕು. ಬರ ಪರಿಹಾರ ನೀಡಿ, ದನಕರುಗಳಿಗೆ ಮೇವು, ಕುಡಿಯುವ ನೀರು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯದರ್ಶಿ ಬರಡನಫುರ ನಾಗರಾಜ್, ಕಾರ್ಯಾಧ್ಯಕ್ಷ ಹಳ್ಳಿಕರೆಹುಂಡಿ ಬಾಗ್ಯರಾಜ್, ಮುಖಂಡರಾದ ಕಿರಗಸೂರು ಶಂಕರ್, ಕಮಲಮ್ಮ, ರಾಜಣ್ಣ, ಕುರುಬೂರು ಸಿದ್ದೇಶ್, ಹಾಡ್ಯ ರವಿ, ಲಕ್ಷ್ಮಿಪುರ ವೆಂಕಟೇಶ, ರಾಜಣ್ಣ, ಜಗದೀಶ್, ನೀಲಕಂಠಯ್ಯ, ಬೈರಪ್ಪ, ಮಂಜಣ್ಣ, ತೀರ್ಥಪ್ರಸಾದ್, ರವಿಕುಮಾರ್, ಮೂಕಳ್ಳಿ ಮಹದೇವಸ್ವಾಮಿ, ಶಿವಮೂರ್ತಿ, ನಾಗರಾಜ್, ರೂಪ, ರಾಣಿ, ಮಹಾದೇವ, ರಂಗರಾಜ್, ಪ್ರಸಾದ್ ನಾಯಕ್, ಪ್ರದೀಪ್, ಗೌರಿಶಂಕರ್, ಕೆಜಿ ಗುರುಸ್ವಾಮಿ, ಅಂಬಳೆ ಮಂಜುನಾಥ್, ದೇವನೂರು ನಾಗೇಂದ್ರಸ್ವಾಮಿ, ಆಲತ್ತೂರು ಸಿದ್ದಲಿಂಗಪ್ಪ, ಮಾರ್ಬಳ್ಳಿ ನೀಲಕಂಠಪ್ಪ, ಕಾಟೂರು ಮಾದೇವಸ್ವಾಮಿ, ನಾಗೇಶ್, ಶ್ರೀಕಂಠ, ಸಿದ್ದರಾಮಯ್ಯ, ನಂಜುಂಡಿ, ಮಹಾದೇವಪ್ಪ, ರೇವಣ್ಣ, ಮಂಜುನಾಥ್, ಅರುಣ್ ಕುಮಾರ್, ಸುನಿಲ್ ಕುಮಾರ್, ಲಿಂಗರಾಜು, ರಾಜೇಶ್ ಮೊದಲಾದವರು ಇದ್ದರು.